ADVERTISEMENT

ಚಾಮರಾಜಪೇಟೆ: ಸ್ಫೋಟದ ತೀವ್ರತೆಗೆ ಹಾರಿ ಹೊರಗೆ ಬಿದ್ದ ದೇಹಗಳು ಛಿದ್ರ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 21:25 IST
Last Updated 23 ಸೆಪ್ಟೆಂಬರ್ 2021, 21:25 IST
ಘಟನೆ ನಡೆದ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.    

ಬೆಂಗಳೂರು: ಬೊಮ್ಮನಹಳ್ಳಿಯ ದೇವರಚಿಕ್ಕನಹಳ್ಳಿ ಆಶ್ರಿತ್ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಬೆಂಕಿ ಹೊತ್ತಿಕೊಂಡು ತಾಯಿ–ಮಗಳು ಮೃತಪಟ್ಟ ಘಟನೆ ನೆನಪು ಮಾಸುವ ಮುನ್ನವೇ ನಗರದಲ್ಲಿ ಗುರುವಾರ ಮತ್ತೊಂದು ಅವಘಡ ಸಂಭವಿಸಿದೆ.

ಚಾಮರಾಜಪೇಟೆ ಸೀತಾಪತಿ ಅಗ್ರಹಾರದ 4ನೇ ಅಡ್ಡರಸ್ತೆಯಲ್ಲಿರುವ ಗೋದಾಮಿನಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಅದರ ತೀವ್ರತೆಗೆ ದೇಹಗಳು ಛಿದ್ರ ಛಿದ್ರವಾಗಿ ಇಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ.

‘ಗೋರಿಪಾಳ್ಯದ ಅಸ್ಲಂಪಾಷಾ (59) ಹಾಗೂ ತಮಿಳುನಾಡಿನ ಮನೋಹರ್ (29) ಮೃತರು. ಬೆಳಿಗ್ಗೆ 11.40ರ ಸುಮಾರಿಗೆ ಸಂಭವಿಸಿದ್ದ ಸ್ಫೋಟದಿಂದಾಗಿ ಜೇಮ್ಸ್, ಅಂಗೂಸ್ವಾಮಿ, ಮಂಜುನಾಥ್, ಗಣಪತಿ ಸೇರಿ ಏಳು ಮಂದಿ ಗಾಯಗೊಂಡಿದ್ದಾರೆ. 10ಕ್ಕೂ ಹೆಚ್ಚು ವಾಹನಗಳು ಸ್ಫೋಟದ ತೀವ್ರತೆಗೆ ನಜ್ಜುಗುಜ್ಜಾಗಿವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಮೃತ ಅಸ್ಲಂ ಪಾಷಾ, ಪಂಕ್ಚರ್ ಅಂಗಡಿ ನಡೆಸುತ್ತಿದ್ದರು. ಮನೋಹರ್, ಟಾಟಾ ಏಸ್ ಚಾಲಕ. ಅವರಿಬ್ಬರ ಮೃತದೇಹಗಳು ಛಿದ್ರ ಛಿದ್ರವಾಗಿ ಸ್ಥಳದಲ್ಲಿ ಬಿದ್ದಿದ್ದವು. ಒಟ್ಟುಗೂಡಿಸಿ ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದೂ ತಿಳಿಸಿದರು.

ಸುಮಾರು 40 ಕೆ.ಜಿ ಪಟಾಕಿ ಸ್ಫೋಟ: ‘ಅವಘಡ ಸಂಬಂಧ ವಿ.ವಿ.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯೂ ಆಗಿರುವ ಪಟಾಕಿ ವಿತರಕ ಬಾಬು ಎಂಬಾತನನ್ನು ಬಂಧಿಸಲಾಗಿದ್ದು, ಆತನ ನಿರ್ಲಕ್ಷ್ಯವೇ ಸ್ಫೋಟಕ್ಕೆ ಕಾರಣವೆಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ಸ್ಥಳೀಯ ನಿವಾಸಿ ಬಾಬು, ತಮಿಳುನಾಡಿನ ಶಿವಕಾಶಿಯಿಂದ ಪಟಾಕಿ ಖರೀದಿಸಿ ತಂದು ನಗರದ ಅಂಗಡಿಗಳಿಗೆ ಪೂರೈಕೆ ಮಾಡುತ್ತಿದ್ದ. ಬಾಕ್ಸ್‌ಗಳ ಸಂಗ್ರಹಕ್ಕಾಗಿ ಸಣ್ಣ ಗೋದಾಮು ಮಾಡಿಕೊಂಡಿದ್ದ. ಅದೇ ಗೋದಾಮು ಅಕ್ಕ–ಪಕ್ಕದಲ್ಲಿ ಪಂಕ್ಚರ್ ಅಂಗಡಿ, ಲಾರಿ ದುರಸ್ತಿ ಮಳಿಗೆ, ಟೀ ಅಂಗಡಿ ಹಾಗೂ ಮನೆಗಳು ಇದ್ದವು. ಗುರುವಾರವೂ 80 ಬಾಕ್ಸ್ ಪಟಾಕಿ ತರಿಸಿದ್ದ ಆರೋಪಿ, ಗೋದಾಮಿನಲ್ಲಿ ಸಂಗ್ರಹಿಸಿದ್ದ. ಒಂದು ಬಾಕ್ಸ್‌ನಲ್ಲಿ 15 ಕೆ.ಜಿ.ಯಿಂದ 20 ಕೆ.ಜಿ.ಯಷ್ಟು ಪಟಾಕಿ ಇತ್ತು’ ಎಂದೂ ಅವರು ವಿವರಿಸಿದರು.

‘ಬೆಳಿಗ್ಗೆ 11.40ರ ಸುಮಾರಿಗೆ ಪಟಾಕಿಯ 80 ಬಾಕ್ಸ್‌ಗಳ ಪೈಕಿ ಎರಡು ಬಾಕ್ಸ್‌ಗಳು ಸ್ಫೋಟಗೊಂಡಿದ್ದವು. ಏನಾಯಿತೆಂದು ನೋಡಲು ಸ್ಥಳೀಯರು ಬಂದಾಗ, ದೇಹಗಳು ಛಿದ್ರವಾಗಿ ಬಿದ್ದಿದ್ದವು. ಹಲವೆಡೆ ರಕ್ತ ಚೆಲ್ಲಾಡಿತ್ತು. ಗೋದಾಮು ಹಾಗೂ ಅಕ್ಕ–ಪಕ್ಕದ ಮಳಿಗೆಗಳಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಕೆಲ ಮನೆಗಳ ಕಿಟಕಿ ಗಾಜುಗಳು ಒಡೆದಿದ್ದವು. ಅಗ್ನಿಶಾಮಕದ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು’ ಎಂದೂ ಅವರು ತಿಳಿಸಿದರು.

‘ಗೋದಾಮಿನ ಪಕ್ಕದಲ್ಲಿದ್ದ ಪಂಕ್ಚರ್ ಅಂಗಡಿ ಮಾಲೀಕ ಅಸ್ಲಂ ಪಾಷಾ, ಅಂಗಡಿಯೊಳಗಿದ್ದ ಹೊರಗೆ ಹಾರಿ ಬಿದ್ದು ಮೃತಪಟ್ಟರು. ಇನ್ನೊಂದು ಮಳಿಗೆಗೆ ಸಾಮಗ್ರಿಗಳನ್ನು ಪೂರೈಸಲು ಬಂದಿದ್ದ ಟಾಟಾ ಏಸ್ ಚಾಲಕ ಮನೋಹರ್, ವಾಹನ ಬಳಿಯಿಂದ ಹಾರಿ ಗೋಡೆಗೆ ತಾಗಿಮೃತಪಟ್ಟಿದ್ದರು. ಚಹಾ ಅಂಗಡಿ, ರಸ್ತೆಯಲ್ಲಿ ಹೋಗುತ್ತಿದ್ದವರು ತೀವ್ರ ಗಾಯಗೊಂಡರು’ ಎಂದೂ ಅವರು ಹೇಳಿದರು.

ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಶ್ವಾನ ದಳದ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳದಲ್ಲಿ ಪರಿಶೀಲನೆ ನಡೆಸಿದರು. ಸ್ಫೋಟದ ಅವಶೇಷಗಳ ಮಾದರಿಗಳನ್ನು ತಜ್ಞರು ಸಂಗ್ರಹಿಸಿದರು.

‘ಪಟಾಕಿ ಅಕ್ರಮ ಸಂಗ್ರಹ’
‘ಆರೋಪಿ ಬಾಬು, ಬಿಬಿಎಂಪಿಯಿಂದ ಯಾವುದೇ ಅನುಮತಿ ಪಡೆಯದೇ ಅಕ್ರಮವಾಗಿ ಪಟಾಕಿಗಳನ್ನು ಸಂಗ್ರಹಿಸಿದ್ದರು. ಗೋದಾಮಿನಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಅವರ ನಿರ್ಲಕ್ಷ್ಯದಿಂದಲೇ ಎರಡು ಸಾವುಗಳು ಸಂಭವಿಸಿವೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಐಪಿಸಿ ಹಾಗೂ ಸ್ಫೋಟಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಾಬುನನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದೂ ಹೇಳಿದರು.

ತಲಾ ₹ 2 ಲಕ್ಷ ಪರಿಹಾರ: ಜಮೀರ್
‘ಮೃತ ಅಸ್ಲಂ ಪಾಷಾ ಹಾಗೂ ಮನೋಹರ್ ಅವರಿಗೆ ನನ್ನ ವೈಯಕ್ತಿಕವಾಗಿ ತಲಾ ₹ 2 ಲಕ್ಷ ಪರಿಹಾರ ನೀಡುತ್ತೇನೆ. ಗಾಯಾಳುಗಳ ಚಿಕಿತ್ಸೆ ವೆಚ್ಚ ಭರಿಸುತ್ತೇನೆ’ ಎಂದು ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಜಮೀರ್ ಅಹ್ಮದ್ ಖಾನ್ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.