ADVERTISEMENT

ಇನ್‌ಸ್ಪೆಕ್ಟರ್‌ ರಾಘವೇಂದ್ರ ನ್ಯಾಯಾಂಗ ಬಂಧನಕ್ಕೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 19:44 IST
Last Updated 19 ಸೆಪ್ಟೆಂಬರ್ 2021, 19:44 IST
ರಾಘವೇಂದ್ರ
ರಾಘವೇಂದ್ರ   

ಬೆಂಗಳೂರು: ಜಮೀನಿನಲ್ಲಿ ಅಳವಡಿಸಿದ್ದ ಫಲಕ ಕಿತ್ತು ಹಾಕಿದವರ ವಿರುದ್ಧ ಪ್ರಕರಣ ದಾಖಲಿಸಲು ₹ 2 ಲಕ್ಷ ಲಂಚ ಪಡೆಯುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದಿಂದ (ಎಸಿಬಿ) ಶನಿವಾರ ಬಂಧಿತರಾಗಿದ್ದ ಚಿಕ್ಕಜಾಲ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ರಾಘವೇಂದ್ರ ಮತ್ತು ಅವರ ಪರವಾಗಿ ಲಂಚದ ಹಣ ಸ್ವೀಕರಿಸಿದ್ದ ಖಾಸಗಿ ಮಧ್ಯವರ್ತಿ ರಾಘವೇಂದ್ರ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇಬ್ಬರನ್ನೂ ಎಸಿಬಿ ಅಧಿಕಾರಿಗಳು ಚಿಕ್ಕಜಾಲ ಪೊಲೀಸ್‌ ಠಾಣೆಯಲ್ಲೇ ಶನಿವಾರ ಬಂಧಿಸಿದ್ದರು. ಪ್ರಾಥಮಿಕ ಹಂತದ ವಿಚಾರಣೆ ಪೂರ್ಣಗೊಳಿಸಿದ ಬಳಿಕ ಆರೋಪಿಗಳನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿತ್ತು. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದರು. ಬಳಿಕ ಆರೋಪಿಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಶಕ್ಕೆ ನೀಡಲಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಎರಡನೇ ಇನ್‌ಸ್ಪೆಕ್ಟರ್‌: ರಾಜ್ಯ ಸರ್ಕಾರದ ಇಲಾಖೆಯೊಂದರ ಅಧೀನ ಕಾರ್ಯದರ್ಶಿಯಾಗಿ ನಿವೃತ್ತರಾಗಿರುವ ವ್ಯಕ್ತಿಯೊಬ್ಬರು ಚಿಕ್ಕಜಾಲ ಹೋಬಳಿಯಲ್ಲಿ ಖರೀದಿಸಿರುವ 5 ಎಕರೆ ಜಮೀನಿಗೆ ಸಂಬಂಧಿಸಿದಂತೆ ಚಿಕ್ಕಜಾಲ ಠಾಣೆಯ ಹಿಂದಿನ ಇನ್‌ಸ್ಪೆಕ್ಟರ್‌ ಯಶವಂತ ಮತ್ತು ಹೆಡ್‌ ಕಾನ್‌ಸ್ಟೆಬಲ್‌ ರಾಜು ವಿರುದ್ಧ ಜನವರಿಯಲ್ಲಿ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು.

ADVERTISEMENT

ಇನ್‌ಸ್ಪೆಕ್ಟರ್‌ ಪರವಾಗಿ ₹ 6 ಲಕ್ಷ ಲಂಚ ಪಡೆದಿದ್ದ ರಾಜು ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದರು. ಯಶವಂತ ತಪ್ಪಿಸಿಕೊಂಡು ಪರಾರಿಯಾಗಿ, ಸುದೀರ್ಘ ಕಾಲ ತಲೆಮರೆಸಿಕೊಂಡಿದ್ದರು. ಇದೇ ಪ್ರಕರಣದಲ್ಲಿ ₹ 5 ಲಕ್ಷ ಲಂಚ ಪಡೆದಿದ್ದ ಚಿಕ್ಕಜಾಲ ಹೋಬಳಿಯ ಕಂದಾಯ ನಿರೀಕ್ಷಕ ಪುಟ್ಟ ಹನುಮಯ್ಯ ಅಲಿಯಾಸ್‌ ಪ್ರವೀಣ್‌ ಅವರನ್ನು ಅದೇ ದಿನ ಎಸಿಬಿ ಅಧಿಕಾರಿಗಳು ಬಂಧಿಸಿದ್ದರು.

ಯಶವಂತ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿದ ಬಳಿಕ ಆ ಹುದ್ದೆಗೆ ರಾಘವೇಂದ್ರ ಬಂದಿದ್ದರು. ಹಿಂದಿನ ಇನ್‌ಸ್ಪೆಕ್ಟರ್‌ ವಿರುದ್ಧ ಎಸಿಬಿಗೆ ತಮ್ಮ ವಿರುದ್ಧ ದೂರು ನೀಡಬಾರದು ಎಂಬ ಷರತ್ತಿನೊಂದಿಗೆ ಅವರು ಲಂಚದ ಬೇಡಿಕೆ ಇಟ್ಟಿದ್ದರು ಎಂಬ ಮಾಹಿತಿ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.