ADVERTISEMENT

ಇಂದಿರಾ ಕ್ಯಾಂಟೀನ್: ಆಹಾರ ವಿತರಣೆಗೆ ಉತ್ತಮ ಪ್ರತಿಕ್ರಿಯೆ

ನಿತ್ಯ 3 ಲಕ್ಷ ಪೊಟ್ಟಣ ಹಂಚಲಿದೆ ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 12 ಮೇ 2021, 21:26 IST
Last Updated 12 ಮೇ 2021, 21:26 IST
ಸಂಪಂಗಿರಾಮನಗರದ ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರದ ‍ಪೊಟ್ಟಣ ಪಡೆಯಲು ಬುಧವಾರ ಸಾಲುಗಟ್ಟಿ ನಿಂತಿದ್ದ ಜನ–ಪ್ರಜಾವಾಣಿ ಚಿತ್ರ
ಸಂಪಂಗಿರಾಮನಗರದ ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರದ ‍ಪೊಟ್ಟಣ ಪಡೆಯಲು ಬುಧವಾರ ಸಾಲುಗಟ್ಟಿ ನಿಂತಿದ್ದ ಜನ–ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೋವಿಡ್‌ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಲಾಕ್‌ಡೌನ್‌ ವೇಳೆ ಊಟದ ಸಮಸ್ಯೆ ಎದುರಿಸುತ್ತಿರುವ ಬಡವರಿಗೆ ಇಂದಿರಾ ಕ್ಯಾಂಟೀನ್‌ ಮೂಲಕ ಆಹಾರದ ಪೊಟ್ಟಣಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮಕ್ಕೆ ಮೊದಲ ದಿನವೇ ಭಾರಿ ಬೇಡಿಕೆ ಬಂದಿದೆ. ಮೊದಲ ದಿನ ಬಿಬಿಎಂಪಿ 2.20 ಲಕ್ಷ ಆಹಾರದ ಪೊಟ್ಟಣಗಳನ್ನು ಬಡವರಿಗೆ ಹಂಚಿದೆ.

ಬಹುತೇಕ ಇಂದಿರಾ ಕ್ಯಾಂಟೀನ್‌ಗಳ ಬಳಿಯೂ ಜನ ಉಚಿತ ಆಹಾರದ ಪೊಟ್ಟಣಗಳನ್ನು ಪಡೆಯಲು ಸಾಲುಗಟ್ಟಿ ನಿಂತಿದ್ದರು. ಬೆಳಿಗ್ಗ ಉಪಾಹಾರಕ್ಕೆ ವೆಜ್‌ ಪಲಾವ್‌, ಮಧ್ಯಾಹ್ನದ ಊಟಕ್ಕೆ ಅನ್ನ ಸಾಂಬಾರ್‌ ಹಾಗೂ ರಾತ್ರಿ ಊಟಕ್ಕೆ ರೈಸ್‌ ಬಾತ್‌ ವಿತರಿಸಿತು.

ಉಚಿತ ಆಹಾರ ಪಡೆಯಲು ಆಧಾರ್‌ ಕಾರ್ಡ್‌, ಮತದಾರರ ಚೀಟಿ ಅಥವಾ ಯಾವುದಾದರೂ ಗುರುತಿನ ಚೀಟಿ ತೋರಿರಸುವುದನ್ನು ಬಿಬಿಎಂಪಿ ಕಡ್ಡಾಯ ಮಾಡಿತ್ತು. ಅವರು ಗುರುತಿನ ಚೀಟಿ ತೋರಿಸಿ ಆಹಾರ ಪಡೆದ ಫೋಟೊ ದಾಖಲೆ ಇಟ್ಟುಕೊಳ್ಳುವಂತೆಯೂ ಬಿಬಿಎಂಪಿ ಅಧಿಕಾರಿಗಳು ಕ್ಯಾಂಟೀನ್‌ಗಳಲ್ಲಿ ಆಹಾರ ವಿತರಿಸುವ ಸಿಬ್ಬಂದಿಗೆ ಸೂಚಿಸಿದ್ದರು. ಇದಕ್ಕೆ ಜನರಿಂದ ವಿರೋಧ ವ್ಯಕ್ತವಾಗಿತ್ತು. ‘ಫೋಟೊ ತೆಗೆಯುವುದಾದರೆ ನಿಮ್ಮ ಆಹಾರ ಬೇಡ’ ಎಂದು ಅನೇಕರು ವಾಪಸ್‌ ಹೋಗಿದ್ದರು. ಬೀದಿ ಬದಿಯ ನಿರ್ಗತಿಕರಲ್ಲಿ ಯಾವುದೇ ಗುರುತಿನ ಚೀಟಿ ಇರಲಿಲ್ಲ. ಆಹಾರ ಪಡೆಯಲು ಬಂದ ಹೆಚ್ಚಿನವರು ಗುರುತಿನ ಚೀಟಿ ತಂದಿರಲಿಲ್ಲ. ಯಾರೂ ಉಚಿತ ಆಹಾರದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಈ ನಿಯಮವನ್ನು ಬಿಬಿಎಂಪಿ ಸಡಿಲಿಸಿದೆ.

ಇನ್ನು ಮುಂದೆ ಆಹಾರ ಪೊಟ್ಟಣ ಪಡೆಯಲು ಗುರುತಿನ ಚೀಟಿ ಕಡ್ಡಾಯವಲ್ಲ. ಅರ್ಹ ಫಲಾನುಭವಿಗಳು ಗುರುತಿನ ಚೀಟಿ ತೊರಿಸದೆಯೇ ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರದ ಪೊಟ್ಟಣಗಳನ್ನು ಉಚಿತವಾಗಿ ಪಡೆಯಬಹುದು ಎಂದು ಬಿಬಿಎಂಪಿಯ ಮುಖ್ಯ ಆಯುಕ್ತ ಗೌರವ್‌ ಗುಪ್ತ ಸ್ಪಷ್ಟಪಡಿಸಿದ್ದಾರೆ.

ಬೆಳಿಗ್ಗೆಯೇ ಸಾಲು: ಕ್ಯಾಂಟೀನ್‌ಗಳ ಮುಂದೆ ಬಳಿಗ್ಗೆ ಎಂಟು ಗಂಟೆಗೇ ಜನರ ಸಾಲು ಕಂಡು ಬಂತು. ಆಹಾರ ಪಡೆಯುವವರು ಅಂತರ ಕಾಪಾಡಿರಲಿಲ್ಲ. ಆದರೆ, ಗುಂಪು ಗೂಡಿರಲಿಲ್ಲ. ಸಾಲಿನಲ್ಲಿ ಬಂದವರಿಗಷ್ಟೇ ಸಿಬ್ಬಂದಿ ಆಹಾರ ವಿತರಿಸಿದರು.

‘ಬಡವರ್ಗದ ಜನರು, ವಲಸಿಗರು, ಕೂಲಿ ಕಾರ್ಮಿಕರಿಗೆ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ, ಆಹಾರ ಪೊಟ್ಟಣಗಳನ್ನು ಉಚಿತವಾಗಿ ವಿತರಿಸಿದ್ದೇವೆ. ಈ ಹಿಂದೆ 250ರಿಂದ 300 ಊಟ ಮಾರಾಟವಾಗುತ್ತಿದ್ದ ಕ್ಯಾಂಟೀನ್‌ಗಳಲ್ಲಿ ಇಂದು 500ರಿಂದ 600ರಷ್ಟು ಆಹಾರದ ಪೊಟ್ಟಣಗಳನ್ನು ವಿತರಿಸಲಾಗಿದೆ. ಕೆಲವು ಕ್ಯಾಂಟೀನ್‌ಗಳಲ್ಲಿ ಆಹಾರ ಪೊಟ್ಟಣಗಳು ಉಳಿದಿದ್ದವು. ಅವುಗಳನ್ನು ಹೆಚ್ಚು ಬೇಡಿಕೆ ಇದ್ದ ಕ್ಯಾಂಟೀನ್‌ಗಳಿಗೆ ಸಾಗಿಸಿ ಅಲ್ಲಿ ವಿತರಿಸಿದ್ದೇವೆ. ತಯಾರಿಸಿದ ಆಹಾರ ವ್ಯರ್ಥವಾಗುವುದಕ್ಕೆ ಅವಕಾಶ ನೀಡಿಲ್ಲ’ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸಂಜೆ ವೇಳೆ ನಗರಾದ್ಯಂತ ದಿಢೀರ್‌ ಮಳೆಯಾಗಿದ್ದರಿಂದ ಆಹಾರ ಪೊಟ್ಟಣ ವಿತರಣೆಗೆ ಅಡ್ಡಿ ಉಂಟಾಯಿತು. ‘ಮಳೆ ಬಂದಿದ್ದರಿಂದ ರಾತ್ರಿ ಊಟ ಪಡೆಯಲು ಜನ ಇಂದಿರಾ ಕ್ಯಾಂಟೀನ್‌ಗಳಿಗೆ ಬರಲು ಅಷ್ಟಾಗಿ ಆಸಕ್ತಿ ತೊರಿಸಿಲ್ಲ. ಸಿದ್ಧಪಡಿಸಿದ ಆಹಾರವನ್ನು ಸಮೀಪದ ವಸತಿ ಪ್ರದೇಶಗಳಿಗೆ ತೆರಳಿ ಬಡವರಿಗೆ ವಿತರಿಸುವಂತೆ ಸೂಚಿಸಿದ್ದೇವೆ. ರಾತ್ರಿ ವೇಳೆ ಯಾವಾಗಲೂ ಆಹಾರಕ್ಕೆ ಬೇಡಿಕೆ ಕಡಿಮೆ ಇರುತ್ತದೆ. ಹಾಗಾಗಿ ಮಧ್ಯಾಹ್ನ ತಯಾರಿಸಿದ ಅರ್ಧದಷ್ಟು ಆಹಾರವನ್ನು ಮಾತ್ರ ರಾತ್ರಿ ಊಟಕ್ಕೆ ತಯಾರಿಸಿದ್ದೆವು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಆಹಾರದ ಉಚಿತ ವಿತರಣೆ ಮೇ 24ರವರೆಗೆ ಮುಂದುವರಿಯಲಿದೆ.

ರುಚಿ ಸವಿದ ಮುಖ್ಯ ಆಯುಕ್ತ
ಧರ್ಮರಾಯಸ್ವಾಮಿ ವಾರ್ಡ್ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ ಅಡುಗೆ ಮನೆಗೆ ಬುಧವಾರ ಭೇಟಿ ನೀಡಿದ ಗೌರವ್‌ ಗುಪ್ತ ಆಹಾರದ ರುಚಿಯನ್ನು ಸವಿದರು. ಇದೇ ರೀತಿಯ ರುಚಿಯನ್ನು ನಿತ್ಯವೂ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದರು.

‘ಅಡುಗೆ ಮನೆಯಲ್ಲಿ ಕೋವಿಡ್ ಹರಡುವಿಕೆ ನಿಯಂತ್ರಣ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಶುಚಿತ್ವ ಕಾಪಾಡಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

‘ನಗರದಲ್ಲಿ 15 ಇಂದಿರಾ ಕ್ಯಾಂಟೀನ್ ಅಡುಗೆ ಮನೆಗಳಿವೆ. ಅಲ್ಲಿಂದ ಕಂಟೈನರ್‌ಗಳ ಮೂಲಕ ಎಲ್ಲ ಕ್ಯಾಂಟೀನ್‌ಗಳಿಗೆ ಕೊಂಡೊಯ್ದು ಅಲ್ಲಿ ಪೊಟ್ಟಣಗಳನ್ನು ತಯಾರಿಸಿ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಒಂದು ಹೊತ್ತಿಗೆ 1 ಲಕ್ಷದಂತೆ ದಿನಕ್ಕೆ 3 ಲಕ್ಷ ಆಹಾರ ಪೊಟ್ಟಣಗಳನ್ನು ವಿತರಿಸಲಿದ್ದೇವೆ’ ಎಂದು ವಿವರಿಸಿದರು.

ಚಿಕ್ಕಪೇಟೆ ವಾರ್ಡ್‌ನ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡದ ಅವರು ಆಹಾರ ಪೊಟ್ಟಣಗಳನ್ನು ವಿತರಿಸುವುದನ್ನು ಪರಿಶೀಲಿಸಿದರು. ಜಂಟಿ ಆಯುಕ್ತ (ಹಣಕಾಸು) ವೆಂಕಟೇಶ್, ಮುಖ್ಯ ಆರೋಗ್ಯ ಅಧಿಕಾರಿ ಡಾ. ಬಿ.ಕೆ.ವಿಜಯೇಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.