ADVERTISEMENT

ಸಾಂಸ್ಕೃತಿಕ ವಲಯದಲ್ಲಿ ಸಂಕುಚಿತ ಮನೋಭಾವ: ಜೆ.ಲೋಕೇಶ್

ನಾಟಕ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಜೆ.ಲೋಕೇಶ್ ಬೇಸರ *‘ಆರ್.ನಾಗೇಶ್‌ ರಂಗವಿಹಂಗಮ’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 4:38 IST
Last Updated 20 ಸೆಪ್ಟೆಂಬರ್ 2021, 4:38 IST
ಚಾರುಮತಿ ಪ್ರಕಾಶನ ನಗರದಲ್ಲಿ ಭಾನುವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ‘ಆರ್. ನಾಗೇಶ್ ರಂಗವಿಹಂಗಮ’ ಪುಸ್ತಕವನ್ನು ಟಿ.ಎಸ್. ನಾಗಾಭರಣ ಲೋಕಾರ್ಪಣೆ ಮಾಡಿದರು. ರಂಗಕರ್ಮಿಗಳಾದ ಕೆ.ವಿ. ನಾಗರಾಜ ಮೂರ್ತಿ, ಬಿ.ವಿ. ರಾಜಾರಾಮ್, ಶ್ರೀನಿವಾಸ್ ಜಿ. ಕಪ್ಪಣ್ಣ, ಎಚ್.ವಿ. ವೆಂಕಟಸುಬ್ಬಯ್ಯ, ಜೆ. ಲೋಕೇಶ್ ಹಾಗೂ ಶಶಿಧರ್ ಭಾರಿಘಾಟ್ ಇದ್ದರು – ಪ್ರಜಾವಾಣಿ ಚಿತ್ರ 
ಚಾರುಮತಿ ಪ್ರಕಾಶನ ನಗರದಲ್ಲಿ ಭಾನುವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ‘ಆರ್. ನಾಗೇಶ್ ರಂಗವಿಹಂಗಮ’ ಪುಸ್ತಕವನ್ನು ಟಿ.ಎಸ್. ನಾಗಾಭರಣ ಲೋಕಾರ್ಪಣೆ ಮಾಡಿದರು. ರಂಗಕರ್ಮಿಗಳಾದ ಕೆ.ವಿ. ನಾಗರಾಜ ಮೂರ್ತಿ, ಬಿ.ವಿ. ರಾಜಾರಾಮ್, ಶ್ರೀನಿವಾಸ್ ಜಿ. ಕಪ್ಪಣ್ಣ, ಎಚ್.ವಿ. ವೆಂಕಟಸುಬ್ಬಯ್ಯ, ಜೆ. ಲೋಕೇಶ್ ಹಾಗೂ ಶಶಿಧರ್ ಭಾರಿಘಾಟ್ ಇದ್ದರು – ಪ್ರಜಾವಾಣಿ ಚಿತ್ರ    

ಬೆಂಗಳೂರು: ‘ಸಾಂಸ್ಕೃತಿಕ ವಲಯದಲ್ಲಿ ಸಂಕುಚಿತ ಮನೋಭಾವ ಬೆಳೆಯುತ್ತಿದೆ. ಇದು ಕಲೆಯ ಬೆಳವಣಿಗೆಗೆ ತೊಡಕಾಗಿದೆ’ ಎಂದು ಕರ್ನಾಟಕ ನಾಟಕ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಜೆ.ಲೋಕೇಶ್ ಬೇಸರ ವ್ಯಕ್ತಪಡಿಸಿದರು.

ರಂಗಸಂಪದ, ಕಲಾಗಂಗೋತ್ರಿ, ರಂಗಚಂದಿರ ಹಾಗೂ ಭಾಗವತರು ಸಹಯೋಗದಲ್ಲಿ ಚಾರುಮತಿ ಪ್ರಕಾಶನ ನಗರದಲ್ಲಿ ಭಾನುವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ‘ಆರ್.ನಾಗೇಶ್‌ ರಂಗವಿಹಂಗಮ’ ಪುಸ್ತಕ ಬಿಡುಗಡೆ ಮಾಡಿ,ಎಚ್‌.ವಿ.ವೆಂಕಟಸುಬ್ಬಯ್ಯ ಅವರಿಗೆ ‘ರಂಗ ಗೌರವ’ ಸಲ್ಲಿಸಲಾಯಿತು.

‘ರಂಗಭೂಮಿಯವರು ಎಲ್ಲರೂ ಒಂದೇ ಎಂದು ಅಕಾಡೆಮಿ ಹಾಗೂ ಸರ್ಕಾರ ಪರಿಗಣಿಸಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ದೃಷ್ಟಿಕೋನಗಳು ಬದಲಾಗಿವೆ. ಈ ಹಿಂದೆ ಅಕಾಡೆಮಿ ಅಧ್ಯಕ್ಷನಾಗಿದ್ದಾಗ ರಂಗಭೂಮಿಯ ಇತಿಹಾಸದ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದೆ. ಅಂತಿಮ ಹಂತದಲ್ಲಿದ್ದ ಈ ಯೋಜನೆಯನ್ನು ಹಾಲಿ ಕಾರ್ಯಕಾರಿ ಸಮಿತಿಯು ಪೂರ್ಣಗೊಳಿಸುತ್ತದೆಯೋ ಇಲ್ಲವೋ ಎನ್ನುವುದು ತಿಳಿಯದಾಗಿದೆ’ ಎಂದರು.

ADVERTISEMENT

‘ಕನ್ನಡ ರಂಗಭೂಮಿಯಲ್ಲಿ ‘ಸುಬ್ಬಣ್ಣ’ ಎಂದೇ ಜನಪ್ರಿಯರಾಗಿರುವ ಎಚ್.ವಿ. ವೆಂಕಟಸುಬ್ಬಯ್ಯ ಅವರುಶ್ರದ್ಧೆ, ಗುರಿ ಮತ್ತು ಅಧ್ಯಯನಶೀಲತೆಯಿಂದ ಈ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದರು. ಅವರುಕನ್ನಡ ರಂಗಭೂಮಿಯ ಸಾಕ್ಷಿಪ್ರಜ್ಞೆ’ ಎಂದು ಜೆ. ಲೋಕೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.

ಮರು ಪ್ರದರ್ಶನ ನಡೆಯಲಿ: ಪುಸ್ತಕ ಲೋಕಾರ್ಪಣೆ ಮಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ‘70ರ ದಶಕದಲ್ಲಿ ರಂಗಭೂಮಿಯ ಬಗ್ಗೆ ಕನಸುಗಳನ್ನು ಕಾಣುತ್ತಿರುವ ವೇಳೆಅದಕ್ಕೆ ಪೂರಕವಾಗಿ ವೇದಿಕೆ ಸಿದ್ಧಮಾಡಿದವರು ಆರ್. ನಾಗೇಶ್.ರಂಗಭೂಮಿ ಸಾಹಿತ್ಯ ಬರೆಯುವ ಯಾವುದೇ ವ್ಯಕ್ತಿ ಅವರನ್ನು ಸೇರಿಸದೇ ಇರಲು ಸಾಧ್ಯವಿಲ್ಲ. ಅವರ ನಾಟಕಗಳ ಮರು ವ್ಯಾಖ್ಯಾನ ಆಗಬೇಕು. ಯಾವುದೇ ಒಂದು ರಂಗ ಪ್ರದರ್ಶನ ಮರು ಪ್ರದರ್ಶನ ಗೊಳ್ಳುತ್ತಾ ಹೋದರೆ ಮಾತ್ರ ಜೀವಂತ ಆಗಿ ಇರುತ್ತದೆ’ ಎಂದು ಹೇಳಿದರು.

ರಂಗಕರ್ಮಿಶ್ರೀನಿವಾಸ್ ಜಿ. ಕಪಣ್ಣ, ‘ನಾಗೇಶ್ ಅವರು ಮಾಡಿಸಿದ ‘ತುಘಲಕ್’ ನಾಟಕ ಹಲವರಿಗೆ ಹೆಸರು ತಂದುಕೊಟ್ಟಿತ್ತು. ರಂಗಭೂಮಿ ಇತಿಹಾಸದಲ್ಲಿ ಮಹತ್ತರವಾದ ಪ್ರಯೋಗಗಳನ್ನು ಅವರು ಮಾಡಿಸಿದರು. ವ್ಯವಸ್ಥೆಯ ವಿರುದ್ಧ ನಾಟಕಗಳನ್ನು ಮಾಡುತ್ತಾ ಹೋದರು.ರಂಗಭೂಮಿ ಇತಿಹಾಸದಲ್ಲಿಅವರ ಹೆಸರು ಚಿರಸ್ಥಾಯಿ’ ಎಂದರು.

ರಂಗ ನಟ, ನಿರ್ದೇಶಕ ಬಿ.ವಿ. ರಾಜಾರಾಮ್ ಮಾತನಾಡಿ, ‘ನಾಗೇಶ್ ಅವರು ರಂಗಭೂಮಿ ಕಟ್ಟುವ ಕೆಲಸ ಮಾಡಿದರು. ಅವರು ಇದ್ದಲ್ಲಿ ವಿಚಿತ್ರವಾದ ಶಕ್ತಿ ಇರುತ್ತಿತ್ತು. ರಂಗಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ, ಉಳಿಸಬೇಕು. ಈ ಪ್ರಕ್ರಿಯೆಯು ರಂಗ ಸಂಶೋಧಕರಿಗೆ ಸಹಕಾರಿಯಾಗಲಿದೆ. ದಾಖಲಾತಿಗಳನ್ನು ಸರ್ಕಾರಿ ಸಂಸ್ಥೆಗಳಿಗೆ ನೀಡಿದಲ್ಲಿ ಅದು ಅಲ್ಲಿ ಸುರಕ್ಷಿತವಾಗಿ ಇರುವ ಬಗ್ಗೆ ವಿಶ್ವಾಸವಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.