ADVERTISEMENT

ಕೆಂಗೇರಿ ಮೆಟ್ರೊ ನಿಲ್ದಾಣಕ್ಕೆ ವಿಷ್ಣುವರ್ಧನ್ ಹೆಸರಿಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 17:47 IST
Last Updated 18 ಸೆಪ್ಟೆಂಬರ್ 2021, 17:47 IST
ಅಭಿಮಾನ್ ಸ್ಟುಡಿಯೋದಲ್ಲಿನ ವಿಷ್ಣುವರ್ಧನ್ ಭಾವಚಿತ್ರದ ಮುಂದೆ ಅಭಿಮಾನಿಗಳು ಸಂಭ್ರಮಿಸಿದರು. ಸಾಹಿತಿ ನಾಗೇಂದ್ರ ಪ್ರಸಾದ್, ಪುಟ್ಟಣ್ಣ, ಶ್ರೀನಿವಾಸ್, ಲೋಕೇಶ್‌ಗೌಡ ಇದ್ದರು
ಅಭಿಮಾನ್ ಸ್ಟುಡಿಯೋದಲ್ಲಿನ ವಿಷ್ಣುವರ್ಧನ್ ಭಾವಚಿತ್ರದ ಮುಂದೆ ಅಭಿಮಾನಿಗಳು ಸಂಭ್ರಮಿಸಿದರು. ಸಾಹಿತಿ ನಾಗೇಂದ್ರ ಪ್ರಸಾದ್, ಪುಟ್ಟಣ್ಣ, ಶ್ರೀನಿವಾಸ್, ಲೋಕೇಶ್‌ಗೌಡ ಇದ್ದರು   

ಕೆಂಗೇರಿ: ನಟ ವಿಷ್ಣುವರ್ಧನ್ ಅವರ 71ನೇ ಹುಟ್ಟುಹಬ್ಬವನ್ನು ಸಾವಿರಾರು ಅಭಿಮಾನಿಗಳುಕೇಕ್ ಕತ್ತರಿಸುವ ಮೂಲಕ ಶನಿವಾರ ಆಚರಿಸಿದರು. ಬೆಳಗ್ಗೆಯಿಂದಲೇ ಅಭಿಮಾನಿಗಳು ವಿಷ್ಣು ಭಾವಚಿತ್ರಕ್ಕೆ ನಮಿಸಲು ಸಾಲುಗಟ್ಟಿ ನಿಂತಿದ್ದರು.

ಕೆಂಗೇರಿ ಉತ್ತರಹಳ್ಳಿ ಅಭಿಮಾನ್ ಸ್ಟುಡಿಯೋದಲ್ಲಿನ ಸಮಾಧಿ ಸ್ಥಳದಲ್ಲಿ ಕೆಂಗೇರಿ ಸಾಹಸ ಸಿಂಹ ವಿಷ್ಣು ಅಭಿಮಾನಿಗಳ ಸಂಘ, ಶೃಂಗಾರ ಶಿಲ್ಪಿ ವಿಷ್ಣುವರ್ಧನ್ ಅಭಿಮಾನಿಗಳ ಸಂಘ ಹಾಗೂ ಹಿತೈಷಿ ಡಾ.ವಿಷ್ಣು ಅಭಿಮಾನಿಗಳ ಸಂಘದ ಸಹಯೋಗದಲ್ಲಿ ಹುಟ್ಟುಹಬ್ಬ ಆಚರಿಸಲಾಯಿತು.

‌ನಿರ್ದೇಶಕ ನಾಗೇಂದ್ರ ಪ್ರಸಾದ್ ಮಾತನಾಡಿ, ‘ಅಭಿಮಾನ್ ಸ್ಟುಡಿಯೋವಿಷ್ಣುವರ್ಧನ್ ಅಭಿಮಾನಿಗಳ ಪಾಲಿಗೆ ಎಂದಿಗೂ ಪುಣ್ಯಭೂಮಿಯಂತೆ. ಇದೇ ಭಾವನೆಯಿಂದ ಸಾವಿರಾರು ಜನ ಪ್ರತಿದಿನ ಭೇಟಿ ನೀಡುತ್ತಾರೆ. ಅವರ ಪಾಲಿಗೆ ಎಂದಿಗೂ ವಿಷ್ಣು ಅಜರಾಮರ’ ಎಂದು ಹೇಳಿದರು.

ADVERTISEMENT

‘ಕಾನೂನು ತೊಡಕುಗಳಿಂದ ವಿಷ್ಣು ಸ್ಮಾರಕ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಶೀಘ್ರದಲ್ಲೇ ಎಲ್ಲಾ ತೊಡಕುಗಳು ನಿವಾರಣೆಯಾಗಲಿ’ ಎಂದರು.

ಹಿತೈಷಿ ಡಾ.ವಿಷ್ಣು ಅಭಿಮಾನಿಗಳ ಸಂಘದ ಅಧ್ಯಕ್ಷ ಲೋಕೇಶ್‌ಗೌಡ, ‘ವಿಷ್ಣು ಕುಟುಂಬಸ್ಥರಿಂದ ಬೆಂಬಲ ಸಿಗದ ಕಾರಣ ವಿಷ್ಣು ಸಮಾಧಿ ಸ್ಥಳದ ಅಭಿವೃದ್ಧಿಗೆ ಅಭಿಮಾನಿಗಳೇ ಟೊಂಕ ಕಟ್ಟಿ ನಿಂತಿದ್ದೇವೆ. ಕೆಂಗೇರಿ ಮೆಟ್ರೊ ರೈಲು ನಿಲ್ದಾಣಕ್ಕೆ ವಿಷ್ಣುವರ್ಧನ್ ಹೆಸರಿಡಬೇಕು’ ಎಂದು ಒತ್ತಾಯಿಸಿದರು.

ರೆಡ್ ಕ್ರಾಸ್ ಸಂಸ್ಥೆ ಸಹಯೋಗದಿಂದ ಆಯೋಜಿಸಿದ್ದ ರಕ್ತ ನಿಧಿಗೆ 400ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹವಾಯಿತು. ಕೆಂಗೇರಿ ಸಾಹಸ ಸಿಂಹ ವಿಷ್ಣು ಅಭಿಮಾನಿಗಳ ಸಂಘದ ಅಧ್ಯಕ್ಷ ಪುಟ್ಟಣ್ಣ, ಶೃಂಗಾರ ಶಿಲ್ಪಿ ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.