ADVERTISEMENT

ಕಾಮಗಾರಿ ಗುಣಮಟ್ಟ ಪರಿಶೀಲನೆ ಮರೆತ ಬಿಬಿಎಂಪಿ!

ಪ್ರಧಾನ ಎಂಜಿನಿಯರ್‌ಗೆ ಷೋಕಾಸ್‌ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 20:16 IST
Last Updated 14 ಅಕ್ಟೋಬರ್ 2019, 20:16 IST
   

ಬೆಂಗಳೂರು: ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ನಡೆಸುವುದನ್ನು ‘ಮರೆತ’ ಬಿಬಿಎಂಪಿಗೆ ನಗರಾಭಿವೃದ್ಧಿ ಇಲಾಖೆಯು ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದೆ.ಪ್ರಧಾನ ಎಂಜಿನಿಯರ್‌ ಎಂ.ಆರ್. ವೆಂಕಟೇಶ್‌ ಅವರಿಗೆ ಈ ನೋಟಿಸ್‌ ನೀಡಲಾಗಿದೆ. 15 ದಿನದೊಳಗೆ ಲಿಖಿತ ಉತ್ತರ ನೀಡಲು ಇಲಾಖೆ ಸೂಚಿಸಿದೆ.

ಸರ್ಕಾರದ ಅನುದಾನದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಯನ್ನು ಪ್ರಧಾನ ಎಂಜಿನಿಯರ್‌ ನಡೆಸಿಲ್ಲ. ಈ ಕುರಿತು ಯಾವುದೇ ಸಭೆ ನಡೆಸದೆ, ಯೋಜನೆಗಳ ಪ್ರಗತಿಯ ಪರಾಮರ್ಶೆ ಕೂಡ ಮಾಡಿಲ್ಲ. ಗುಣಮಟ್ಟ ಪೂರ್ಣಗೊಂಡಿರುವ ಕಾಮಗಾರಿಗಳ ಬಗ್ಗೆ ಕೂಡ ಯಾವುದೇ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿಲ್ಲ. ಇದಕ್ಕೆ ಕಾರಣ ಕೊಡಿ ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ.

ವಿಭಾಗವೇ ವಿಸರ್ಜನೆ!: ಕಾಮಗಾರಿ ಗುಣಮಟ್ಟ ಪರಿಶೀಲಿಸುತ್ತಿದ್ದ ಗುಣನಿಯಂತ್ರಣ ವಿಭಾಗವನ್ನು ಸಹ ವಿಸರ್ಜಿಸಿ, ಈ ಜವಾಬ್ದಾರಿಯನ್ನು ವೆಂಕಟೇಶ್‌ ಅವರು ತಮ್ಮ ಅಧೀನಕ್ಕೆ ವರ್ಗಾಯಿಸಿಕೊಂಡಿರುವುದರ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿರುವ ಇಲಾಖೆ, ಸಾರ್ವಜನಿಕ ಆಸ್ತಿ ಸೃಜನೆಗೆ ನಿಗದಿಯಾಗಿದ್ದ ಅನುದಾನ ಅಪವ್ಯಯವಾಗಲು ಕಾರಣರಾಗಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.