ADVERTISEMENT

ರಾಜಕಾಲುವೆ ಕಾಮಗಾರಿ: ₹ 62 ಕೋಟಿ ನೀರಿನಲ್ಲಿ ಹೋಮ!

ಕಾಮಗಾರಿ ಬಳಿಕವೂ ಕೆರೆ, ರಾಜಕಾಲುವೆಗೆ ಸೇರುತ್ತಲೇ ಇದೆ ಕೊಳಚೆ ನೀರು: ಮಹಾಲೇಖಪಾಲರ ವರದಿಯಲ್ಲಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 19:56 IST
Last Updated 19 ಸೆಪ್ಟೆಂಬರ್ 2021, 19:56 IST

ಬೆಂಗಳೂರು: ಬಿಬಿಎಂಪಿಯ ರಾಜಕಾಲುವೆ ವಿಭಾಗದ ವ್ಯವಸ್ಥೆಯ ಗಂಭೀರ ನ್ಯೂನತೆಗಳನ್ನು ಬೆಂಗಳೂರು ಮಹಾನಗರ ನೀರು ನಿರ್ವಹಣೆ ಕುರಿತ ಮಹಾಲೇಖಪಾಲರ ವರದಿ ಬೊಟ್ಟು ಮಾಡಿ ತೋರಿಸಿದೆ.

ಬಿಬಿಎಂಪಿಯ ರಾಜಕಾಲುವೆ ವಿಭಾಗವು ರಾಜಕಾಲುವೆಗಳಿಗೆ ಕೊಳಚೆ ನೀರು ಸೇರುವುದನ್ನು ತಡೆಯಲು ₹ 62.86 ಕೋಟಿ ವೆಚ್ಚದಲ್ಲಿ ನಿರ್ವಹಿಸಿದ ಕಾಮಗಾರಿಯು ಹೇಗೆ ‘ನೀರಿನಲ್ಲಿ ಹೋಮ’ ಮಾಡಿದಂತಾಗಿದೆ ಎಂಬುದನ್ನೂ ವರದಿಯಲ್ಲಿ ಎಳೆ ಎಳೆಯಾಗಿ ವಿವರಿಸಲಾಗಿದೆ.

14 ರಾಜಕಾಲುವೆಗಳನ್ನು ₹ 61.21 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗಳ ಅನುಷ್ಠಾನಕ್ಕೆ 2014–16ರ ನಡುವೆ ಗುತ್ತಿಗೆ ನೀಡಲಾಗಿತ್ತು. ರಾಜಕಾಲುವೆಗೆ ಕೊಳಚೆ ನೀರು ಸೇರದಂತೆ ತಡೆಯುವುದು ಹಾಗೂ ಕೆರೆಗಳ ಸುತ್ತಲಿನ ಪರಿಸರಗಳ ಅಭಿವೃದ್ಧಿ ಈ ಕಾಮಗಾರಿಯಗಳ ಉದ್ದೇಶವಾಗಿತ್ತು. ಈ ಕಾಮಗಾರಿಗೆ ಒಟ್ಟು ₹ 62.86 ಕೋಟಿ ವೆಚ್ಚ ಮಾಡಲಾಗಿದೆ. ಆದರೆ, ಲೆಕ್ಕಪರಿಶೋಧನಾ ಸಮಿತಿಯು ಹುಳಿಮಾವು ಹಾಗೂ ಮಡಿವಾಳ ಕೆರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಇವುಗಳಿಗೆ ಕೊಳಚೆ ನೀರನ್ನು ನೇರವಾಗಿ ಹರಿಯಬಿಡುತ್ತಿರುವುದು ಕಂಡುಬಂದಿದೆ. ಕೆರೆ ಮತ್ತು ರಾಜಕಾಲುವೆಗಳಿಗೆ ಕೊಳಚೆ ಹರಿವನ್ನು ತಡೆಯುವ ನಿರ್ದಿಷ್ಟ ಕಾರಣಗಳಿಗಾಗಿ ಕಾಮಗಾರಿ ಕೈಗೊಂಡಿದ್ದರೂ, ಆ ಉದ್ದೇಶವೇ ಈಡೇರಿಲ್ಲ. ಬಿಬಿಎಂಪಿಯ ಈ ವೈಫಲ್ಯದಿಂದ ಅಷ್ಟೂ ಹಣ ವ್ಯರ್ಥವಾಗಿದೆ ಎಂದು ಮಹಾಲೇಖಪಾಲರ ವರದಿ ಹೇಳಿದೆ.

ADVERTISEMENT

ರಾಜಕಾಲುವೆ ಅಭಿವೃದ್ಧಿಯ ಸಮಗ್ರ ಯೋಜನಾ ವರದಿಗಳೇ (ಡಿಪಿಆರ್‌) ದೋಷಪೋರಿತವಾಗಿದ್ದವು ಎಂದು ಅಭಿಪ್ರಾಯಪಟ್ಟಿರುವ ಮಹಾಲೇಖಪಾಲರು, ‘ಬಿಬಿಎಂಪಿ ಸಿದ್ಧಪಡಿಸುವ ಡಿಪಿಆರ್‌ಗಳು ಸಮಗ್ರವಾಗಿರಬೇಕು. ಕಾಮಗಾರಿಗೆ ಜಾಗದ ಲಭ್ಯತೆ, ಹಣಕಾಸಿನ ಅಗತ್ಯ ಮತ್ತು ಅವುಗಳನ್ನು ಹೊಂದಿಸುವ ಮೂಲದ ಬಗ್ಗೆ ಹಾಗೂ ಇತರ ಸಂಸ್ಥೆಗಳ ಸಮನ್ವಯ.. ಮುಂತಾದ ವಿವರಗಳನ್ನೂ ಅದು ಒಳಗೊಂಡಿರಬೇಕು’ ಎಂದು ಶಿಫಾರಸು ಮಾಡಿದ್ದಾರೆ.

ರಾಜಕಾಲುವೆಗಳ ಪರಿಣಾಮಕಾರಿ ಯೋಜನೆ ಮತ್ತು ನಿರ್ವಹಣೆಗೆ ಒಂದೇ ದತ್ತಾಂಶವನ್ನು ಆಧಾರವಾಗಿಟ್ಟು ಕಾರ್ಯನಿರ್ವಹಿಸಬೇಕು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಜಲಮಂಡಳಿಯಂತಹ ಅಂಗ ಸಂಸ್ಥೆಗಳ ಜೊತೆ ಸಮನ್ವಯ ಸಾಧಿಸಿ ರಾಜಕಾಲುವೆಗಳ ಸಮಗ್ರ ವಿವರಗಳನ್ನು ಕಲೆ ಹಾಕಬೇಕು ಎಂದೂ ಸಲಹೆ ನೀಡಿದ್ದಾರೆ.

‘ಏಜೆನ್ಸಿಗೆ ಅನುಚಿತ ಪಾವತಿ’
ಡಿಪಿಆರ್‌ ಪ್ರತಿಗಳು ಹಾಗೂ ಅದಕ್ಕನುಗುಣವಾಗಿ ಕಾಮಗಾರಿ ಪೂರ್ಣಗೊಳಿಸಿದ ಸಾಕ್ಷ್ಯಗಳು ಬಿಬಿಎಂಪಿ ರಾಜಕಾಲುವೆ ಮುಖ್ಯ ಎಂಜಿನಿಯರ್‌ ಬಳಿ ಲಭ್ಯವಿರಲಿಲ್ಲ. ಮಾಸ್ಟರ್‌ ಪ್ಲ್ಯಾನ್‌ ಮತ್ತು ಆರ್‌.ಆರ್‌.ನಗರ ವಲಯದ ಕಾಮಗಾರಿಗಳ ಡಿಪಿಆರ್‌ ತಯಾರಿಕೆಗೆ ಸಂಬಂಧಿಸಿದ ಟೆಂಡರ್‌ಗಳು, ಏಜೆನ್ಸಿ ಆಯ್ಕೆ, ಪಾವತಿಸಿದ ಬಿಲ್‌ಗಳಿಗೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳೇ ‘ಕಳೆದುಹೋಗಿವೆ’ ಎಂದು ಮುಖ್ಯ ಎಂಜಿನಿಯರ್‌ ದಾಖಲಿಸಿದ್ದಾರೆ. ಆದರೆ, ಏಜೆನ್ಸಿ ಸಲ್ಲಿಸಿದ ನಕಲಿ ದಾಖಲೆ ಆಧಾರದಲ್ಲಿ ಮೆ.ಸ್ಟುಪ್‌ ಕನ್ಸಲ್ಟೆಂಟ್ಸ್‌ಗೆ ₹ 94.93 ಲಕ್ಷ ಬಾಕಿ ಪಾವತಿಗೆ ಅವರು ಅನುಮೋದನೆ ನೀಡಿದ್ದಾರೆ. ಏಜೆನ್ಸಿ ಒದಗಿಸಿದ ದಾಖಲೆಗಳ ಆಧಾರದಲ್ಲಿ ಕಡತಗಳ ಮರುಸೃಷ್ಟಿ ಮಾಡಿರುವುದು ರಾಜಕಾಲುವೆ ವಿಭಾಗದ ಗಂಭೀರ ನ್ಯೂನತೆಗಳನ್ನು ಸೂಚಿಸುತ್ತದೆ ಎಂದೂ ಮಹಾಲೇಖಪಾಲರು ಅಭಿಪ್ರಾಯಪಟ್ಟಿದ್ದಾರೆ.

ಕಳೆದುಹೋದ ದಾಖಲೆಗಳನ್ನು ಪತ್ತೆಹಚ್ಚಲು ಹಾಗೂ ಪದೇ ಪದೇ ಕರ್ತವ್ಯ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ರಾಜಕಾಲುವೆ ವಿಭಾಗವಾಗಲೀ, ಬಿಬಿಎಂಪಿಯಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹಾಲೇಖಪಾಲರು ತಮ್ಮ ವರದಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಸ್ಟರ್‌ ಪ್ಲ್ಯಾನ್‌ ಮತ್ತು ಡಿಪಿಆರ್‌ಗಳಿಗೆ ಅನುಮೋದನೆಯನ್ನೇ ಪಡೆದಿಲ್ಲ. ಹಾಗಾಗಿ ಏಜೆನ್ಸಿಯು ಕಾಮಗಾರಿಯನ್ನು ಪೂರ್ಣಗೊಳಿಸಿರುವ ಮತ್ತು ಅಂತಿಮಗೊಂಡ ಕಾಮಗಾರಿಗಳ ಕುರಿತ ದಾಖಲೆಗಳೂ ಅನುಮಾನ ಮೂಡಿಸುವಂತಿವೆ. ಏಜೆನ್ಸಿಗೆ ಮಾಡಿರುವ ಪಾವತಿಗಳೂ ಅನುಚಿತವಾಗಿದ್ದು, ಇದರಲ್ಲೂ ಅಕ್ರಮವಾಗಿದೆ. ಎರಡು ವಿಭಿನ್ನ ಕಾಮಗಾರಿಗಳನ್ನು ಬೆಸೆದಿರುವುದು ಕೂಡ ದುರುದ್ದೇಶಪೂರಿತವಾಗಿದ್ದು, ಕೆಲ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಕುರಿತು ಬಿಬಿಎಂಪಿಯಾಗಲೀ, ರಾಜ್ಯ ಸರ್ಕಾರವಾಗಲೀ ಉತ್ತರ ನೀಡಿಲ್ಲ ಎಂದೂ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ವಿವರವಾದ ತನಿಖೆಗೆ ಶಿಫಾರಸು
ಅಪೂರ್ಣ ಹಾಗೂ ನ್ಯೂನತೆಗಳಿರುವ ಡಿಪಿಆರ್‌ಗಳನ್ನು ಸಿದ್ಧಪಡಿಸಿದ್ದು, ಬಿಬಿಎಂಪಿ ರಾಜಕಾಲುವೆ ವಿಭಾಗದಿಂದ ದಾಖಲೆಗಳು ಕಾಣೆಯಾಗಿರುವುದು ಹಾಗೂ ಪ್ರಶ್ನಾರ್ಹ ಪಾವತಿಗಳನ್ನು ಮಾಡಿರುವುದರ ಬಗ್ಗೆ ವಿವರವಾದ ತನಿಖೆ ನಡೆಸಬೇಕು. ತನಿಖೆಯ ಫಲಿತಾಂಶಗಳ ಆಧಾರದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದೂ ಮಹಾಲೇಖಪಾಲರು ತಮ್ಮ ವರದಿಯಲ್ಲಿ ಶಿಫಾರಸು ಮಾಡಿದ್ದಾರೆ.

ಬಿಬಿಎಂಪಿಯು ಎಲ್ಲ ಮೂಲದಾಖಲೆಗಳ ನಿರ್ವಹಣೆಗೆ ಕ್ರಮಕೈಗೊಳ್ಳಬೇಕು. ಕಾಮಗಾರಿಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಹೊಂದಲು ಶಾಸನಬದ್ಧ ನಿಬಂಧನೆಗಳನ್ನು ಅನುಸರಿಸಬೇಕು ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.