ADVERTISEMENT

ಸ್ನೇಹಿತೆಗಾಗಿ ಮಾಡಿದ್ದ ₹5 ಲಕ್ಷ ಸಾಲ ತೀರಿಸಲು ಅಪಹರಣ ನಾಟಕ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 19:26 IST
Last Updated 17 ಸೆಪ್ಟೆಂಬರ್ 2021, 19:26 IST

ಬೆಂಗಳೂರು: ಸ್ನೇಹಿತೆಗಾಗಿ ಮಾಡಿದ್ದ ₹ 5 ಲಕ್ಷ ಸಾಲ ತೀರಿಸಲು ಅಪಹರಣ ನಾಟಕವಾಡಿ ತನ್ನ ತಂದೆಯಿಂದಲೇ ಹಣ ಪಡೆಯಲು ಸಂಚು ರೂಪಿಸಿದ್ದ ಮುಕ್ತೂಮ್ ಸಾಬ್ (20) ಎಂಬಾತನನ್ನು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಠಾಣೆ ವ್ಯಾಪ್ತಿಯ ಜೆ.ಸಿ.ನಗರದ 20ನೇ ಅಡ್ಡರಸ್ತೆ ನಿವಾಸಿಯಾಗಿದ್ದ ಮುಕ್ತೂಮ್, ಗುತ್ತಿಗೆದಾರ ಗನಿಸಾಬ್ ಎಂಬುವರ ಮಗ. ತಂದೆ ನೀಡಿದ್ದ ದೂರು ಆಧರಿಸಿ ತನಿಖೆ ಕೈಗೊಂಡಾಗ ಮಗ ಸಿಕ್ಕಿಬಿದ್ದ. ಆತನೇ ಅಪಹರಣ ನಾಟಕವಾಡಿದ್ದನ್ನು ಒಪ್ಪಿಕೊಂಡ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಯಶವಂತಪುರದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮುಕ್ತೂಮ್, ತನ್ನ ಕಾಲೇಜು ಸ್ನೇಹಿತೆಯೊಬ್ಬಳ ಜೊತೆ ಸಲುಗೆ ಇಟ್ಟುಕೊಂಡಿದ್ದ. ತಾನು ಸಂಕಷ್ಟದಲ್ಲಿರುವುದಾಗಿ ಆಕೆ ಹೇಳಿದ್ದಳು. ಅದೇ ಕಾರಣಕ್ಕೆ ಮುಕ್ತೂಮ್, ವ್ಯಕ್ತಿಯೊಬ್ಬರ ಬಳಿ ಬಡ್ಡಿಗೆ ₹ 5 ಲಕ್ಷ ಸಾಲ ಪಡೆದು ಸ್ನೇಹಿತೆಗೆ ಕೊಟ್ಟಿದ್ದ.’

ADVERTISEMENT

‘ಹಲವು ತಿಂಗಳಾದರೂ ಮುಕ್ತೂಮ್ ಸಾಲ ತೀರಿಸಿರಲಿಲ್ಲ. ಸಾಲ ಕೊಟ್ಟವರು ಎಚ್ಚರಿಕೆ ನೀಡಿದ್ದರು. ಸಾಲ ತೀರಿಸಲು ಹಣ ಹೊಂದಿಸಬೇಕೆಂದು ತೀರ್ಮಾನಿಸಿದ್ದ ಆತ, ತಂದೆಯನ್ನೇ ಬೆದರಿಸಿ ಹಣ ಪಡೆಯಲು ಅಪಹರಣ ನಾಟಕವಾಡಲು ಮುಂದಾಗಿದ್ದ’ ಎಂದೂ ಮೂಲಗಳು ತಿಳಿಸಿವೆ.

‘ಸೆ.19ರಂದು ಮಧ್ಯಾಹ್ನ ಮುಕ್ತೂಮ್ ಮನೆಯಿಂದ ನಾಪತ್ತೆಯಾಗಿದ್ದ. ಮರುದಿನ ತಂದೆಯ ವಾಟ್ಸ್‌ಆ್ಯಪ್‌ಗೆ ಸಂದೇಶ ಕಳುಹಿಸಿದ್ದ ಮಗ, ‘ನನ್ನನ್ನು ನಾಲ್ಕು ಜನ ಅಪಹರಣ ಮಾಡಿದ್ದಾರೆ. ₹5 ಲಕ್ಷ ಕೊಟ್ಟರೆ ಬಿಡುವುದಾಗಿ ಹೇಳುತ್ತಿದ್ದಾರೆ. ಹಣ ಕೊಟ್ಟು ನನ್ನನ್ನು ಬಿಡಿಸಿಕೊಂಡು ಹೋಗಿ’ ಎಂದಿದ್ದ. ಆಡಿಯೊ ಸಂದೇಶವನ್ನೂ ಹಲವು ಬಾರಿ ಕಳುಹಿಸಿದ್ದ. ಗಾಬರಿಗೊಂಡ ತಂದೆ ಗನಿಸಾಬ್ ಠಾಣೆಗೆ ದೂರು ನೀಡಿದ್ದರು.’

‘ಮುಕ್ತೂಮ್ ಮೊಬೈಲ್ ಸುಳಿವು ಆಧರಿಸಿ ತನಿಖೆ ಆರಂಭಿಸಲಾಗಿತ್ತು. ತಿರುಪತಿಯ ಹೋಟೆಲೊಂದರ ಕೊಠಡಿ
ಯಲ್ಲಿ ಆತ ಇರುವ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಹೋದ ವಿಶೇಷ ತಂಡ, ಆತನನ್ನು ಹಿಡಿದುಕೊಂಡು ನಗರಕ್ಕೆ ಬಂದಿದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.