ADVERTISEMENT

ಮಾಲ್‌ ಪುನರಾರಂಭ– ಫುಡ್‌ಕೋರ್ಟ್‌ ತೆರವು ವಿಳಂಬ?

ಲಾಕಡೌನ್‌ ಇನ್ನಷ್ಟು ಸಡಿಲ: ಬಿಬಿಎಂಪಿ ಚಿಂತನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 22:07 IST
Last Updated 29 ಜೂನ್ 2021, 22:07 IST

ಬೆಂಗಳೂರು: ಲಾಕ್‌ಡೌನ್‌ ತೆರವಿನ ಮುಂದಿನ ಹಂತದಲ್ಲಿ ಮಾಲ್‌ಗಳಲ್ಲಿನ ಮಳಿಗೆಗಳು ವಹಿವಾಟು ನಡೆಸುವುದಕ್ಕೆ ಅನುಮತಿ ನೀಡಲು ಬಿಬಿಎಂಪಿ ಚಿಂತನೆ ನಡೆಸಿದೆ. ಆದರೆ, ಮಾಲ್‌ಗಳಲ್ಲಿರುವ ಫುಡ್‌ ಕೋರ್ಟ್‌ಗಳಲ್ಲಿ ಜನಜಂಗುಳಿ ಉಂಟಾಗುವ ಸಾಧ್ಯತೆ ಇರುವುದರಿಂದ ಅವುಗಳ ಮೇಲಿನ ನಿರ್ಬಂಧ ಮುಂದುವರಿಸಲು ಮುಂದಾಗಿದೆ.

‘ಮಾಲ್‌ಗಳನ್ನು ತೆರೆಯಲು ಅನುಮತಿ ನೀಡಬಹುದು. ಆದರೆ, ಅಲ್ಲಿಗೆ ಬರುವ ಎಲ್ಲರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಿರಬೇಕಾಗುತ್ತದೆ ಹಾಗೂ ಅಂತರ ಕಾಪಾಡಬೇಕಾಗುತ್ತದೆ. ಕಳೆದ ವರ್ಷ ಲಾಕ್‌ಡೌನ್‌ ಸಡಿಲಗೊಳಿಸುವಾಗ ಮಾಲ್‌ಗಳ ಮೇಲಿನ ನಿರ್ಬಂಧ ತೆರವುಗೊಳಿಸಿದ ಬಳಿಕವೂ ಫುಡ್‌ ಕೋರ್ಟ್‌ಗಳು ಹಾಗೂ ತಿನಿಸಿನ ಮಳಿಗೆಗಳಿಗೆ ಹಂತ ಹಂತವಾಗಿ ಅನುಮತಿ ನೀಡಲಾಯಿತು. ಈ ಬಾರಿಯೂ ಫುಡ್‌ ಕೋರ್ಟ್‌ಗಳಲ್ಲಿ ಜನಜಂಗುಳಿ ಸೇರುವುದನ್ನು ತಡೆಯುವ ಬಗ್ಗೆ ಹೆಚ್ಚಿನ ಕಳಜಿ ವಹಿಸಬೇಕಾಗುತ್ತದೆ. ಊಟ ತಿನಿಸು ಟೀ ಕಾಫಿ ಹಂಚಿಕೊಳ್ಳುವುದಕ್ಕೆ ಇದು ಸಮಯವಲ್ಲ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ತಿಳಿಸಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಕೊರೊನಾದ ರೂಪಾಂತರಿ ತಳಿಯಾದ ಡೆಲ್ಟಾ ವೈರಾಣು ವೇಗವಾಗಿ ಹರಡುತ್ತದೆ. ಭಾರತದಲ್ಲಿ ಗುರುತಿಸಲಾದ ಈ ತಳಿಯ ವೈರಾಣು ಬೇರೆ ರಾಷ್ಟ್ರಗಳಿಗೂ ಹರಡಿ ಹಾನಿ ಉಂಟು ಮಾಡುತ್ತಿದೆ. ಆಸ್ಟ್ರೇಲಿಯಾ, ತೈವಾನ್‌, ಇಸ್ರೇಲ್‌ನಂತಹ ದೇಶಗಳಲ್ಲೂ ಸಮಸ್ಯೆ ಉಲ್ಬಣ ಆಗುತ್ತಿದೆ. ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಏಪ್ರಿಲ್‌ ತಿಂಗಳಿನಲ್ಲಿ ಸೋಂಕು ಇಷ್ಟು ವೇಗವಾಗಿ ಹರಡುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಇದರ ಹರಡುವಿಕೆ ತಡೆಯಲು ಸಿದ್ಧತೆ ಮಾಡಿಕೊಳ್ಳುವುದಕ್ಕೂ ಸಾಧ್ಯವಾಗದಷ್ಟು ವೇಗವಾಗಿ ಸೋಂಕು ಹರಡಿತ್ತು. ಹಾಗಾಗಿ ಲಾಕ್‌ಡೌನ್‌ ಅನ್ನು ಸಂಪೂರ್ಣ ತೆರವುಗೊಳಿಸುವ ಮುನ್ನ ಮುನ್ನೆಚ್ಚರಿಕೆ ವಹಿಸುವ ಅಗತ್ಯ ಇದೆ’ ಎಂದು ಅಭಿಪ‍್ರಾಯಪಟ್ಟರು.

ADVERTISEMENT

ಹೊರರಾಜ್ಯಗಳಿಂದ ನಗರಕ್ಕ ಬರುವವರು ಕೋವಿಡ್‌ ಸೋಂಕು ಹೊಂದಿರದ ಬಗ್ಗೆ ಆರ್‌ಟಿ‍ಪಿಸಿಆರ್‌ ಪರೀಕ್ಷಾ ವರದಿ ಕಡ್ಡಾಯ ಮಾಡಲಾಗಿದ್ದರೂ, ಈ ಬಗ್ಗೆ ಸರಿಯಾಗಿ ತಪಾಸಣೆ ನಡೆಯುತ್ತಿಲ್ಲ ಎಂಬ ದೂರುಗಳಿವೆ. ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತರು, ‘ಹೊರರಾಜ್ಯಗಳಿಂದ ನಗರಕ್ಕೆ ಬರುವ ಪ್ರಯಾಣಿಕರ ಮೇಲೆ ಹೇಗೆ ನಿಗಾ ಇಡಲಾಗುತ್ತಿದೆ ಎಂಬುದನ್ನು ನಾನೇ ಖುದ್ದಾಗಿ ಪರಿಶೀಲನೆ ನಡೆಸುತ್ತೇನೆ. ಅಧಿಕಾರಿಗಳಿಗೂ ಈ ಬಗ್ಗೆ ಸೂಚನೆ ನೀಡುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.