ADVERTISEMENT

ಉನ್ನತ ಶಿಕ್ಷಣಕ್ಕೆ ಸುಧಾರಣೆ ಸ್ಪರ್ಶ ನೀಡಲು ಇಲಿನಾಯ್‌ ವಿ.ವಿ ಜತೆ ಶೀಘ್ರ ಒ‍ಪ್ಪಂದ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 19:32 IST
Last Updated 29 ಜನವರಿ 2020, 19:32 IST
ಇಲಿನಾಯ್ ವಿಶ್ವವಿದ್ಯಾಲಯದ ಅಧ್ಯಕ್ಷ ತಿಮೋಟಿ ಕಿಲೆನ್ ಅವರನ್ನು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸ್ವಾಗತಿಸಿದರು
ಇಲಿನಾಯ್ ವಿಶ್ವವಿದ್ಯಾಲಯದ ಅಧ್ಯಕ್ಷ ತಿಮೋಟಿ ಕಿಲೆನ್ ಅವರನ್ನು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸ್ವಾಗತಿಸಿದರು   

ಬೆಂಗಳೂರು: ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಹಾಗೂ ವಿಶ್ವವಿದ್ಯಾಲಯಗಳ ಸಹಭಾಗಿತ್ವದಲ್ಲಿ ಕೆಲಸ ಮಾಡಲು ಅಮೆರಿಕದ ಇಲಿನಾಯ್ ವಿಶ್ವವಿದ್ಯಾಲಯ ಮುಂದೆ ಬಂದಿದೆ.

ಉಪಮುಖ್ಯಮಂತ್ರಿಡಾ.ಸಿ.ಎನ್.ಅಶ್ವತ್ಥನಾರಾಯಣ ಅವರನ್ನು ವಿಕಾಸಸೌಧದಲ್ಲಿ ಬುಧವಾರ ಭೇಟಿ ಮಾಡಿದ ಇಲಿನಾಯ್ ವಿಶ್ವವಿದ್ಯಾಲಯದ ಅಧ್ಯಕ್ಷ ತಿಮೋಟಿ ಕಿಲೆನ್ ನೇತೃತ್ವದ ತಂಡ ಈ ಸಂಬಂಧ ಮಾತುಕತೆ ನಡೆಸಿತು.

ಎಂ.ಎಸ್.ರಾಮಯ್ಯ ವಿಶ್ವವಿದ್ಯಾಲಯದ ಜತೆ ಮೂರು ವರ್ಷಗಳಿಂದ ಇಲಿನಾಯ್ ವಿಶ್ವವಿದ್ಯಾಲಯ ಕೆಲಸ ಮಾಡುತ್ತಿದ್ದು, ಈಗ ಇತರ ವಿಶ್ವವಿದ್ಯಾಲಯಗಳ ಜತೆಗೂ ಕೆಲಸ ಮಾಡಲು ಮುಂದೆ ಬಂದಿದೆ. ಇಲಿನಾಯ್ ವಿಶ್ವವಿದ್ಯಾಲಯದ ಈ ನಿರ್ಧಾರವನ್ನು ರಾಜ್ಯ ಸರ್ಕಾರ ಸ್ವಾಗತಿಸಿದೆ.

ADVERTISEMENT

‘ಶಿಕ್ಷಣ, ತಂತ್ರಜ್ಞಾನ, ಕೌಶಲ ಅಭಿವೃದ್ಧಿ, ವೈದ್ಯಕೀಯ ಶಿಕ್ಷಣ, ತಂತ್ರಜ್ಞಾನ, ದೂರಶಿಕ್ಷಣ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಇಲಿನಾಯ್‌ ವಿಶ್ವವಿದ್ಯಾಲಯದ ಜತೆ ಕೆಲಸ ಮಾಡಲು ಆಸಕ್ತಿ ಇದೆ. ವಿಶ್ವಮಟ್ಟದ ಉನ್ನತ ಶಿಕ್ಷಣ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೂ ಸಿಗಲಿ ಎನ್ನುವ ಕಾರಣಕ್ಕೆ ಈ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ನಗರದಲ್ಲಿ ಇಲಿನಾಯ್‌ ಕಚೇರಿ: ಬೆಂಗಳೂರು ಸೆಂಟ್ರಲ್ ವಿಶ್ವವಿದ್ಯಾ ಲಯದ ಆವರಣದಲ್ಲಿ ಇಲಿನಾಯ್‌ ವಿಶ್ವವಿದ್ಯಾಲಯದ ಕಚೇರಿ ತೆರೆಯಲು ಜಾಗ ನೀಡುವುದಕ್ಕೂ ಒಪ್ಪಿಗೆ ಸೂಚಿಸಿದ ಸಚಿವರು, ಈ ಸಂಬಂಧ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.‌

ಎಂ.ಎಸ್.ರಾಮಯ್ಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಆರ್.ಜಯರಾಮ, ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜಕುಮಾರ್ ಖತ್ರಿ ಇದ್ದರು.

ಕೃತಕ ಬುದ್ಧಿಮತ್ತೆ: ಬ್ರಿಟನ್‌ನಿಂದ ₹ 19 ಕೋಟಿ ನೆರವು

‘ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸಂಶೋಧನೆ ಮಾಡುವ ಸಲುವಾಗಿ ಇಂಗ್ಲೆಂಡ್ ಸರ್ಕಾರ ₹19 ಕೋಟಿ ನೆರವು ನೀಡಲಿದೆ’ ಎಂದು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ತಿಳಿಸಿದರು.

‘ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜಕುಮಾರ್ ಖತ್ರಿ ನೇತೃತ್ವದ ತಂಡ ಇತ್ತೀಚೆಗೆ ಇಂಗ್ಲೆಂಡ್‍ನ ಸಾಲ್ಫೋರ್ಡ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇದಕ್ಕೆಒಪ್ಪಿಗೆ ಸಿಕ್ಕಿತ್ತು. ಇದಕ್ಕೆ ಪೂರಕವಾಗಿ ಸಂಶೋಧನೆಗೆ ಸಂಬಂಧಿಸಿದ ಪ್ರಾಥಮಿಕ ವರದಿಗಳನ್ನು ಸಲ್ಲಿಸುವ ಕೆಲಸ ಆರಂಭವಾಗಿದ್ದು, 3 ತಿಂಗಳಲ್ಲಿ ಹಣ ಬಿಡುಗಡೆಯಾಗುವ ವಿಶ್ವಾಸವಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.