ADVERTISEMENT

ಜಾಲದ ‘ಸೂತ್ರಧಾರಿ’ ದೆಹಲಿಯ ಶಾಫಿಯಾ!

ಕಡಿಮೆ ದರಕ್ಕೆ ವಿದೇಶಿ ಕರೆನ್ಸಿ ಕೊಡುವ ನೆಪದಲ್ಲಿ ವಂಚನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 20:03 IST
Last Updated 14 ಅಕ್ಟೋಬರ್ 2019, 20:03 IST
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು   

ಬೆಂಗಳೂರು: ವಿದೇಶಿ ಕರೆನ್ಸಿಯನ್ನು ಕಡಿಮೆ ದರದಲ್ಲಿ ಕೊಡುವ ನೆಪದಲ್ಲಿ ವಂಚಿಸುತ್ತಿದ್ದ ಎಂಟು ಅಂತರರಾಜ್ಯ ವಂಚಕರನ್ನು ಬಂಧಿಸಿರುವ ಜಯನಗರ ಪೊಲೀಸರು, ಆರೋಪಿಗಳಿಂದ 30 ಸೌದಿ ರಿಯಾಲ್ (ಸೌದಿ ಅರೇಬಿಯಾದ ಕರೆನ್ಸಿ) ಮತ್ತು ₹ 3.50 ಲಕ್ಷ ವಶಪಡಿಸಿಕೊಂಡಿದ್ದಾರೆ.

ಉತ್ತರ ಪ್ರದೇಶದವರಾದ ಮೊಹಮ್ಮದ್ ಶಕೀಲ್ ಶೇಖ್ (19), ರಹೀಂ ಖುರೇಶಿ (24), ಮಹಮದ್ ದಿಲ್ವರ್ ಹುಸೇನ್ (39), ಮೊಹಮ್ಮದ್ ಶಾನವಾಜ್ (30), ಮೊಹಮ್ಮದ್ ಇಬ್ರಾಹಿಂ (30), ರಹೀಂ ಶೇಖ್ (56) ಮತ್ತು ಅನ್ವರ್ ಹುಸೇನ್ (24) ಮತ್ತು ದೆಹಲಿಯ ಶಾಫಿಯಾ ಬೇಗಂ (34) ಬಂಧಿತರು.

ಆರೋಪಿಗಳ ಬಂಧನದ ಮೂಲಕ 2011ರಿಂದ 2019ರ ಅವಧಿಯಲ್ಲಿ ವಿವೇಕನಗರ ಮತ್ತು ಎಸ್‌ಜೆ ಪಾರ್ಕ್‌ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಆರು ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ADVERTISEMENT

ಈ ವಂಚನೆ ಜಾಲದ ಪ್ರಮುಖ ಆರೋಪಿ ಶಾಫಿಯಾ ಬೇಗಂ. ಆಕೆ ಪರಿಚಯಸ್ಥರೊಬ್ಬರ ಮೂಲಕ ಸೌದಿ ರಿಯಾಲ್ ಪಡೆದುಕೊಂಡಿದ್ದಳು. ಆಗಾಗ ನಗರಕ್ಕೆ ಬರುತ್ತಿದ್ದ ಆಕೆ, ದೆಹಲಿ, ಪಶ್ಚಿಮ ಬಂಗಾಳ ಮತ್ತು ಉತ್ತರಪ್ರದೇಶದ ನಿರುದ್ಯೋಗಿ ಯುವಕರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಕರೆದುಕೊಂಡು ಬರುತ್ತಿದ್ದಳು.

ಆ ಯುವಕರನ್ನು ಎರಡು ಪ್ರತ್ಯೇಕ ಗುಂಪುಗಳಾಗಿ ಮಾಡಿ, ಅವರಿಗೆ ರಾಜು ಹೆಗ್ಗನಹಳ್ಳಿ ಮತ್ತು ಪರಪ್ಪನ ಅಗ್ರಹಾರದ ವೀರಪ್ಪರೆಡ್ಡಿ ಲೇಔಟ್‌ನಲ್ಲಿ ಕಡಿಮೆ ದರದಲ್ಲಿ ಬಾಡಿಗೆ ಮನೆ ಮಾಡಿಕೊಟ್ಟಿದ್ದಳು. ಬಳಿಕ ಅವರೆಲ್ಲರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ತನ್ನ ಬಳಿಯಿದ್ದ ವಿದೇಶಿ ಕರೆನ್ಸಿಗಳನ್ನು ಕೊಟ್ಟು ವಂಚನೆ ಮಾಡುವ ಬಗ್ಗೆ ತರಬೇತಿ ನೀಡಿ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಳು. ಆಕೆಯ ಸೂಚನೆಯಂತೆ ಆರೋಪಿಗಳು ಕ್ಯಾಬ್, ಆಟೊದಲ್ಲಿ ತೆರಳಿ ವಾಹನ ಚಾಲಕರನ್ನು ಮತ್ತು ಮಧ್ಯಮ ವರ್ಗದ ಜನರನ್ನು ಸಂಪರ್ಕಿಸಿ ಕಡಿಮೆ ದರಕ್ಕೆ ವಿದೇಶಿ ಕರೆನ್ಸಿ ನೀಡುವುದಾಗಿ ನಂಬಿಸಿ, ನಿಗದಿಪಡಿಸಿದ ಪ್ರದೇಶಕ್ಕೆ ಕರೆಸಿಕೊಂಡು ಹಣ ಪಡೆದು ಪರಾರಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

ಸಿಕ್ಕಿಬಿದ್ದಿದ್ದು ಹೇಗೆ?: ಅ. 4ರಂದು ಜಾನ್ಸನ್ ಮಾರುಕಟ್ಟೆಯಲ್ಲಿ ಜಯನಗರ ನಿವಾಸಿ ಕ್ಯಾಬ್ ಚಾಲಕ ಸೈಯ್ಯದ್ ಖಲೀಫ್ ಉಲ್ಲಾ ಎಂಬುವರನ್ನು ಆರೋಪಿಗಳಾದ ರಹೀಂ, ಇಬ್ರಾಹಿಂ ಮತ್ತು ಮೊಹಮ್ಮದ್ ಶಕೀಲ್ ಪರಿಚಯಿಸಿಕೊಂಡಿದ್ದರು. ಬಳಿಕ ಸೌದಿ ರಿಯಾಲ್ ತೋರಿಸಿ, ತಮ್ಮ ಬಳಿ ಲಕ್ಷಾಂತರ ಮೌಲ್ಯದ ವಿದೇಶಿ ಕರೆನ್ಸಿ ಇದ್ದು, ಅದನ್ನು ಭಾರತೀಯ ಹಣಕ್ಕೆ ವರ್ಗಾಯಿಸಲು ಆಗುತ್ತಿಲ್ಲ. ₹ 3.50 ಲಕ್ಷ ನೀಡಿದರೆ ವಿದೇಶಿ ಕರೆನ್ಸಿ ಕೊಡುವುದಾಗಿ ನಂಬಿಸಿದ್ದರು.

ಈ ಮಾತು ನಂಬಿದ ಸೈಯ್ಯದ್ ಖಲೀಫ್, ತಮ್ಮ ಬಳಿ ಇದ್ದ ಹಣ ಕೊಟ್ಟು, ಆ ಕರೆನ್ಸಿ ಪಡೆಯಲು ಒಪ್ಪಿಕೊಂಡಿದ್ದರು. ಸೆ. 4ರಂದು ಜಯನಗರದ 5ನೇ ಹಂತದ ನಿಮಾರ್ ಮಸೀದಿ ಬಳಿ ಸೈಯ್ಯದ್ ಖಲೀಫ್‌ ಅವರನ್ನು ಕರೆಸಿಕೊಂಡು 50 ಸೌದಿ ರಿಯಾಲ್‌ ತೋರಿಸಿ ಕಡಿಮೆ ದರಕ್ಕೆ ಕೊಡುವುದಾಗಿ ಆಮಿಷ ಒಡ್ಡಿ ಹಣ ತರಿಸಿಕೊಂಡಿದ್ದರು. ಬಳಿಕ ಒಂದು ‌ಸೌದಿ ರಿಯಾಲ್‌ ಮಾತ್ರ ಕೊಟ್ಟು ಅವರನ್ನು ತಳ್ಳಿ ₹ 3.50 ಲಕ್ಷ ಕಸಿದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಜಯನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರು, ಆರೋಪಿಗಳ ಮೊಬೈಲ್ ಲೊಕೇಶನ್ ಆಧರಿಸಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ, ರಸ್ತೆ ಬದಿಯ ವ್ಯಾಪಾರಿಯೊಬ್ಬರನ್ನು ವಂಚಿಸಲು ಯತ್ನಿಸುತ್ತಿದ್ದ ಶಕೀಲ್ ಶೇಖ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಇಡೀ ಜಾಲ ಬಯಲಿಗೆ ಬಂತು ಎಂದು ಪೊಲೀಸರು ತಿಳಿಸಿದರು.

2011ರಲ್ಲಿ ಸಿಕ್ಕಿಬಿದ್ದಿದ್ದ ವಂಚಕಿ

ಶಾಫಿಯಾ ಬೇಗಂ 2011ರಲ್ಲಿ ಎಸ್‌ಜೆ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದು ಜೈಲು ಸೇರಿದ್ದಳು. ಬಳಿಕ ಜಾಮೀನು ಪಡೆದು ಹೊರಬಂದಿದ್ದಳು. ಆದರೆ, ನಂತರ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದಳು. ಆಗಾಗ ನಗರಕ್ಕೆ ಬಂದು ಕೃತ್ಯ ಎಸಗಿ ಪರಾರಿಯಾಗುತ್ತಿದ್ದಳು. ಅಲ್ಲದೆ, 2018ರಲ್ಲಿ ತನ್ನ ತಂಡದ ಜೊತೆ ಬೆಂಗಳೂರಿಗೆ ಬಂದಿದ್ದ ಶಾಫಿಯಾ, ವಿವೇಕನಗರ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹಾಗೂ 2019ರಲ್ಲಿ ಮತ್ತೊಂದು ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.