ADVERTISEMENT

ಬರ–ನೆರೆ ತಾಳಿಕೊಳ್ಳುವ ಕೃಷಿ ಪದ್ಧತಿಗೆ ಆದ್ಯತೆ: ಡಾ. ಎಸ್. ರಾಜೇಂದ್ರ ಪ್ರಸಾದ್‌

ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ 24ರಿಂದ ಕೃಷಿಮೇಳ

ಗುರು ಪಿ.ಎಸ್‌
Published 21 ಅಕ್ಟೋಬರ್ 2019, 19:29 IST
Last Updated 21 ಅಕ್ಟೋಬರ್ 2019, 19:29 IST
ಡಾ. ಎಸ್. ರಾಜೇಂದ್ರ ಪ್ರಸಾದ್‌
ಡಾ. ಎಸ್. ರಾಜೇಂದ್ರ ಪ್ರಸಾದ್‌   

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಜಿಕೆವಿಕೆ ಆವರಣದಲ್ಲಿ ಇದೇ 24ರಿಂದ 27ರವರೆಗೆ ಕೃಷಿ ಮೇಳವನ್ನು ಆಯೋಜಿಸಿದೆ. ‘ನಿಖರ ಕೃಷಿ ಮತ್ತು ಸುಸ್ಥಿರ ಅಭಿವೃದ್ಧಿ’ – ಈ ವರ್ಷದ ಘೋಷವಾಕ್ಯ. ನೆರೆ ಮತ್ತು ಬರ ಪರಿಸ್ಥಿತಿಯಿಂದ ಸಂಕಷ್ಟಕ್ಕೀಡಾಗಿರುವ ರೈತ ಸಮುದಾಯಕ್ಕೆ ಪರ್ಯಾಯ ಮಾರ್ಗಗಳನ್ನು ಪರಿಚಯಿಸುವುದು ಮೇಳದ ಉದ್ದೇಶ. ಕೃಷಿ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟು ಮತ್ತು ಸವಾಲುಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮೇಳದ ಕಾರ್ಯಕ್ರಮ ರೂಪಿಸಲಾಗಿದೆ. ಈ ಕುರಿತು ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ರಾಜೇಂದ್ರ ಪ್ರಸಾದ್‌ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

l‘ನಿಖರ ಕೃಷಿ’ಯ ಪರಿಕಲ್ಪನೆ ವಿವರಿಸಿ. ಅದು ಬರಗಾಲಕ್ಕೆ ಎಷ್ಟು ಸಹಕಾರಿ?

ಬರಪೀಡಿತ ಪ್ರದೇಶಗಳಲ್ಲಿ ಲಭ್ಯವಾಗುವಷ್ಟು ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ವಿಧಾನಕ್ಕೆ ‘ನಿಖರ ಕೃಷಿ’ ಎನ್ನುತ್ತೇವೆ. ಬೆಳೆಗೆ ಅಗತ್ಯವಿರುವಷ್ಟೇ ನೀರು ಮತ್ತು ಗೊಬ್ಬರವನ್ನು ಪೂರೈಸುವುದು (ನೀರು ಮತ್ತು ಗೊಬ್ಬರವನ್ನು ಬೆರೆಸಿ, ದ್ರವ ರೂಪದಲ್ಲಿ ಬೆಳೆಗೆ ಪೂರೈಸುವುದು). ಕಡಿಮೆ ನೀರಿನಲ್ಲಿ ಕೃಷಿ ಮಾಡುವುದು ಕೂಡ ನಿಖರ ಕೃಷಿ ಪರಿಕಲ್ಪನೆಯ ಭಾಗವಾಗಿದೆ. ಇಂಥ ಚಟುವಟಿಕೆಗಳ ಬಗ್ಗೆ ಮೇಳದಲ್ಲಿ ಪ್ರಾತ್ಯಕ್ಷಿಕೆಗಳಿರುತ್ತವೆ.

ADVERTISEMENT

lರಾಜ್ಯದಲ್ಲಿ ಅತಿ ಹೆಚ್ಚು ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರಿದ್ದಾರೆ. ಅವರಿಗೆ ಈ ಮೇಳ ಯಾವ ರೀತಿ ಸಹಕಾರಿಯಾಗಲಿದೆ?

ಪ್ರಸ್ತುತ ಸಣ್ಣ ಹಿಡುವಳಿದಾರರ ಪ್ರಮುಖ ಸಮಸ್ಯೆ ಎಂದರೆ, ಕೂಲಿ ಕಾರ್ಮಿಕರದ್ದು. ಅದಕ್ಕೆ ಪರಿಹಾರವಾಗಿ ಅವರಿಗೆ ಯಂತ್ರಗಳ ಅವಶ್ಯಕತೆ ಇದೆ. ಆದರೆ, ದೊಡ್ಡ ಯಂತ್ರಗಳನ್ನು ಖರೀದಿಸುವುದು ಕಷ್ಟ. ಈ ಹಿನ್ನೆಲೆಯಲ್ಲಿ ಸಣ್ಣ ಯಂತ್ರಗಳನ್ನು ಮೇಳದಲ್ಲಿ ಪ್ರದರ್ಶನಕ್ಕಿಡುತ್ತೇವೆ. ಜತೆಗೆ, ಪ್ರಾತ್ಯಕ್ಷಿಕೆಯೂ ಇರುತ್ತದೆ. ಸಮಗ್ರ ವ್ಯವಸಾಯ ಪದ್ಧತಿ ಅಳವಡಿಸಲು ಅವರಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಬೆಳೆ ಜತೆಗೆ ಉಪಕಸುಬಾಗಿ ಕುರಿ, ಕೋಳಿ ಮತ್ತು ಮೀನು ಸಾಕಣೆಯ ಕುರಿತು ಮಾಹಿತಿ ನೀಡಲಾಗುತ್ತದೆ. ಬೆಳೆ ಕೈಕೊಟ್ಟರೂ, ಈ ಉಪಕಸುಬುಗಳು ರೈತರನ್ನು ಆರ್ಥಿಕವಾಗಿ ಕೈಹಿಡಿಯುತ್ತವೆ. ಈಗಾಗಲೇ ಕೋಲಾರ, ಚಿಕ್ಕಬಳ್ಳಾಪುರದಂತಹ ಬರ ಪೀಡಿತ ಪ್ರದೇಶಗಳಲ್ಲಿ ಈ ಬಗ್ಗೆ ಸುಮಾರು 18 ಸಾವಿರ ರೈತರಿಗೆ ಅರಿವು ಮೂಡಿಸಲಾಗಿದೆ. ರೈತರಿಗಷ್ಟೇ ಅಲ್ಲದೇ ಒಂದು ಲಕ್ಷಕ್ಕೂ ಹೆಚ್ಚು ಸಾರ್ವಜನಿಕರಿಗೂ ಮಾಹಿತಿ ನೀಡಿದ್ದೇವೆ. ಈ ವಿಧಾನವನ್ನು ಅಳವಡಿಸಿಕೊಂಡವರು ಉತ್ತಮ ಆದಾಯ ಗಳಿಸುತ್ತಿದ್ದಾರೆ.

lಸಹಕಾರ ಕೃಷಿಗಿಂತ ಒಪ್ಪಂದ ಕೃಷಿ (ಕಾಂಟ್ರಾಕ್ಟ್‌ ಫಾರ್ಮಿಂಗ್‌) ಹೆಚ್ಚು ಪ್ರಚಲಿತವಾಗುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ?

ಒಪ್ಪಂದ ಕೃಷಿಯಲ್ಲಿ ಹೆಚ್ಚು ಲಾಭವಿದೆ. ಹೀಗಾಗಿ ಸಹಜವಾಗಿ ರೈತರು ಅದರತ್ತ ಆಕರ್ಷಿತರಾಗುತ್ತಿದ್ದಾರೆ. ಬೀಜ, ಗೊಬ್ಬರ ಮತ್ತು ತಾಂತ್ರಿಕ ಸಹಕಾರ ನೀಡುವುದರ ಜೊತೆಗೆ, ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರದಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸುವ ಕುರಿತು ಕಂಪನಿಗಳು ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತವೆ. ಇದರಿಂದ ಇಬ್ಬರಿಗೂ ಲಾಭ. ರೈತರಿಗೆ ಒಪ್ಪಂದ ಕೃಷಿಯ ಸಾಧಕ–ಬಾಧಕಗಳ ಕುರಿತ ಮಾಹಿತಿಯನ್ನು ಕೂಡ ನೀಡಲಾಗುವುದು.

lಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಆನ್‌ಲೈನ್‌ ಪಾವತಿ ವ್ಯವಸ್ಥೆಯೂ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ ಎಂಬ ಆಕ್ಷೇಪಗಳಿವೆ. ಈ ಕುರಿತು ಕೃಷಿ ವಿಶ್ವವಿದ್ಯಾಲಯದ ಏನು ಹೇಳುತ್ತದೆ?

ರೈತರು ಬೆಳೆದ ಕೃಷಿ ಉತ್ಪನ್ನಗಳ ನ್ನು ಆನ್‌ಲೈನ್‌ ಮೂಲಕವೇ ಖರೀದಿ ಮತ್ತು ಪಾವತಿ ವ್ಯವಸ್ಥೆ ಜಾರಿಗೆ ಬಂದರೆ ಅನುಕೂಲ ವಾಗುತ್ತದೆ. ಈ ನಿಟ್ಟಿನಲ್ಲಿ ನೇರ ನಗದು ವರ್ಗಾವಣೆ (ಡಿಬಿಟಿ) ವ್ಯವಸ್ಥೆ ರೂಢಿಸಿಕೊಳ್ಳಲು ವಿಶ್ವವಿದ್ಯಾಲಯ ಸಲಹೆ ನೀಡಲಿದೆ. ಈ ವ್ಯವಸ್ಥೆ ಬಂದರೆ ಯಾವ ಉದ್ದೇಶಕ್ಕೆ ಹಣ ನೀಡಲಾಗಿದೆಯೋ, ಅದೇ ಉದ್ದೇ ಶಕ್ಕೆ ಮಾತ್ರ ಆ ಹಣ ಬಳಕೆಯಾಗುತ್ತದೆ.

lವಿಶ್ವವಿದ್ಯಾಲಯದಸಂಶೋಧನೆಗಳು ರೈತರ ಹೊಲ ತಲುಪುತ್ತಿಲ್ಲ (ಲ್ಯಾಬ್‌ ಟು ಲ್ಯಾಂಡ್‌) ಎಂಬ ಮಾತುಗಳು ಕೇಳಿಬರುತ್ತಿವೆ. ಈ ವಿಷಯದಲ್ಲಿ ನಿಮ್ಮ ಅಭಿಪ್ರಾಯವೇನು?

ಈ ಮಾತು ಒಪ್ಪುವಂಥದ್ದಲ್ಲ. ವಿಶ್ವವಿದ್ಯಾಲಯದಲ್ಲಿ ನಡೆಯುವ ಎಲ್ಲ ಸಂಶೋಧನೆಗಳನ್ನು ಕೃಷಿ ಮೇಳ, ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಇಲಾಖೆ ಮೂಲಕ ರೈತರಿಗೆ ತಲುಪಿಸಲಾಗುತ್ತಿದೆ. ಮಾತ್ರವಲ್ಲ, ರೇಡಿಯೊ, ದೂರದರ್ಶನದ ಮೂಲಕ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ಯಾವುದೇ ಹೊಸ ತಂತ್ರಜ್ಞಾನವಿದ್ದರೂ ಮೊಬೈಲ್‌ ಆ್ಯಪ್‌ ಮೂಲಕ ಕೆವಿಕೆಯಿಂದ ರೈತರಿಗೆ ಮಾಹಿತಿ ನೀಡಲಾಗುತ್ತಿದೆ.

ಪ್ರಸ್ತುತ ಕೃಷಿ ಮೇಳದಲ್ಲಿಯೂ ನೂತನವಾಗಿ ಬಿಡುಗಡೆಯಾದ ಏಳು ತಳಿಗಳ ಪ್ರಾತ್ಯಕ್ಷಿಕೆ, ಹವಾಮಾನ ವೈಪರೀತ್ಯ ಕೃಷಿ ಮಾಹಿತಿ, ಸುಧಾರಿತಕೃಷಿ ಯಂತ್ರೋಪಕರಣಗಳ ಪ್ರದರ್ಶನಗಳನ್ನು ಇದೇ ಕಾರಣಕ್ಕಾಗಿ ಆಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.