ADVERTISEMENT

ಲಸಿಕಾ ಅಭಿಯಾನ: ದೇಶದಲ್ಲಿ ಬಿಬಿಎಂಪಿ ಗರಿಷ್ಠ, ಆರೋಗ್ಯ ಸಚಿವ ಸುಧಾಕರ್

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 7:20 IST
Last Updated 18 ಸೆಪ್ಟೆಂಬರ್ 2021, 7:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ದೇಶವ್ಯಾಪಿಯಾಗಿ ಶುಕ್ರವಾರ (ಸೆ.17) ನಡೆದ ಲಸಿಕಾ ಅಭಿಯಾನದಲ್ಲಿ ಕರ್ನಾಟಕದ ಎರಡು ಕಡೆಗಳಲ್ಲಿ ಅತಿ ಹೆಚ್ಚು ಲಸಿಕೆ ನೀಡಲಾಗಿದೆ. ಮೊದಲು ಸ್ಥಾನದಲ್ಲಿ ಬಿಬಿಎಂಪಿ, ಎರಡನೇ ಸ್ಥಾನದಲ್ಲಿ ಬೆಳಗಾವಿ ಜಿಲ್ಲೆ ಇದೆ‘ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ರಾಜ್ಯದಲ್ಲಿ ಅತಿ ಹೆಚ್ಚು ಮಹಿಳೆಯರು ಲಸಿಕೆ ಪಡೆದಿದ್ದಾರೆ. ರಾಜ್ಯದಲ್ಲಿ ಒಟ್ಟು ಈವರೆಗೆ 5 ಕೋಟಿ ಲಸಿಕೆ ಗುರಿ ತಲುಪಿದ್ದೇವೆ’ ಎಂದರು.

‘ಲಸಿಕಾ ಅಭಿಯಾನದಲ್ಲಿ ದೇಶ ಮಹತ್ವದ ಸಾಧನೆ ಮಾಡಿದೆ. ಶುಕ್ರವಾರ ಒಂದೇ ದಿನ ಭಾರತದಲ್ಲಿ 2.50 ಕೋಟಿ ಲಸಿಕೆ ನೀಡಲಾಗಿದೆ. ಇಡೀ ವಿಶ್ವದಲ್ಲಿ ಈ ಮಟ್ಟದಲ್ಲಿ ಲಸಿಕೆ ಎಲ್ಲಿಯೂ ಕೊಟ್ಟಿರಲಿಲ್ಲ. ನಮ್ಮ ರಾಜ್ಯದಲ್ಲಿ 30 ಲಕ್ಷದ ಗುರಿ ಹಮ್ಮಿಕೊಂಡಿದ್ದೆವು. 29.5 ಲಕ್ಷ ಲಸಿಕೆ ನೀಡಲಾಗಿದೆ. ಇಂದು ಸಂಜೆಯ ಒಳಗೆ ವೆಬ್ ಸೈಟ್‌ನಲ್ಲಿ ಅಪ್ ಲೋಡ್ ಆಗಲಿದೆ‘ ಎಂದರು.

ADVERTISEMENT

‘ಇಡೀ ದೇಶದಲ್ಲೇ ಕರ್ನಾಟಕ ಅತಿ ಹೆಚ್ಚು ಲಸಿಕೆ ನೀಡಿದ ರಾಜ್ಯವಾಗಿದೆ. ನಂತರದ ಸ್ಥಾನದಲ್ಲಿ ಗುಜರಾತ್, ಮಧ್ಯಪ್ರದೇಶ, ಬಿಹಾರ ರಾಜ್ಯಗಳಿವೆ. ರಾಜ್ಯದಲ್ಲಿ 14 ಜಿಲ್ಲೆಗಳಲ್ಲಿ ನಿಗದಿಪಡಿಸಿದ ಗುರಿಗಿಂತ ಹೆಚ್ಚು ಲಸಿಕೆ ನೀಡಲಾಗಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಅತಿ‌ ಕಡಿಮೆ ಲಸಿಕೆ ಹಾಕಲಾಗಿದೆ. ಕೊಡಗು‌ ಕೊನೆಯ ಸ್ಥಾನಲ್ಲಿದೆ. ಬಿಬಿಎಂಪಿ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಬಳ್ಳಾರಿ, ತುಮಕೂರು ಜಿಲ್ಲೆಗಳು ದೇಶದಲ್ಲೇ ಲಸಿಕೆ ವಿತರಣೆಯಲ್ಲಿ ಮೊದಲ 5 ಸ್ಥಾನಗಳಲ್ಲಿವೆ. ಒಂದು ಕೋಟಿ ಮಂದಿ ಎರಡು ಡೋಸ್ ಪಡೆದಿದ್ದಾರೆ‘ ಎಂದರು.

ಆಯುಷ್ಮಾನ್ ಆರೋಗ್ಯ ಕಾರ್ಡ್‌: ‘ಮೂರು ತಿಂಗಳಲ್ಲಿ ಎಲ್ಲರ ಮನೆಗಳಿಗೂ ಆಯುಷ್ಮಾನ್ ಆರೋಗ್ಯ ಕಾರ್ಡ್ ತಲುಪಿಸುವನ್ನು ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ’ ಎಂದರು.

ಆಸ್ಪತ್ರೆಗಳಲ್ಲಿ ನೆಗಡಿ, ಜ್ವರ ರೋಗಿಗಳ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಇದು ಸೀಜನ್ ವೈರಲ್ ಪ್ಲ್ಯೂ ಅಷ್ಟೇ. ಎಲ್ಲಿಯೂ ಕೊರೊನಾ ಸೋಂಕು ಹೆಚ್ಚಳ ಕಂಡುಬಂದಿಲ್ಲ. ಆದರೆ, ಜನ ಜಾಗೃತರಾಗಿಯೇ ಇರಬೇಕು’ ಎಂದರು.

ಮಂಗಳೂರು‌ ಮೂಲದ ವ್ಯಕ್ತಿಗೆ ನಿಫಾ‌ ವೈರಸ್ ಶಂಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಆ ಬಗ್ಗೆ ವರದಿ ಇನ್ನೂ‌ ಬಂದಿಲ್ಲ. ಮೊದಲ‌ ಹಂತದ ವರದಿಯಲ್ಲಿ ನೆಗೆಟಿವ್ ಬಂದಿದೆ. ಅವರೇ ಸ್ವಯಂಪ್ರೇರಿತವಾಗಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಅವರು ಕೇರಳದಲ್ಲಿ‌ ಕೆಲಸ ಮಾಡುತ್ತಾರೆ ಎಂಬ ಕಾರಣಕ್ಕೆ ಹೆಚ್ಚಿನ ತಪಾಸಣೆ ನಡೆಸುತ್ತಿದ್ದು, ವರದಿ ಬರಲು ಇನ್ನೂ ನಾಲ್ಕು ದಿನ‌ ಆಗಬಹುದು‘ ಎಂದರು.

ದೇವಾಲಯ ತೆರವು ಸಂಬಂಧ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಅವರು, ‘ಕೆಲವೊಂದು ಕಾನೂನು ಪ್ರಕಾರ ನಡೆದಿರುತ್ತದೆ. ಅದನ್ನು ಸರಿಪಡಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಇದನ್ನು ಕಾಂಗ್ರೆಸ್‌ನಿಂದ ಪಾಠ ಕಲಿಯಬೇಕಿಲ್ಲ. ನಮ್ಮಿಂದ ಬೇರೆಯವರು ನೋಡಿ ಕಲಿಯಬೇಕು. ಹಿಂದುತ್ವ ಕಾಪಾಡುವುದನ್ನು ಎಲ್ಲರೂ ಮಾಡಬೇಕು‘ ಎಂದರು.

‘ಧರ್ಮವನ್ನು ಹೇಗೆ ರಕ್ಷಣೆ ಮಾಡಬೇಕು ಎಂದು ನಮಗೆ ಗೊತ್ತಿದೆ. ಯಾರ ಭಾವನೆಗೂ ಧಕ್ಕೆಯಾದಂತೆ ಹಿಂದುತ್ವವನ್ನು ಕಾಪಾಡುತ್ತೇವೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.