ADVERTISEMENT

ವಿಶೇಷ ಲಸಿಕಾ ಅಭಿಯಾನ ಇಂದು: ಬಿಬಿಎಂಪಿಯ ವಾರ್ಡ್‌ನಲ್ಲಿ 10 ಕಡೆ ಸಿಗಲಿದೆ ಲಸಿಕೆ

ಬಿಬಿಎಂಪಿ: ವಿಶೇಷ ಲಸಿಕಾ ಅಭಿಯಾನ ಇಂದು l 5 ಲಕ್ಷ ಮಂದಿಗೆ ಲಸಿಕೆ ಹಾಕುವ ಗುರಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 20:15 IST
Last Updated 16 ಸೆಪ್ಟೆಂಬರ್ 2021, 20:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಬಿಬಿಎಂಪಿಯು ಶುಕ್ರವಾರ ಹಮ್ಮಿಕೊಂಡಿರುವ ವಿಶೇಷ ಅಭಿಯಾನದಲ್ಲಿ 5 ಲಕ್ಷ ಮಂದಿಗೆಕೋವಿಡ್‌ ಲಸಿಕೆ ಹಾಕಲು ಗುರಿ ನಿಗದಿಪಡಿಸಲಾಗಿದೆ. ಈ ಗುರಿ ಸಾಧನೆಗಾಗಿ ಪ್ರತಿ ವಾರ್ಡ್‌ನಲ್ಲಿ ಕನಿಷ್ಠ 10 ಲಸಿಕಾ ಕೇಂದ್ರಗಳನ್ನು ಆರಂಭಿಸಲು ಸಿದ್ಧತೆ ಮಾಡಿಕೊಂಡಿದೆ.

ಲಸಿಕಾ ಅಭಿಯಾನದ ಬಗ್ಗೆ ಮಾಹಿತಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ, ‘ಇದುವರೆಗೆ ವಾರ್ಡ್‌ನಲ್ಲಿ ಪಿಎಚ್‌ಸಿಯಲ್ಲಿ ಮಾತ್ರ ಲಸಿಕಾ ಕೇಂದ್ರವನ್ನು ಹೊಂದಿದ್ದೆವು. ವಾರ್ಡ್‌ನಲ್ಲಿ ಎರಡು ಅಥವಾ ಮೂರು ಕಡೆ ವಿಸ್ತರಣಾ
ಶಿಬಿರಗಳನ್ನು ಆಯೋಜಿಸುತ್ತಿದ್ದೆವು. ವಿಶೇಷ ಲಸಿಕಾ ಅಭಿಯಾನದ ಅಂಗವಾಗಿ ಶುಕ್ರವಾರ ಒಂದೊಂದು ವಾರ್ಡ್‌ನಲ್ಲೂ ಸರಾಸರಿ 10 ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತದೆ. ಅಭಿಯಾನವನ್ನು ಯಶಸ್ವಿಗೊಳಿಸಲು ಬಡಾವಣೆ ನಿವಾಸಿಗಳಕ್ಷೇಮಾಭಿವೃದ್ಧಿ ಸಂಘಗಳು, ಪ್ರತಿಷ್ಠಿತ ಸರ್ಕಾ‌ರೇತರ ಸಂಸ್ಥೆಗಳ ಜೊತೆ ಸೇರಿ ಕಾರ್ಯಕ್ರಮ ರೂಪಿಸಿದ್ದೇವೆ. ಖಾಸಗಿ ಆಸ್ಪತ್ರೆಗಳೂ ಈ ಅಭಿಯಾನದಲ್ಲಿ ಕೈಜೋಡಿಸಲಿವೆ’ಎಂದರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಅಭಿಯಾನದ ಸಲುವಾಗಿ ಒಟ್ಟು 2,178 ಲಸಿಕಾ ಕೇಂದ್ರಗಳನ್ನು ತೆರೆಯಲಾಗುತ್ತದೆ. ಈ ಕೇಂದ್ರಗಳಲ್ಲಿ ಬೆಳಿಗ್ಗೆ 8ರಿಂದ ರಾತ್ರಿವರೆಗೆ ಲಸಿಕೆ ಸಿಗಲಿದೆ. ವಿಸ್ತರಣಾ ಶಿಬಿರಗಳಲ್ಲಿ ಸಂಜೆ 5 ಗಂಟೆವರೆಗೆ ಲಸಿಕೆ ಲಭ್ಯ. ಕೋವಿಶೀಲ್ಡ್‌ ಅಥವಾ ಕೊವ್ಯಾಕ್ಸೀನ್‌ ಲಸಿಕೆ ಪಡೆಯಲು ಅವಕಾಶ ಕಲ್ಪಿಸಿದ್ದೇವೆ. ಅಭಿಯಾನಕ್ಕಾಗಿಯೇ 4 ಲಕ್ಷ ಕೋವಿಶೀಲ್ಡ್‌, 1 ಲಕ್ಷ ಕೊವ್ಯಾಕ್ಸಿನ್‌ ಲಸಿಕೆ ದಾಸ್ತಾನಿದೆ’ ಎಂದರು.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಅಭಿಯಾನ ಆಯೋಜಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತರು, ‘ವಿಶೇಷ ಅಭಿಯಾನ ಹಮ್ಮಿಕೊಳ್ಳುವುದು ರಾಜ್ಯ ಸರ್ಕಾರದ ನಿರ್ಣಯ.
ಅದನ್ನು ನಾವು ಅನುಷ್ಠಾನಗೊಳಿಸುತ್ತಿದ್ದೇವೆ. ಇದಕ್ಕೂ ಮುಂಚೆಯೇ ಯಲಹಂಕದಲ್ಲಿ ಬೃಹತ್‌ ಲಸಿಕಾ ಕೇಂದ್ರ ಆರಂಭಿಸಿದ್ದೇವೆ. ಅಲ್ಲಿಗೆ ಲಸಿಕೆ ಬಯಸಿ ಬರುವ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ. ಅದೇ ರೀತಿ ಮಲ್ಲೇಶ್ವರದಲ್ಲಿ ಸ್ಥಾಪಿಸಿರುವ ಬೃಹತ್‌ ಲಸಿಕೆ ಕೇಂದ್ರದಲ್ಲಿ ಶುಕ್ರವಾರದಿಂದ ಲಸಿಕೆ ನೀಡುವ ಕಾರ್ಯ ಆರಂಭವಾಗಲಿದೆ. ಇದೇ ರೀತಿ ಇನ್ನೂ ಅನೇಕ ಬೃಹತ್‌ ಲಸಿಕಾ ಕೇಂದ್ರ ಸ್ಥಾಪಿಸಲಿದ್ದೇವೆ’ ಎಂದರು.

‘ಬೆಂಗಳೂರಿನಲ್ಲಿ ಲಸಿಕೆ ಪಡೆಯುವ ಅರ್ಹತೆ ಹೊಂದಿರುವ ಶೇ 80ರಷ್ಟು ಮಂದಿ ಈಗಾಗಲೇ ಮೊದಲ ಡೊಸ್‌ ಪಡೆದಿದ್ದಾರೆ. ಮೊದಲ ಡೋಸ್‌ ಪಡೆಯಲು ಬಾಕಿ ಇರುವವರ ಸಂಖ್ಯೆ 19 ಲಕ್ಷ ಮಂದಿ ಮಾತ್ರ. ತಿಂಗಳ ಒಳಗೆ ನಾವು ಶೇ 100ರಷ್ಟು ಗುರಿ ಸಾಧನೆ ಮಾಡಲಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಲಸಿಕೆ ಪಡೆಯಲು ಕೆಲವರಿಗೆ ಹಿಂಜರಿಕೆ ಇತ್ತು. ಮೊದಲ ಡೋಸ್‌ ಪಡೆಯದವರ ಸಂಖ್ಯೆ ಹೆಚ್ಚು ಇರುವ ಪ್ರದೇಶಗಳಿಗೆ ಬಿಬಿಎಂಪಿ ಸಿಬ್ಬಂದಿ ಎನ್‌ಜಿಒ ಪ್ರತಿನಿಧಿಗಳ ಜೊತೆ ತೆರಳಿ ಸ್ಥಳೀಯ ಮುಖಂಡರು ಹಾಗೂ ಸಮುದಾಯದ ನಾಯಕರ ಮನವೊಲಿಸುವ ಕೆಲಸ ಮಾಡಿದ್ದಾರೆ. ಲಸಿಕೆಯ ಪ್ರಯೋಜನಗಳ ಬಗ್ಗೆ ಮನವರಿಕೆ ಮಾಡುತ್ತಿದ್ದಾರೆ’ಎಂದರು.

‘ನಗರದಲ್ಲಿ ಪ್ರಸ್ತುತ 385 ಕೋವಿಡ್‌ ರೋಗಿಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರ ನಿಗಾ ಘಟಕಗಳಲ್ಲಿ (ಐಸಿಯು) 32 ಮಂದಿ ಇದ್ದಾರೆ. ಇವರಲ್ಲಿ 25 ಮಂದಿ ಲಸಿಕೆಯನ್ನೇ ಪಡೆದಿಲ್ಲ. 7 ಮಂದಿ ಮೊದಲ ಡೋಸ್‌ ಮಾತ್ರ ಪಡೆದಿದ್ದರು. ಎರಡೂ ಡೋಸ್‌ ಪಡೆದ ಒಬ್ಬರೂ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿಲ್ಲ. ಲಸಿಕೆ ‍ಪಡೆದವರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುವ ಪ್ರಮೇಯ ಕಡಿಮೆ’ ಎಂದು ವಿವರಿಸಿದರು.

‘ಸಹಾಯವಾಣಿಗೆ (1533) ಕರೆ ಮಾಡಿದರೆ ಲಸಿಕಾ ಕೇಂದ್ರಗಳು ಎಲ್ಲಿವೆ ಎಂಬ ಮಾಹಿತಿ ನೀಡಲಾಗುತ್ತದೆ. ಪತ್ರಿಕೆಗಳಲ್ಲಿ ಜಾಹೀರಾತು ನೀಡಲಿದ್ದೇವೆ. ಅದರಲ್ಲಿ ಕ್ಯು.ಆರ್‌.ಕೋಡ್‌ ಸ್ಕ್ಯಾನ್‌ ಮಾಡಿ ಸಮೀಪದ ಲಸಿಕೆ ಕೇಂದ್ರದ ಮಾಹಿತಿ ಸಿಗಲಿದೆ’ ಎಂದು ವಿಶೇಷ ಆಯುಕ್ತ (ಆರೋಗ್ಯ) ಡಿ. ರಂದೀಪ್‌ ತಿಳಿಸಿದರು.

‘ಲಸಿಕೆ ಹಾಕಲು 2 ಸಾವಿರ ಸಿಬ್ಬಂದಿ ಹಾಗೂ 2 ಸಾವಿರ ಸಹಾಯಕರನ್ನು ನಿಯೋಜನೆ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಲಸಿಕೆ ಹಾಕಲು ನಿರ್ದೇಶನ ನೀಡಿದ್ದೇವೆ’
ಎಂದರು.

‘ಬೆಂಗಳೂರೇ ಮುಂದು’

‘ಮಹಾನಗರಗಳ ಪೈಕಿ ನವದೆಹಲಿಯ ಜನಸಂಖ್ಯೆ ನಮಗಿಂತ ದುಪ್ಪಟ್ಟು ಇದೆ. ಹಾಗಾಗಿ ಸಂಖ್ಯೆ ಆಧಾರದಲ್ಲಿ ಲಸಿಕೆ ಅಭಿಯಾನದಲ್ಲಿ ನವದೆಹಲಿ ಮುಂದಿದೆ. ಲಸಿಕೆ ಹಾಕಿದವರ ಶೇಕಡವಾರು ಪ್ರಮಾಣ ನೋಡಿದರೆ ನಾವು ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದೇವೆ’ ಎಂದು ಗೌರವ್‌ ಗುಪ್ತ ತಿಳಿಸಿದರು.

‘ಕೋವಿಡ್‌ ಲಸಿಕಾ ಅಭಿಯಾನ ಪೂರ್ಣಗೊಳಿಸಿ ಬೆಂಗಳೂರನ್ನು ಸುರಕ್ಷಿತ ನಗರವನ್ನಾಗಿ ರೂಪಿಸಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.