ADVERTISEMENT

ರೇಖಾ ಕದಿರೇಶ್ ಹತ್ಯೆ: ಸಿಸಿಟಿವಿ ತಿರುಗಿಸಿಟ್ಟಿದ್ದ ಆರೋಪಿಗಳು‌

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 11:02 IST
Last Updated 24 ಜೂನ್ 2021, 11:02 IST
ರೇಖಾ ಕದಿರೇಶ್‌ ಅವರ ಸಾಂದರ್ಭಿಕ ಚಿತ್ರ
ರೇಖಾ ಕದಿರೇಶ್‌ ಅವರ ಸಾಂದರ್ಭಿಕ ಚಿತ್ರ   

ಬೆಂಗಳೂರು: ಮಾಜಿ ಕಾರ್ಪೋರೇಟರ್ ಬಿಜೆಪಿಯ ರೇಖಾ ಕದಿರೇಶ್ ಅವರನ್ನು ಕಚೇರಿ ಎದುರೇ ಹತ್ಯೆ ಮಾಡಲು ಕೆಲದಿನಗಳಿಂದ ಸಂಚು ರೂಪಿಸಿದ್ದ ಆರೋಪಿಗಳು, ತಮ್ಮ ಗುರುತು ಸಿಗಬಾರದೆಂದು ಕಚೇರಿಯ ಸಿಸಿ ಟಿವಿ ಕ್ಯಾಮೆರಾವನ್ನು ತಿರುಗಿಸಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಬೆಳಿಗ್ಗೆ ನಡೆದಿರುವ ರೇಖಾ ಅವರ ಹತ್ಯೆ ತನಿಖೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ಆರೋಪಿಗಳ ಸುಳಿವು ಪತ್ತೆ ಮಾಡಿರುವ ತಂಡ, ಸದ್ಯದಲ್ಲೇ ಅವರನ್ನು ಬಂಧಿಸುವ ಸಾಧ್ಯತೆ ಇದೆ.

‘ಛಲವಾದಿಪಾಳ್ಯ ವಾರ್ಡ್‌ನ ಮಾಜಿ ಕಾರ್ಪೋರೇಟರ್ ಆಗಿದ್ದ ರೇಖಾ, ಫ್ಲವರ್ ಗಾರ್ಡನ್‌ನಲ್ಲಿ ಕಚೇರಿ ಹೊಂದಿದ್ದರು. ಅದೇ ಕಚೇರಿಯಲ್ಲಿ ನಿತ್ಯವೂ ಆಹಾರ ವಿತರಣೆ ಮಾಡುತ್ತಿದ್ದರು. ಗುರುವಾರವೂ ಬೆಳಿಗ್ಗೆ ಆಹಾರ ವಿತರಿಸಲು ಬಂದಿದ್ದರು. ಇದೇ ಸಂದರ್ಭದಲ್ಲೇ ಅವರನ್ನು ಮಾತನಾಡಿಸುವ ಸೋಗಿನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಹೊಡೆದು, ಕತ್ತು ಕೊಯ್ದು ಪರಾರಿಯಾಗಿದ್ದಾರೆ’ ಎಂದು ಮೂಲಗಳು ಹೇಳಿವೆ.

ADVERTISEMENT

‘ಪರಾರಿಯಾಗುತ್ತಿದ್ದ ಆರೋಪಿಗಳನ್ನು ಸ್ಥಳೀಯರು ನೋಡಿದ್ದು, ಅದೇ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ಅದರ ಆಧಾರದಲ್ಲೇ ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ತಿಳಿಸಿವೆ.

ಅಂಗರಕ್ಷಕನ ಮೇಲೆ ಅನುಮಾನ: 2018ರ ಫೆಬ್ರವರಿ 7ರಂದು ರೇಖಾ ಅವರ ಪತಿ ಕದಿರೇಶ್ ಅವರನ್ನು ಸಹ ಫ್ಲವರ್ ಗಾರ್ಡನ್‌ದ ದೇವಸ್ಥಾನದ ಆವರಣದಲ್ಲೇ ಹತ್ಯೆ ಮಾಡಲಾಗಿತ್ತು. ಅವರ ಅಂಗರಕ್ಷಕನಾಗಿದ್ದ ಪೀಟರ್, ರೇಖಾ ಕೊಲೆಯಲ್ಲಿ ಭಾಗಿಯಾಗಿರುವ ಅನುಮಾನವಿದೆ. ಈತನ ಜೊತೆಯಲ್ಲಿ ಸೂರ್ಯ ಹಾಗೂ ಮತ್ತೊಬ್ಬ ಕೃತ್ಯಕ್ಕೆ ಸಹಕರಿಸಿರುವ ಶಂಕೆಯೂ ಇದೆ. ಇವರಿಬ್ಬರು ರೇಖಾ ಅವರ ಜೊತೆಯಲ್ಲೇ ಆಹಾರ ವಿತರಣೆ ಸ್ಥಳದಲ್ಲಿದ್ದರು. ಹತ್ಯೆ ಬಳಿಕ ಪರಾರಿಯಾಗಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನಸುಕಿನಲ್ಲಿ ಕಚೇರಿ ಬಳಿ ಬಂದಿದ್ದ ಆರೋಪಿಗಳು, ಸಿಸಿ ಟಿವಿ ಕ್ಯಾಮೆರಾ ತಿರುಗಿಸಿಟ್ಟಿದ್ದಾರೆ. ತಮ್ಮ ಮುಖ ಸೆರೆಯಾಗಬಾರದೆಂದು ಆರೋಪಿಗಳು ಈ ರೀತಿ ಮಾಡಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದೂ ಮೂಲಗಳು ತಿಳಿಸಿವೆ.

ಕದಿರೇಶ್‌ ದಂಪತಿಗೆ ಇಬ್ಬರು ಮಕ್ಕಳು
ರೇಖಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಕದಿರೇಶ್ ಅವರ ಕೊಲೆ ಬಳಿಕ ಕುಟುಂಬಕ್ಕೆ ಸಾಕಷ್ಟು ಬಾರಿಜೀವ ಬೆದರಿಕೆ ಬಂದಿತ್ತು. ಹೀಗಾಗಿ, ಮಕ್ಕಳನ್ನು ಹೊರಗೆ ಕಳುಹಿಸುತ್ತಿರಲಿಲ್ಲ.

ರೇಖಾ ಪುತ್ರ ರಾಹುಲ್, ‘ನಾನು ನನ್ನ ಸಹೋದರಿ ಮನೆಯಲ್ಲಿದ್ದೆ. ತಾಯಿ ಕೊಲೆಯಾದ ಸುದ್ದಿ ಗೊತ್ತಾಯಿತು. ತಾಯಿ ಎಲ್ಲರಿಗೂ ಒಳ್ಳೆಯದು ಮಾಡುತ್ತಿದ್ದರು. ಲಾಕ್‌ಡೌನ್‌ ಸಮಯದಲ್ಲಿ ಬಡವರಿಗೆ ಆಹಾರ ವಿತರಿಸುತ್ತಿದ್ದರು. ಪರಿಚಯಸ್ಥರೇ ಅವರನ್ನು ಕೊಲೆ ಮಾಡಿದ್ದಾರೆ ಎಂಬುದನ್ನು ನಂಬಲು ಆಗುತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.