ADVERTISEMENT

ಜಾನೂರ್‌ ಕಲೆ: ಚಿಣ್ಣರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 21:53 IST
Last Updated 18 ಜನವರಿ 2020, 21:53 IST
ಜಾನೂರ್ ಕಲೆಯ ಸೆಲ್ಫಿ ಬೂತ್‌ನಲ್ಲಿ ನಿಂತು ಫೋಟೊ ತೆಗೆಸಿಕೊಂಡ ಮಕ್ಕಳು
ಜಾನೂರ್ ಕಲೆಯ ಸೆಲ್ಫಿ ಬೂತ್‌ನಲ್ಲಿ ನಿಂತು ಫೋಟೊ ತೆಗೆಸಿಕೊಂಡ ಮಕ್ಕಳು   

ಬೆಂಗಳೂರು: ಚಿಣ್ಣರೆಲ್ಲ ಕುತೂಹಲದಿಂದ ಫೋಟೊ ತೆಗೆಸಿಕೊಳ್ಳಲು ಅಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು. ಅಲ್ಲಿ ಗೊಂಬೆಗಳಿಗೆ ತೊಡಿಸಿದ್ದ ಜಾನೂರ್‌ ಕಲೆಯ ವಸ್ತ್ರಗಳು ಜನರನ್ನು ಮತ್ತೆ ಮತ್ತೆ ಹಿಂತಿರುಗಿ ನೋಡುವಷ್ಟು ಆಕರ್ಷಕವಾಗಿದ್ದವು.

ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದ ಅಂಗವಾಗಿ ಲಾಲ್‌ಬಾಗ್‌ನ ಎಂ.ಎಚ್‌.ಮರೀಗೌಡ ಸ್ಮಾರಕ ಭವನದಲ್ಲಿ ಆಯೋಜಿಸಿರುವ ವಿಶೇಷ ಪ್ರದರ್ಶನದಲ್ಲಿ ಶನಿವಾರ ಕಂಡು ಬಂದ ದೃಶ್ಯವಿದು.

ಜಾನೂರ್‌ ಕಲೆಯಿಂದ ಸಿದ್ಧಪಡಿಸಲಾಗಿದ್ದ ಸೆಲ್ಫಿ ಬೂತ್‌ ಒಳಗೆ ನಿಂತು ಚಿಣ್ಣರು ತಮ್ಮಿಷ್ಟದ ಭಂಗಿಯಲ್ಲಿ ನಿಂತು ಪೋಷಕರೊಡನೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ತೋಟಗಾರಿಕೆ ಇಲಾಖೆಯಲ್ಲಿ ತರಬೇತಿ ಪಡೆದಿದ್ದ ಗೃಹಿಣಿಯರ ಕ್ರಿಯಾಶೀಲತೆಗೆ ಈ ಪ್ರದರ್ಶನ ವೇದಿಕೆ ಕಲ್ಪಿಸಿತ್ತು. ಈ ಸ್ಪರ್ಧೆಗಳು ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ಮತ್ತಷ್ಟು ರಂಗು ತುಂಬಿತು.

ADVERTISEMENT

ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಇಕೆಬಾನ, ಪುಷ್ಪ ಭಾರತಿ, ತರಕಾರಿ ಕೆತ್ತನೆ, ಒಣ ಹೂವಿನ ಜೋಡಣೆ, ಥಾಯ್‌ ಆರ್ಟ್‌, ಜಾನೂರ್‌ ಕಲೆ ಹಾಗೂ ಕುಬ್ಜ ಮರಗಳ ಸ್ಪರ್ಧೆಗಳನ್ನು ಮಾಹಿತಿ ಮತ್ತು ಪ್ರಸಾರ ಇಲಾಖೆಯ ಮೈಸೂರು ವಿಭಾಗದ ಸುದ್ದಿ ಹಾಗೂ ಸಾರ್ವಜನಿಕ ಸಂಪರ್ಕ ಘಟಕದ ಮುಖ್ಯಸ್ಥೆ ಟಿ.ಸಿ.ಪೂರ್ಣಿಮಾ ಉದ್ಘಾಟಿಸಿದರು.

ಎರಡನೇ ದಿನವಾದ ಶನಿವಾರ ಒಟ್ಟು 18,000 ಮಂದಿ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಿದರು. ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಜನ ಭೇಟಿ ನೀಡುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.