ADVERTISEMENT

ದೊಡ್ಡಕಲ್ಲಸಂದ್ರ ಕೆರೆ: ಜೀವ ವೈವಿಧ್ಯಕ್ಕೆ ಕುತ್ತು?

ಸ್ಥಳೀಯರ ಮನವಿಗೆ ಕಿವಿಗೊಡದೆ ಗಿಡ–ಮರ ಕಡಿದರು

ಪ್ರವೀಣ ಕುಮಾರ್ ಪಿ.ವಿ.
Published 13 ಜುಲೈ 2020, 5:16 IST
Last Updated 13 ಜುಲೈ 2020, 5:16 IST
ದೊಡ್ಡಕಲ್ಲಸಂದ್ರ ಕೆರೆ
ದೊಡ್ಡಕಲ್ಲಸಂದ್ರ ಕೆರೆ   

ಬೆಂಗಳೂರು: ನೂರಾರು ಮರಗಳು, ಪಕ್ಕಿಗಳು, ಚಿಟ್ಟೆಗಳು ಸೇರಿದಂತೆ ಒಟ್ಟು 218 ಪ್ರಭೇದಗಳಷ್ಟು ಸಮೃದ್ಧ ಜೀವವೈವಿಧ್ಯ ತಾಣವಾಗಿದ್ದ ದೊಡ್ಡಕಲ್ಲಸಂದ್ರ ಕೆರೆಯು ಬಿಬಿಎಂಪಿ ಕೈಗೊಂಡಿರುವ ಅಭಿವೃದ್ಧಿಯ ಕಾರಣದಿಂದಾಗಿಯೇ ಅಪಾಯ ಎದುರಿಸುತ್ತಿದೆ.

ಸ್ಥಳೀಯರು, ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರಮುಖರು ಸೇರಿ ದೊಡ್ಡಕಲ್ಲಸಂದ್ರ ಕೆರೆ ಸಂರಕ್ಷಣಾ ಸಮಿತಿಯನ್ನು ರಚಿಸಿಕೊಂಡು ಈ ಜಲಕಾಯವನ್ನು ನೈಸರ್ಗಿಕವಾಗಿ ಉಳಿಸಿಕೊಳ್ಳಲು 3–4ವರ್ಷಗಳಿಂದ ಶ್ರಮಿಸುತ್ತಿದ್ದಾರೆ. ಎರಡು ವರ್ಷಗಳಲ್ಲಿ 250 ಹೆಚ್ಚು ಸಸಿಗಳನ್ನು ಈ ಕೆರೆಯ ಪರಿಸರದಲ್ಲಿ ಬೆಳೆಸಿದ್ದಾರೆ. ಈ ನಡುವೆ, ಈ ಕೆರೆಯನ್ನು ಅಭಿವೃದ್ಧಿಪಡಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ.

ಈ ವಿಚಾರ ತಿಳಿದ ಸಮಿತಿಯವರು ಈ ಕೆರೆಯ ಸಮೃದ್ಧ ಜೀವವೈವಿಧ್ಯದ ಕುರಿತ ವರದಿಯನ್ನು ಮೇಯರ್‌ ಎಂ.ಗೌತಮ್‌ ಕುಮಾರ್‌ ಅವರಿಗೆ ಹಾಗೂ ಕೆರೆ ವಿಭಾಗದ ಅಧಿಕಾರಿಗಳಿಗೆ ಜೂನ್‌ 25ರಂದು ನೀಡಿದ್ದರು. ಕೆರೆ ಅಭಿವೃದ್ಧಿಪಡಿಸುವುದಾದರೆ ಸುತ್ತಲಿನ ಗಿಡಮರಗಳನ್ನು ಉಳಿಸಿಕೊಂಡು ಜೀವವೈವಿಧ್ಯಕ್ಕೆ ಧಕ್ಕೆ ಉಂಟಾಗದಂತೆ ಎಚ್ಚರವಹಿಸಬೇಕೆಂದು ಕೋರಿದ್ದರು. ಇದಾಗಿ ತಿಂಗಳು ಕೂಡಾ ಕಳೆದಿಲ್ಲ. ಅಷ್ಟರಲ್ಲೇ, ಈ ಕೆರೆಯ ಸುತ್ತ ಬೆಳೆದಿದ್ದ ಬಿದಿರು, ಗಿಡಮರಗಳನ್ನು ಜೆಸಿಬಿ ತಂದು ಮಟ್ಟ ಮಾಡಲಾಗಿದೆ. ಸ್ಥಳೀಯರು ನೆಟ್ಟು ಬೆಳೆಸಿದ ಗಿಡಗಳನ್ನೂ ನಾಶಪಡಿಸಲಾಗಿದೆ.

ADVERTISEMENT

ಬಿಬಿಎಂಪಿ ಈ ಕೆರೆಯಲ್ಲಿ 2009ರಿಂದ 2012ರ ನಡುವೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿತ್ತು. ಏರಿಗಳನ್ನು ಬಲಪಡಿಸಿತ್ತು. ಇದರಲ್ಲಿ ದ್ವೀಪಗಳ ನಿರ್ಮಾಣ ಮಾಡಿತ್ತು. ಆದರೆ, ಕೊಳಚೆ ನೀರು ಸೇರದಂತೆ ತಡೆಯುವ ಕಾಮಗಾರಿ ಮಾಡಿರಲಿಲ್ಲ. ಹಾಗಾಗಿ ಕೊಳಚೆ ನೀರು ಸೇರಿ ಕೆರೆ ಕಲುಷಿತಗೊಂಡಿದೆ. ಈಗ ಮತ್ತೆ ಪಾಲಿಕೆ ಕೆರೆಯಂಗಳ ಅಭಿವೃದ್ಧಿ, ಮುಖ್ಯ ಏರಿಗಳನ್ನು ಬಲಪಡಿಸುವುದು, ಕೊಳಚೆ ನೀರು ಸೇರದಂತೆ ತಡೆಯಲು ಪ್ರತ್ಯೇಕ ಕಾಲುವೆ ನಿರ್ಮಾಣ, ತಡೆಬೇಲಿ ನಿರ್ಮಾಣ ಮುಂತಾದ ಕಾಮಗಾರಿಗಳನ್ನು ₹ 5.93 ಕೋಟಿ ವೆಚ್ಚದಲ್ಲಿ ನಡೆಸಲು ಮುಂದಾಗಿದೆ. ಯೋಗಾಭ್ಯಾಸಕ್ಕಾಗಿ ₹ 42 ಲಕ್ಷ ವೆಚ್ಚದಲ್ಲಿ ವೇದಿಕೆಯೊಂದನ್ನೂ ನಿರ್ಮಿಸಲಿದೆ.

‘ಕೆರೆ ಅಭಿವೃದ್ಧಿಗೆ ನಮ್ಮ ತಕರಾರಿಲ್ಲ. ಆದರೆ, ಇಲ್ಲಿನ ಜೀವವೈವಿಧ್ಯಕ್ಕೆ ಧಕ್ಕೆ ಆಗಬಾರದು ಎಂಬುದಷ್ಟೇ ನಮ್ಮ ಕಳಕಳಿ. ಜಲಕಾಯಕ್ಕೆ ಕೊಳಚೆ ನೀರು ಸೇರುವುದನ್ನು ತಡೆದು, ಇಲ್ಲಿನ ಸಹಜ ಪರಿಸರವನ್ನು ಹಾಗೆಯೇ ಉಳಿಸಿಕೊಳ್ಳಲಿ. ಯೋಗ ವೇದಿಕೆ ನಿರ್ಮಿಸುವಂತೆ ನಾವ್ಯಾರೂ ಕೇಳಿಲ್ಲ. ಇದರ ನಿರ್ಮಾಣಕ್ಕಾಗಿಯೇ ಸಾಕಷ್ಟು ಗಿಡ–ಮರಗಳು ನಾಶವಾಗುತ್ತವೆ’ ಎಂದು ಸ್ಥಳೀಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಮೃದ್ಧ ಜೀವವೈವಿಧ್ಯದ ತಾಣ

ದೊಡ್ಡಕಲ್ಲಸಂದ್ರ ಕೆರೆಯ ಜೀವವೈವಿಧ್ಯದ ಬಗ್ಗೆ ಆ್ಯಕ್ಷನ್‌ ಏಯ್ಡ್‌ ಸಂಸ್ಥೆಯ ಮುಂದಾಳತ್ವದಲ್ಲಿ ಸಮೀಕ್ಷೆ ನಡೆಸಲಾಗಿದೆ. ಪಕ್ಷಿ ವಿಜ್ಞಾನಿಗಳು, ಪಕ್ಷಿ ವೀಕ್ಷಕರು, ಸಸ್ಯ ವಿಜ್ಞಾನಿಗಳು ಇದಕ್ಕಾಗಿ ವರ್ಷಗಟ್ಟಲೆ ಕೆಲಸ ಮಾಡಿದ್ದಾರೆ. ಈ ಕೆರೆಯು ಅಪರೂಪದ ಗಿಡ ಮರಗಳು, ಔಷಧೀಯ ಸಸ್ಯಗಳ ತಾಣವಾಗಿರುವುದನ್ನು ಗುರುತಿಸಿದ್ದಾರೆ.

ಒಟ್ಟು 43 ಪ್ರಭೇದಗಳ 354ಕ್ಕೂ ಅಧಿಕ ಮರಗಳು, 42 ಪ್ರಭೇದಗಳ ಪೊದೆ ಜಾತಿಯ ಸಸ್ಯಗಳು, 38 ಪ್ರಭೇದಗಳ ಪಾತರಗಿತ್ತಿಗಳು, 95 ಪ್ರಭೇದಗಳ ಪಕ್ಷಿಗಳು ಈ ಕೆರೆಯ ಪರಿಸರದಲ್ಲಿ ಕಂಡು ಬಂದಿವೆ.

‘ಪರಿಸರ ಸಂರಕ್ಷಣೆಯ ಅಂತರರಾಷ್ಟ್ರೀಯ ಒಕ್ಕೂಟವು (ಐಯುಸಿಎನ್‌) ಅಪಾಯದ ಅಂಚಿನಲ್ಲಿದೆ ಎಂದು ಗುರುತಿಸಿರುವ ಎರಡು ಪಕ್ಷಿ ಪ್ರಭೇದಗಳು (ಕರಿತಲೆಯ ಐಬಿಸ್‌ ಮತ್ತು ಹಾವಕ್ಕಿ) ಹಾಗೂ 11 ಪ್ರಭೇದಗಳ ವಲಸೆ ಹಕ್ಕಿಗಳು ಇಲ್ಲಿ ಕಾಣಿಸಿವೆ. ಅಮೃತಬಳ್ಳಿ, ಕಳ್ಳಿಗಿಡ, ಕೆಂಪು ಬಸಳೆ, ಉತ್ತರಾಣಿ, ಎಕ್ಕ, ಆಡುಸೋಗೆ ಮುಂತಾದ ಔಷಧೀಯ ಸಸ್ಯಗಳು ಇಲ್ಲಿ ಕಂಡುಬಂದಿವೆ’ ಎಂದು ಆ್ಯಕ್ಷನ್‌ ಏಯ್ಡ್‌ ಸಂಸ್ಥೆಯ ರಾಘವೇಂದ್ರ ಪಚ್ಛಪುರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.