ADVERTISEMENT

ಕಳ್ಳಸಾಗಣೆದಾರರ ಪಾಲಿಗೆ 'ದಿ ಅಂಡರ್‌ಟೇಕರ್‌'ಆದ ಬೆಂಗಳೂರು ನಗರ ಪೊಲೀಸ್‌!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಸೆಪ್ಟೆಂಬರ್ 2021, 12:04 IST
Last Updated 21 ಸೆಪ್ಟೆಂಬರ್ 2021, 12:04 IST
ಬೆಂಗಳೂರು ಸಿಟಿ ಪೊಲೀಸ್‌ ಟ್ವೀಟ್‌ ಮಾಡಿರುವ ಮೀಮ್‌
ಬೆಂಗಳೂರು ಸಿಟಿ ಪೊಲೀಸ್‌ ಟ್ವೀಟ್‌ ಮಾಡಿರುವ ಮೀಮ್‌   

ಬೆಂಗಳೂರು: ಕಳ್ಳಸಾಗಣೆ ಮಾಡುವವರಿಗೆ ಬೆಂಗಳೂರು ನಗರ ಪೊಲೀಸರು ವರ್ಲ್ಡ್‌ ವ್ರೆಸ್ಲಿಂಗ್‌ ಎಂಟರ್‌ಟೈನ್ಮೆಂಟ್‌(ಡಬ್ಳ್ಯುಡಬ್ಳ್ಯುಇ)ನ ಸ್ಟಾರ್‌ 'ದಿ ಅಂಡರ್‌ ಟೇಕರ್‌'ನ ಅವತಾರ ಎತ್ತಿದ್ದಾರೆ.

ಟ್ವಿಟರ್‌ನಲ್ಲಿ ವಿಭಿನ್ನ ಪೋಸ್ಟ್‌ಗಳ ಮೂಲಕ ನಗರವಾಸಿಗಳನ್ನು ಸೆಳೆಯುತ್ತಿರುವ ಬೆಂಗಳೂರು ಸಿಟಿ ಪೊಲೀಸ್‌(ಬಿಸಿಪಿ) ಇದೀಗ ಅಂಡರ್‌ಟೇಕರ್‌ಗೆ ತಮ್ಮನ್ನು ಹೋಲಿಸಿಕೊಂಡು ಎಚ್ಚರಿಕೆ ನೀಡಿದ್ದಾರೆ.

ಕಳೆದ ವರ್ಷ ಜೂನ್‌ 26ರಂದು ದಿ ಡೆಡ್‌ಮ್ಯಾನ್‌ ಖ್ಯಾತಿಯ ಅಂಡರ್‌ಟೇಕರ್‌ ಮತ್ತು ದಿ ಫೀನೊಮಿನಲ್‌ ಖ್ಯಾತಿಯ ಎ.ಜೆ.ಸ್ಟೈಲ್‌ ನಡುವಣ ಬೋನಿಯಾರ್ಡ್‌ ಕುಸ್ತಿ ಪಂದ್ಯದ ಫೋಟೊ ಒಂದನ್ನು ಬಿಸಿಪಿ ಪೋಸ್ಟ್‌ ಮಾಡಿದೆ. ಈ ಮೂಲಕ ಕಳ್ಳಸಾಗಣೆದಾರರಿಗೆ ಚೋಕ್‌ಸ್ಲಾಮ್‌ ಹಾಕಲು ಬಿಸಿಪಿ ಹಿಂದೆಯೇ ನಿಂತಿರುವ ಸಂದೇಶ ನೀಡಿದೆ.

ADVERTISEMENT

ನಗರದಲ್ಲಿ ಕಳ್ಳಸಾಗಣೆಯಂತಹ ಕೃತ್ಯಗಳನ್ನು ಒಡನೆಯೇ ಹತೋಟಿಗೆ ತರುತ್ತಿದ್ದೇವೆ ಎಂದು ಟ್ವೀಟ್‌ ಮಾಡಿರುವ ಬಿಸಿಪಿ, 'ಹಾಗಿದ್ದೂ ಕಳ್ಳಸಾಗಣೆಗೆ ಯತ್ನಿಸುತ್ತೀರಾ? ನಮಗೆ ಹೇಗೆ ಕಡಿವಾಣ ಹಾಕಬೇಕು ಎಂಬುದು ಗೊತ್ತಿದೆ' ಎಂದು ಮುನ್ನೆಚ್ಚರಿಕೆ ರವಾನಿಸಿದ್ದಾರೆ.

ಪಂದ್ಯದಲ್ಲಿ ಅಂಡರ್‌ಟೇಕರ್‌ಅನ್ನು ಸಮಾಧಿಯ ಗುಂಡಿಯೊಳಗೆ ಕೆಡವಿ, ಗೆದ್ದೆನೆಂದು ಎ.ಜೆ,ಸ್ಟೈಲ್‌ ಬೀಗುತ್ತಿರುವಾಗ ಹಿಂದಿನಿಂದ ಅವತರಿಸಿದ 'ಡೆಡ್‌ಮ್ಯಾನ್' ಚೋಕ್‌ಸ್ಲಾಮ್‌ ಹಾಕುವ ಮೂಲಕ ಅಭಿಮಾನಿಗಳಿಗೆ ಥ್ರಿಲ್‌ ನೀಡಿದ್ದರು.

ಎ.ಜೆ.ಸ್ಟೈಲ್‌ನ ಹಿಂದೆ ದೈತ್ಯನಂತೆ ನಿಂತಿರುವ ಅಂಡರ್‌ಟೇಕರ್‌ನ ಚಿತ್ರ ಬಳಸಿರುವ ಬಿಸಿಪಿ, 'ತಾನೊಬ್ಬ ಅತ್ಯುತ್ತಮ ಕಳ್ಳಸಾಗಣೆದಾರನೆಂದು ಯೋಚಿಸುತ್ತಿದ್ದರೆ, ಬೆನ್ನ ಹಿಂದೆಯೇ ಹಿಡಿದುಹಾಕಲು ಬಿಸಿಪಿ ನಿಂತಿರುತ್ತದೆ' ಎಂದು ಮೀಮ್‌ ಸೃಷ್ಟಿಸಿದೆ. ಬಿಸಿಪಿ ಸೃಜನ ಶೀಲತೆಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ಚೋಕ್‌ಸ್ಲಾಮ್‌: ವೃತ್ತಿನಿರತಕುಸ್ತಿಪಟುಗಳು ಎದುರಾಳಿಯ ಕುತ್ತಿಗೆಯನ್ನು ಬಲವಾಗಿ ಹಿಡಿದು ಮೇಲೆತ್ತಿ, ನೆಲಕ್ಕೆ ಅಪ್ಪಳಿಸುವುದಕ್ಕೆ ಚೋಕ್‌ಸ್ಲಾಮ್‌ ಎನ್ನಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.