ADVERTISEMENT

ವಿದ್ಯುತ್‌ ವಾಹನ ಬಳಕೆ ಉತ್ತೇಜನಕ್ಕೆ ರಾಜ್ಯದಲ್ಲಿ ಸಾವಿರ 'ಇ–ಚಾರ್ಜಿಂಗ್ ಕೇಂದ್ರ'

ವಿದ್ಯುತ್‌ ವಾಹನ ಬಳಕೆ ಉತ್ತೇಜನಕ್ಕೆ ಇ–ಮೊಬಿಲಿಟಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 16:27 IST
Last Updated 18 ಸೆಪ್ಟೆಂಬರ್ 2021, 16:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ವಿದ್ಯುತ್‌ ವಾಹನಗಳ ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ವರ್ಷದಲ್ಲಿಒಂದು ಸಾವಿರ ಇ–ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದೇವೆ’ ಎಂದು ಇಂಧನ ಸಚಿವ ವಿ. ಸುನೀಲ್‌ಕುಮಾರ್‌ ಹೇಳಿದರು.

ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರ್ನಾಟಕ ಇ–ಮೊಬಿಲಿಟಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಯ ಕಾರ್ಯ ಭರದಿಂದ ಸಾಗಿದೆ’ ಎಂದರು.

‘ರಾಜ್ಯದಲ್ಲಿ 136 ಚಾರ್ಜಿಂಗ್‌ ಕೇಂದ್ರಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಎರಡನೇ ಹಂತದಲ್ಲಿ ರಾಜ್ಯದಲ್ಲಿ 172 ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಬೆಂಗಳೂರು ನಗರದಲ್ಲಿ 152 ಕೇಂದ್ರಗಳನ್ನು ಕೇಂದ್ರ ಸರ್ಕಾರದ ಫೇಮ್‌–2 ಯೋಜನೆಯಡಿ ಮತ್ತು ಇತರೆ ಕೇಂದ್ರಗಳನ್ನು ವಿವಿಧ ಕಂಪನಿಗಳೊಂದಿಗಿನ ಒಪ್ಪಂದದ ಮೂಲಕ ಸ್ಥಾಪಿಸಲಾಗುವುದು’ ಎಂದರು.

ADVERTISEMENT

‘ವಿದ್ಯುತ್‌ ವಾಹನಗಳ ಬಳಕೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು 2017ರಲ್ಲಿಯೇ ವಿದ್ಯುತ್‌ ವಾಹನ ಮತ್ತು ಶಕ್ತಿ ಸಂಗ್ರಹ ನೀತಿಯನ್ನು ರೂಪಿಸಿದೆ. ದೇಶದಲ್ಲಿಯೇ ಈ ನೀತಿಯನ್ನು ಅಳವಡಿಸಿಕೊಂಡ ಮೊದಲ ರಾಜ್ಯ ಕರ್ನಾಟಕ’ ಎಂದರು.

ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ. ಕುಮಾರ್‌ ನಾಯಕ್‌, ‘ಈಗ ವಿದ್ಯುತ್‌ ಉತ್ಪಾದನೆಯಲ್ಲಿ ಹಾಗೂ ಬೇಡಿಕೆಯಲ್ಲಿ ವೈವಿಧ್ಯ ಇದೆ. ಇದಕ್ಕೆ ತಕ್ಕಂತೆ ವಿದ್ಯುತ್‌ ಪೂರೈಕೆ ಜಾಲವೂ ಮೇಲ್ದರ್ಜೆಗೇರಬೇಕಾಗಿದೆ. ಈ ನಿಟ್ಟಿನಲ್ಲಿ ಗ್ರಿಡ್‌ಗಳನ್ನು ಸ್ಮಾರ್ಟ್‌ ಆಗಿ ರೂಪಿಸುವ ಕೆಲಸ ನಡೆಯುತ್ತಿದೆ’ ಎಂದರು.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ. ರಾಜೇಂದ್ರ ಚೋಳನ್, ‘ಬೆಸ್ಕಾಂ ರಾಜ್ಯದಲ್ಲಿಯೇ ಅತಿದೊಡ್ಡ ವಿದ್ಯುತ್‌ ಸರಬರಾಜು ಕಂಪನಿ. ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಲು ನೋಡಲ್‌ ಏಜೆನ್ಸಿಯಾಗಿ ಬೆಸ್ಕಾಂ ನೇಮಕಗೊಂಡಿದೆ’ ಎಂದರು.

‘ಸದ್ಯ ರಾಜ್ಯದಲ್ಲಿ ಅಂದಾಜು 30 ಸಾವಿರ, ಬೆಂಗಳೂರಿನಲ್ಲಿ 18 ಸಾವಿರ ವಿದ್ಯುತ್‌ ವಾಹನಗಳು ಓಡಾಡುತ್ತಿವೆ. ವಿದ್ಯುತ್‌ ವಾಹನ ಖರೀದಿಗೆ ಸಹಾಯಧನ, ಕಡಿಮೆ ದರದಲ್ಲಿ ಚಾರ್ಜಿಂಗ್‌ ಸೌಲಭ್ಯ ಸೇರಿದಂತೆ ಅನೇಕ ಉಪಕ್ರಮಗಳನ್ನು ಕೈಗೊಂಡು ವಿದ್ಯುತ್‌ ವಾಹನಗಳ ಖರೀದಿ ಉತ್ತೇಜಿಸಲಾಗುತ್ತಿದೆ’ ಎಂದರು.

ವಿದ್ಯುತ್ ವಾಹನಗಳ ಚಾರ್ಜಿಂಗ್‌ ಕೇಂದ್ರಗಳ ಸ್ಥಾಪನೆಗೆ ಸಂಬಂಧಿಸಿದಂತೆ ಬೆಸ್ಕಾಂ ಮತ್ತು ಇಇಎಸ್‌ಎಲ್‌ ಕಂಪನಿಯು ಒಪ್ಪಂದಕ್ಕೆ ಸಹಿ ಹಾಕಿದವು.

ಸನ್‌ ಮೊಬಿಲಿಟಿ ಸಹಸ್ಥಾಪಕ ಚೇತನ್ ಮೈನಿ, ಸ್ವಿಚ್ ಮೊಬಿಲಿಟಿ ಇಂಡಿಯಾ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮಹೇಶ್‌ ಬಾಬು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.