ADVERTISEMENT

ಬ್ರ್ಯಾಂಡ್ ಬೆಂಗಳೂರು: ಸವಾಲು–ನಿರೀಕ್ಷೆಗಳ ಹಾದಿಯಲ್ಲಿ ಮೆಟ್ರೊ ನೀಲಿ ಮಾರ್ಗ

ಸಿಲ್ಕ್‌ಬೋರ್ಡ್‌– ಕೆ.ಆರ್.ಪುರ–ವಿಮಾನ ನಿಲ್ದಾಣ ಮೆಟ್ರೊ ಮಾರ್ಗ: ಅಭಿವೃದ್ಧಿ–ಅವಕಾಶಗಳ ಅಂಗಳ!

ಗುರು ಪಿ.ಎಸ್‌
Published 19 ಸೆಪ್ಟೆಂಬರ್ 2021, 20:19 IST
Last Updated 19 ಸೆಪ್ಟೆಂಬರ್ 2021, 20:19 IST
ನಗರದ ಕೆ.ಆರ್ ಪುರ ಬಳಿ ನಡೆಯುತ್ತಿರುವ ಮೆಟ್ರೊ ಕಾಮಗಾರಿಯಿಂದ ಸಂಚಾರ ದಟ್ಟಣೆ ಉಂಟಾಗಿರುವುದುಪ್ರಜಾವಾಣಿ ಚಿತ್ರ– ರಂಜು ಪಿ.
ನಗರದ ಕೆ.ಆರ್ ಪುರ ಬಳಿ ನಡೆಯುತ್ತಿರುವ ಮೆಟ್ರೊ ಕಾಮಗಾರಿಯಿಂದ ಸಂಚಾರ ದಟ್ಟಣೆ ಉಂಟಾಗಿರುವುದುಪ್ರಜಾವಾಣಿ ಚಿತ್ರ– ರಂಜು ಪಿ.   

ಬೆಂಗಳೂರು: ನಗರದ ಸ್ವರೂಪ ಮತ್ತು ಅಭಿವೃದ್ಧಿಯ ದಿಕ್ಕನ್ನೇ ಬದಲಿಸುವ ಮಾರ್ಗವಾಗಿ ಗುರುತಿಸಿಕೊಂಡಿರುವ ಸೆಂಟ್ರಲ್‌ ಸಿಲ್ಕ್‌ಬೋರ್ಡ್‌– ಕೆ.ಆರ್. ಪುರ– ವಿಮಾನ ನಿಲ್ದಾಣ (2ಎ ಮತ್ತು 2ಬಿ– ನೀಲಿ ಮಾರ್ಗ) ಮೆಟ್ರೊ ಮಾರ್ಗದಲ್ಲಿ ಕಾಮಗಾರಿ ಪೂರ್ವದ ಪ್ರಕ್ರಿಯೆಗಳು ಚುರುಕುಗೊಂಡಿವೆ.

2024ರ ವೇಳೆಗೆ ಈ ಮಾರ್ಗದಲ್ಲಿ ಮೆಟ್ರೊ ರೈಲು ಓಡಾಟದ ಸದ್ದು ಕೇಳಿಸಬೇಕು ಎಂಬ ಗುರಿಯೊಂದಿಗೆ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಈಗ ಸ್ವಲ್ಪ ಚುರುಕಿನಿಂದ ಕೆಲಸ ಮಾಡುತ್ತಿದೆ. ಅನೇಕ ಸವಾಲುಗಳಿಗೆ ಎದುರುಗೊಳ್ಳುವ ಮನಸ್ಥಿತಿಯಲ್ಲಿ ನಿಗಮ ಇದ್ದರೆ, ಹಲವು ಅವಕಾಶಗಳ ನಿರೀಕ್ಷೆಯಲ್ಲಿ ಈ ಭಾಗದ ಜನರಿದ್ದಾರೆ.

ಶೀಘ್ರ ಕಾರ್ಯಾದೇಶ: ಕೆ.ಆರ್. ಪುರ–ವಿಮಾನ ನಿಲ್ದಾಣ ಮಾರ್ಗಕ್ಕೆ (2ಬಿ) ಸಂಬಂಧಿಸಿದಂತೆ ‘ಕಾಗದದ’ ಮೇಲೆ ಕಾಣುವ ಅಬ್ಬರ ರಸ್ತೆಯ ಮೇಲೆ ಇನ್ನಷ್ಟೇ ಕಾಣಬೇಕಾಗಿದೆ. ಈ ಮಾರ್ಗದ ಮೂರು ಪ್ಯಾಕೇಜ್‌ಗಳ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಹೈದರಾಬಾದ್‌ನ ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿ (ಎನ್‌ಸಿಸಿ) ಕಡಿಮೆ ಬಿಡ್‌ ಮಾಡುವ ಮೂಲಕ ಗೆದ್ದುಕೊಂಡಿದೆ.

ADVERTISEMENT

ಮಾರ್ಗ ನಿರ್ಮಾಣಕ್ಕೆ ಸಾಲ ನೀಡುತ್ತಿರುವ ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಜೊತೆಗಿನ ಮಾತುಕತೆ ನಂತರ, ಎನ್‌ಸಿಸಿಗೆ ಕಾರ್ಯಾದೇಶ ನೀಡುವ ಚಿಂತನೆಯಲ್ಲಿ ಬಿಎಂಆರ್‌ಸಿಎಲ್‌ ಇದೆ. ಕಾರ್ಯಾದೇಶ ದೊರೆತ ನಂತರವೇ ಈ ಮಾರ್ಗದಲ್ಲಿ ‘ಕಾಮಗಾರಿಯ ಸದ್ದು’ ಶುರುವಾಗಲಿದೆ. ಸದ್ಯ ಭೂಸ್ವಾಧೀನ ಮತ್ತು ಪರಿಹಾರದಂತಹ ಕಾರ್ಯಗಳಿಗೆ ಮಾತ್ರ ವಿಮಾನ ನಿಲ್ದಾಣ ಮಾರ್ಗ ಸೀಮಿತವಾಗಿದೆ.

ಆದರೆ, ಕೇಂದ್ರ ರೇಷ್ಮೆ ಮಂಡಳಿಯಿಂದ ಕೆ.ಆರ್. ಪುರದವರೆಗಿನ (2ಎ) ಮಾರ್ಗ ನಿರ್ಮಾಣ ಕಾರ್ಯ ಚುರುಕುಗೊಂಡಿದೆ.ಸಿಲ್ಕ್‌ ಬೋರ್ಡ್‌ನಿಂದ ಕಾಡುಬೀಸನ ಹಳ್ಳಿಯವರೆಗಿನ (10 ಕಿ.ಮೀ) ಮೊದಲ ಪ್ಯಾಕೇಜ್‌ನ ನಿರ್ಮಾಣ ಗುತ್ತಿಗೆಯನ್ನು ಆಫ್ಕಾನ್ಸ್‌ ಸಂಸ್ಥೆ ಪಡೆದಿದ್ದರೆ, ಕಾಡುಬೀಸನಹಳ್ಳಿಯಿಂದ ಬೈಯಪ್ಪನಹಳ್ಳಿಯವರೆಗಿನ (9.75 ಕಿ.ಮೀ) ಎರಡನೇ ಪ್ಯಾಕೇಜ್‌ನ ಗುತ್ತಿಗೆಯನ್ನು ಶಂಕರನಾರಾಯಣ ಕನ್‌ಸ್ಟ್ರಕ್ಷನ್‌ ಪಡೆದಿದೆ.

ಇಬ್ಬಲೂರು, ಮಾರತ್ತಹಳ್ಳಿ, ಬ್ಯಾಡರಹಳ್ಳಿಯ ಬಳಿ ಮಣ್ಣು ಪರೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಇಬ್ಬಲೂರು ಬಳಿ ಮೆಟ್ರೊ ಪಿಲ್ಲರ್‌ಗಳಿಗೆ ಅಡಿಪಾಯ ಹಾಕುವ ಕಾರ್ಯವೂ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ.

ಕೋವಿಡ್‌ ಸಂದರ್ಭದಲ್ಲಿ ಕಂಪನಿಗಳು ಉದ್ಯೋಗಿ ಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಿದ್ದರಿಂದ ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿತ್ತು. ಈ ಅವಕಾಶವನ್ನು ಕಾಮಗಾರಿ ಚುರುಕುಗೊಳಿಸಲು ನಿಗಮ ಬಳಸಿಕೊಂಡಿತ್ತು. ಸದ್ಯ, ಬೆಂಗೇನಹಳ್ಳಿ ಅಥವಾ ಇಬ್ಬಲೂರು ಜಂಕ್ಷನ್‌ನಲ್ಲಿ ಕೆಲಸ ತ್ವರಿತಗತಿಯಲ್ಲಿ ನಡೆಯುತ್ತಿದೆ.

ಈ ಮಾರ್ಗದಲ್ಲಿರುವ ಮರಗಳನ್ನು ಕಡಿಯಲು ಅಥವಾ ಸ್ಥಳಾಂತರಗೊಳಿಸಲು ನಿಗಮವು ಅನುಮತಿಗಾಗಿ ಕಾಯುತ್ತಿದೆ. ಪರಿಸರ ಕಾರ್ಯಕರ್ತರ ವಿರೋಧ ಮತ್ತಿತರ ತಾಂತ್ರಿಕ ಕಾರಣಗಳಿಂದ ಕೆಲವು ಕಡೆಗಳಲ್ಲಿ ನಿಗಮಕ್ಕೆ ಅನುಮತಿ ದೊರೆತಿಲ್ಲ. ಕೆಲವು ಕಡೆ ಮರಗಳನ್ನು ಸ್ಥಳಾಂತರ ಗೊಳಿಸುವ ಕಾರ್ಯವನ್ನು ನಿಗಮ ಸಮರ್ಪಕವಾಗಿ ಮಾಡುತ್ತಿಲ್ಲ ಎಂದೂ ಸ್ಥಳೀಯರು ದೂರುತ್ತಾರೆ.

ಭೂಸ್ವಾಧೀನ ಕಾರ್ಯ ಬಹುತೇಕ ಪೂರ್ಣ: 19 ಕಿ.ಮೀ. ಉದ್ದದ 2ಎ ಮಾರ್ಗ ನಿರ್ಮಾಣಕ್ಕೆ 60,553 ಚದರ ಮೀಟರ್ ಜಾಗದ ಅವಶ್ಯಕತೆ ಇತ್ತು. ಈಗಾಗಲೇ 60,241 ಚದರ ಮೀಟರ್‌ ಜಾಗವನ್ನು ಸ್ವಾಧೀನ ಪಡಿಸಿಕೊಂಡು ಎಂಜಿನಿಯರಿಂಗ್ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಉಳಿದ 312 ಚದರ ಮೀಟರ್‌ ಜಾಗವನ್ನು ನೀಡುವಂತೆಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೋರಲಾಗಿದೆ. ಅಗರ ನಿಲ್ದಾಣಕ್ಕೆ ಪ್ರವೇಶ ದ್ವಾರ ನಿರ್ಮಾಣಕ್ಕೆ ಈ ಜಾಗದ ಅವಶ್ಯಕತೆ ಇದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

38 ಕಿ.ಮೀ. ಉದ್ದದ 2ಬಿ ಮಾರ್ಗ ನಿರ್ಮಾಣಕ್ಕೆ 2,21,608 ಚದರ ಮೀಟರ್ ಜಾಗವನ್ನು ವಯಡಕ್ಟ್‌ ಮತ್ತು ನಿಲ್ದಾಣಗಳ ನಿರ್ಮಾಣಕ್ಕಾಗಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. 1,99,849 ಚದರ ಮೀಟರ್‌ನಷ್ಟು ಜಾಗವನ್ನು ಎಂಜಿನಿಯರಿಂಗ್ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಉಳಿದ ಜಾಗದವರಿಗೆ ಪರಿಹಾರ ಕೊಡುವ ಕಾರ್ಯ ಪ್ರಗತಿಯಲ್ಲಿರುವುದರಿಂದ ಆ ಜಾಗದ ಸ್ವಾಧೀನ ಕಾರ್ಯ ಪ್ರಗತಿಯಲ್ಲಿದೆ.

ಇನ್ನು, ಶೆಟ್ಟಿಗೆರೆಯಲ್ಲಿ ಡಿಪೊ ನಿರ್ಮಾಣಕ್ಕೆ 23 ಎಕರೆ ಜಾಗ ಅಗತ್ಯವಿದ್ದು, 18 ಎಕರೆ ಜಾಗವನ್ನು ರಾಜ್ಯ ಸರ್ಕಾರ ನೀಡಿದ್ದು, ಬಿಎಂಆರ್‌ಸಿಎಲ್‌ಗೆ ಹಸ್ತಾಂತರಿಸಲಾಗಿದೆ. ಉಳಿದ ಐದು ಎಕರೆ ಜಾಗಕ್ಕೆ ಸಂಬಂಧಿಸಿದಂತೆ ಕಾನೂನು
ತೊಡಕುಗಳಿದ್ದು, ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಆದೇಶಕ್ಕಾಗಿ ನಿಗಮ ಕಾಯುತ್ತಿದೆ.

ಈ ಮಾರ್ಗದಲ್ಲಿ ಎಲ್ಲರನ್ನೂ ಕಾಡುವ ಸಂಚಾರ ದಟ್ಟಣೆಯಂತಹ ‘ಭೂತ’ವನ್ನು ಓಡಿಸಲು ಸಾಧ್ಯವಿರುವುದು ಮೆಟ್ರೊ ರೈಲಿಗೆ ಮಾತ್ರ. ಆ ಸೌಭಾಗ್ಯ ಬೇಗ ಒದಗಿ ಬರುವಂತಾಗಲಿ ಎಂಬುದು ಇಲ್ಲಿನ ಜನರ ನಿರೀಕ್ಷೆ ಮತ್ತು ಬೇಡಿಕೆ. ಈ ನಿರೀಕ್ಷೆ ಎಷ್ಟು ಬೇಗ ಪೂರ್ಣವಾಗುತ್ತದೆಯೋ ಅಷ್ಟು ವೇಗದಲ್ಲಿ ಬೆಂಗಳೂರಿನ ಬ್ರ್ಯಾಂಡ್ ಮೌಲ್ಯ ಮತ್ತಷ್ಟು ಹೆಚ್ಚುವುದರಲ್ಲಿ ಅನುಮಾನವಿಲ್ಲ.

ಎದುರಾಗುವ ಸವಾಲುಗಳಾವುವು?
ಅತಿ ನಿರೀಕ್ಷೆಯ ಈ ಮಾರ್ಗ ನಿರ್ಮಾಣಕ್ಕೆ ಹಲವು ಸವಾಲುಗಳೂ ಎದುರಾಗಲಿವೆ. ನಿಗಮ ಅದನ್ನು ಹೇಗೆ ನಿಭಾಯಿಸಲಿದೆ ಎಂಬುದು ಮುಖ್ಯವಾಗಲಿದ್ದು, ಗಡುವಿನೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆಯೇ, ಇಲ್ಲವೇ ಎಂಬುದೂ ನಿರ್ಧಾರವಾಗಲಿದೆ.

1ನೀಲಿ ಮಾರ್ಗ ಮತ್ತು ನೇರಳೆ ವಿಸ್ತರಿತ ಮಾರ್ಗದ ಸಂಧಿಸುವುದು ಕೆ.ಆರ್. ಪುರದ ಬಳಿ. ಮಹದೇವಪುರ, ವೈಟ್‌ಫೀಲ್ಡ್‌ ಕಡೆಗೂ ಇಲ್ಲಿಂದಲೇ ಸಾಗಬೇಕು. ಟಿನ್ ಫ್ಯಾಕ್ಟರಿ ಬಳಿ ನೇರಳೆ ವಿಸ್ತರಿತ ಮಾರ್ಗದ ಕಾಮಗಾರಿ ಈಗಾಗಲೇ ನಡೆಯುತ್ತಿದೆ. ಈಗಲೇ ಸಂಚಾರ ದಟ್ಟಣೆಯ ಬಿಸಿಯನ್ನು ಜನ ತಡೆದುಕೊಳ್ಳಲು ಆಗುತ್ತಿಲ್ಲ. ಚೆನ್ನೈಗೂ ಇಲ್ಲಿಂದಲೇ ಹೆಚ್ಚು ಜನ ಓಡಾಡುವುದರಿಂದಲೂ ಹೆಚ್ಚು ದಟ್ಟಣೆ ಇರುತ್ತದೆ. ಮುಂದೆ, ವಿಮಾನ ನಿಲ್ದಾಣ ಮಾರ್ಗದ ಕಾಮಗಾರಿ ಆರಂಭವಾಗಿ, ಮುಗಿಯುವವರೆಗೆ ದಟ್ಟಣೆ ನಿಯಂತ್ರಿಸುವ ಸವಾಲು ನಿಗಮದ ಮುಂದೆ ಇದೆ.

2ಮಾನ್ಯತಾ ಟೆಕ್‌ ಪಾರ್ಕ್‌ ಬಳಿ ಈಗಾಗಲೇ ಮೇಲ್ಸೇತುವೆ ಕಟ್ಟಿದ್ದಾರೆ. ಇಲ್ಲಿಯೂ ವಾಹನ ಸಂಚಾರ ದಟ್ಟಣೆ ಕಡಿಮೆಯೇನೂ ಇರುವುದಿಲ್ಲ. ಮುಂದೆ, ಮೆಟ್ರೊ ಮಾರ್ಗವನ್ನು ನಿರ್ಮಿಸುವುದಕ್ಕೆ ಮುಂದೆ ಏನು ಮಾಡಲಿದೆ ಎಂಬುದು ಯಕ್ಷಪ್ರಶ್ನೆಯಂತೆ ಕಾಡುತ್ತಿದೆ.

3ಗುಲಾಬಿ ಮಾರ್ಗ ಅಂದರೆ ಗೊಟ್ಟಿಗೆರೆ ಮತ್ತು ನಾಗವಾರ ಹಾಗೂ ನೀಲಿ ಮಾರ್ಗವು ಇಲ್ಲಿನ ನಾಗವಾರದಲ್ಲಿ ಸಂಧಿಸುತ್ತವೆ. ನಾಗವಾರ ಮಾರ್ಗದ ಪ್ರಾರಂಭದ ನಿಲ್ದಾಣ ಇಲ್ಲಿಯೇ ನಿರ್ಮಾಣವಾಗುವುದರಿಂದ ಜನರ ಓಡಾಟವೂ ಹೆಚ್ಚಾಗಲಿದೆ. ವಿಮಾನ ನಿಲ್ದಾಣದ ಕಡೆಗೆ ಮಾತ್ರವಲ್ಲದೆ, ಸಿಲ್ಕ್‌ ಬೋರ್ಡ್‌ ಕಡೆಗೂ ಹೆಚ್ಚು ಜನ ಇಲ್ಲಿಂದ ಓಡಾಡುತ್ತಾರೆ. ಮುಂದೆ, 2ಬಿ ಮಾರ್ಗದ ಕಾಮಗಾರಿ ಪ್ರಾರಂಭವಾದ ನಂತರ, ‘ಸಂಚಾರ ದಟ್ಟಣೆ ಯಾತನೆ’ ಹೆಚ್ಚಲಿದೆ. ಇದನ್ನು ನಿರ್ವಹಿಸಬೇಕಾದ ಸವಾಲು ನಿಗಮದ ಮುಂದಿದೆ.

4ಯಲಹಂಕ ಹಾಗೂ ಜಕ್ಕೂರು ವಾಯುನೆಲೆಗಳು ಈ ಮಾರ್ಗದಲ್ಲಿ ಇವೆ. ಇಲ್ಲಿ ನೆಲದಡಿಯ ನಿಲ್ದಾಣವನ್ನು ನಿಗಮ ನಿರ್ಮಿಸಬೇಕಾಗಿದೆ. ಅಲ್ಲದೆ, ವಿಮಾನ ನಿಲ್ದಾಣ ಪ್ರಯಾಣಿಕರ ಲಗೇಜ್‌ ಹೆಚ್ಚು ಇರುತ್ತವೆ. ಮೆಟ್ರೊ ರೈಲುಗಳಲ್ಲಿ ಹೆಚ್ಚು ಲಗೇಜ್‌ಗಳನ್ನು ಇಡುವ ವ್ಯವಸ್ಥೆಯನ್ನೂ ಮಾಡುವ ಅಗತ್ಯವಿರುತ್ತದೆ. ಈ ಸವಾಲನ್ನು ನಿಗಮ ಯಾವ ರೀತಿ ಎದುರಿಸಲಿದೆ ಎಂಬ ಕುತೂಹಲದಲ್ಲಿ ಜನರಿದ್ದಾರೆ.

ಹೆಚ್ಚಾಗಲಿದೆ ನಿರ್ಮಾಣ ವೆಚ್ಚ
ಕೆ.ಆರ್.ಪುರ–ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ಕಾಮಗಾರಿ ಇನ್ನಷ್ಟೇ ಪ್ರಾರಂಭವಾಗಬೇಕಾಗಿದೆ. ಗುತ್ತಿಗೆ ಪಡೆದಿರುವ ಕಂಪನಿಗೆ ಇನ್ನೂ ಕಾರ್ಯಾದೇಶ ನೀಡಿಲ್ಲ. ಜನನಿಬಿಡ ಪ್ರದೇಶವಾಗಿರುವ ಇಲ್ಲಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸುವುದು ನಿಜಕ್ಕೂ ಸವಾಲಿನ ವಿಷಯ.

ಕಾಮಗಾರಿ ಮುಗಿಯುವುದು ನಿಧಾನವಾದಷ್ಟೂ ನಿರ್ಮಾಣ ವೆಚ್ಚವೂ ಖಂಡಿತ ಹೆಚ್ಚಾಗಲಿದೆ. ಈಗ ಸುಮಾರು ₹15 ಸಾವಿರ ಕೋಟಿ ಎಂದು ಹೇಳಿದ್ದರೂ, ಕಾಮಗಾರಿ ಮುಗಿಯುವ ವೇಳೆಗೆ ನಿರ್ಮಾಣ ವೆಚ್ಚವು ₹25 ಸಾವಿರ ಕೋಟಿಗೆ ತಲುಪಬಹುದು. ಹೆಚ್ಚುವರಿ ಹಣವನ್ನು ಹೊಂದಿಸುವ ಸವಾಲನ್ನೂ ಬಿಎಂಆರ್‌ಸಿಎಲ್‌ ಎದುರಿಸಲಿದೆ.
-ಸಂಜೀವ್ ದ್ಯಾಮಣ್ಣವರ,ರೈಲ್ವೆ ಕಾರ್ಯಕರ್ತ

‘ಮರಗಳ ಸ್ಥಳಾಂತರ ಅಸಮರ್ಪಕ’
2ಎ ಮಾರ್ಗದಲ್ಲಿ ಮರಗಳ ತೆರವು ಕಾರ್ಯ ತಡವಾಗಿರುವುದರಿಂದ ಕಾಮಗಾರಿಯೂ ವಿಳಂಬವಾಗುತ್ತಿದೆ ಎಂದು ನಿಗಮದ ಅಧಿಕಾರಿಗಳು ಹೇಳುತ್ತಾರೆ. ಆದರೆ, ನಿಗಮವು ಸರಿಯಾಗಿ ಯೋಜನೆ ರೂಪಿಸಿಕೊಳ್ಳುವುದೇ ಇಲ್ಲ. ಸ್ಥಳಾಂತರಿಸಬೇಕಾದ ಮರಗಳನ್ನು ಕಡಿದು ಬಹಳ ದಿನಗಳವರೆಗೆ ಅಲ್ಲಿಯೇ ಬಿಟ್ಟಿರುತ್ತಾರೆ. ಮತ್ತೆ ಅವುಗಳನ್ನು ಸ್ಥಳಾಂತರಿಸುವ ವೇಳೆಗೆ ಬಹಳಷ್ಟು ಮರಗಳು ಹಾಳಾಗಿರುತ್ತವೆ. ಮಾರ್ಗ ನಿರ್ಮಾಣಕ್ಕೆ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುವಾಗಲೇ, ಕಡಿಯಬೇಕಾಗಿರುವ ಅಥವಾ ಸ್ಥಳಾಂತರ ಮಾಡಬೇಕಾಗಿರುವ ಮರಗಳ ಕುರಿತು ಪ್ರತ್ಯೇಕ ಯೋಜನೆ ಸಿದ್ಧಮಾಡಿಟ್ಟುಕೊಳ್ಳಬೇಕು.ಕೊನೆಯ ಗಳಿಗೆಯಲ್ಲಿ ಮರ ಕಡಿಯಲು ಮುಂದಾದರೆ, ಸರಿಯಾಗಿ ಮಾಹಿತಿ ನೀಡದಿದ್ದರೆ ಪರಿಸರ ಕಾರ್ಯಕರ್ತರು ನ್ಯಾಯಾಲಯದ ಮೊರೆ ಹೋಗುವುದು ಸಹಜ. ಇನ್ನು, ಮರಗಳನ್ನು ಸ್ಥಳಾಂತರಿಸುವ ಕಾರ್ಯವನ್ನು ಮಳೆಗಾಲದಲ್ಲಿ ಇಟ್ಟುಕೊಳ್ಳಬೇಕು.ಬೇಸಿಗೆಯಲ್ಲಾದರೆ ಮರಗಳು ಬೇಗ ಒಣಗುತ್ತವೆ ಅಲ್ಲದೆ, ಮರುನೆಡುವ ಕಾರ್ಯವೂ ಕಠಿಣವಾಗುತ್ತದೆ.
-ಬಾಲಾಜಿ ರಘೋತ್ತಮ್,ಇಬ್ಬಲೂರು ನಿವಾಸಿ

ಅಂಕಿ–ಅಂಶ
₹398.48 ಕೋಟಿ:
2ಎ ಮಾರ್ಗ ನಿರ್ಮಾಣಕ್ಕೆ ನೀಡಲಾದ ಪರಿಹಾರ ಮೊತ್ತ
₹1,381.71 ಕೋಟಿ:2ಬಿ ಮಾರ್ಗ ನಿರ್ಮಾಣಕ್ಕಾಗಿ ನೀಡಲಾದ ಪರಿಹಾರ ಮೊತ್ತ
₹84.08 ಕೋಟಿ:ಜನರ ಪುನರ್ವಸತಿಗಾಗಿ ನೀಡಲಾದ ಮೊತ್ತ
3,116:ಸ್ವಾಧೀನಪಡಿಸಿಕೊಳ್ಳಲಾದ ಆಸ್ತಿಗಳ ಸಂಖ್ಯೆ
7,455:ಪರಿಹಾರ ಪಡೆದ ಕಟ್ಟಡಗಳ ಮಾಲೀಕರು
2,338:ಪರಿಹಾರ ಪಡೆದ ಕಟ್ಟಡಗಳ ಬಾಡಿಗೆದಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.