ADVERTISEMENT

ಬೆಂಗಳೂರು: ಕುಟುಂಬದವರ ಆತ್ಮಹತ್ಯೆಗೆ ತಂದೆಯೇ ಕಾರಣ?

ಬ್ಯಾಡರಹಳ್ಳಿಯಲ್ಲಿ ಐವರು ಮೃತಪಟ್ಟ ಪ್ರರಕಣ; ಮೂವರ ಮರಣ ಪತ್ರಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 19:56 IST
Last Updated 19 ಸೆಪ್ಟೆಂಬರ್ 2021, 19:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ಕೂಸು ಸೇರಿ ಐವರು ಮೃತಪಟ್ಟ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪಶ್ಚಿಮ ವಿಭಾಗದ ಪೊಲೀಸರು, ಮೃತದೇಹಗಳು ಸಿಕ್ಕಿದ್ದ ಮನೆಯಲ್ಲಿ ಭಾನುವಾರ ಶೋಧ ನಡೆಸಿದರು.

ತಿಗಳರಪಾಳ್ಯದ ಐಷಾರಾಮಿ ಮನೆಯೊಂದರಲ್ಲಿ ಭಾರತಿ (51), ಅವರ ಮಕ್ಕಳಾದ ಸಿಂಚನಾ (34), ಸಿಂಧುರಾಣಿ (33) ಹಾಗೂ ಮಧುಸಾಗರ್ (25) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಂಧೂರಾಣಿ ಅವರ ಒಂಭತ್ತು ತಿಂಗಳ ಮಗು ಮೃತಪಟ್ಟ ಸ್ಥಿತಿಯಲ್ಲಿ ಮನೆಯಲ್ಲಿ ಪತ್ತೆಯಾಗಿತ್ತು.

ಮೃತದೇಹಗಳ ಮರಣೋತ್ತರ ಪರೀಕ್ಷೆ ಮುಗಿಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು. ಅಂತ್ಯಕ್ರಿಯೆ ಸಹ ಮುಗಿದಿದೆ. ಈಗ ತನಿಖೆ ಚುರುಕುಗೊಳಿಸಿರುವ ಪೊಲೀಸರ ವಿಶೇಷ ತಂಡ, ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ಪತ್ತೆ ಮಾಡುತ್ತಿದೆ.

ADVERTISEMENT

‘ಮನೆಯ ಪ್ರತಿಯೊಂದು ಸ್ಥಳದಲ್ಲೂ ತಪಾಸಣೆ ನಡೆಸಲಾಯಿತು. 810 ಗ್ರಾಂ ಚಿನ್ನಾಭರಣ, 3880 ಗ್ರಾಂ ಬೆಳ್ಳಿ ಸಾಮಗ್ರಿ ಹಾಗೂ ₹ 15.96 ಲಕ್ಷ ನಗದು ಸಿಕ್ಕಿದೆ. ಇದನ್ನೆಲ್ಲ ಮನೆ ಮಾಲೀಕ ಹಲ್ಲೇಗೆರೆ ಶಂಕರ್ ಅವರಿಗೆ ಹಸ್ತಾಂತರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

3 ಮರಣಪತ್ರ ಪತ್ತೆ: ‘ಮೃತದೇಹಗಳು ಸಿಕ್ಕಿದ್ದ ಸ್ಥಳದ ಸಮೀಪವೇ ಮೂರು ಮರಣಪತ್ರಗಳು ಸಿಕ್ಕಿವೆ. ಸಿಂಧುರಾಣಿ, ಸಿಂಚನಾ ಕುಮಾರಿ ಹಾಗೂ ಮಧುಸಾಗರ್ ಈ ಮರಣ ಪತ್ರ ಬರೆದಿರುವ ಅನುಮಾನವಿದೆ. ಇದನ್ನು ಖಚಿತಪಡಿಸಿಕೊಳ್ಳಲು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ನೆರವು ಕೋರಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ತಂದೆಯೇ ತಮ್ಮ ಆತ್ಮಹತ್ಯೆ ಕಾರಣ’ ಎಂದು ಮರಣಪತ್ರದಲ್ಲಿ ಬರೆದಿರುವ ಮಕ್ಕಳು, ಅದಕ್ಕೆ ಸಂಬಂಧಪಟ್ಟಂತೆ ನಡೆದ ಹಲವು ಘಟನೆಗಳನ್ನು ಉಲ್ಲೇಖಿಸಿದ್ದಾರೆ. ‘ಪತಿ ಮನೆ ಹಾಗೂ ತವರು ಮನೆ ಎರಡೂ ಕಡೆ ನೆಮ್ಮದಿ ಇರಲಿಲ್ಲ. ತಂದೆಯೇ ಪತಿಯ ತಲೆಕೆಡಿಸಿ, ಜೀವನ ಹಾಳು ಮಾಡಿದರು. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ಇದಕ್ಕೆ ತಂದೆಯೇ ಕಾರಣ’ ಎಂಬುದಾಗಿ ಹೆಣ್ಣು ಮಕ್ಕಳು ಮರಣಪತ್ರದಲ್ಲಿ ಬರೆದಿದ್ದಾರೆ. ಕೈ ಬರಹ ಅವರದ್ದಾ? ಎಂಬುದನ್ನು ತಿಳಿದುಕೊಳ್ಳಬೇಕಿದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.