ADVERTISEMENT

₹ 20ಕ್ಕೆ ಜಗಳ: ಚಿಂದಿ ಆಯುವವನ ಕೊಲೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 19:27 IST
Last Updated 17 ಸೆಪ್ಟೆಂಬರ್ 2021, 19:27 IST

ಬೆಂಗಳೂರು: ₹ 20 ವಿಚಾರಕ್ಕಾಗಿ ನಡೆದ ಜಗಳದಲ್ಲಿ ಸಂಜಯ್ ಅಲಿಯಾಸ್ ನೇಪಾಳಿ (30) ಎಂಬುವರನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಬೊಮ್ಮನ
ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ದೀಪಕ್, ಹೇಮಂತ್ ಹಾಗೂ ಮಾದೇಶ್ ಬಂಧಿತರು. ಮೂವರು ಸೇರಿಕೊಂಡು ಸೆ. 13ರಂದು ರಾತ್ರಿ ಬೊಮ್ಮನಹಳ್ಳಿ 1ನೇ ಅಡ್ಡರಸ್ತೆಯಲ್ಲಿ ಸಂಜಯ್ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದರು. 48 ಗಂಟೆಗಳಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು. ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಮೃತ ಸಂಜಯ್ ಹಾಗೂ ಮೂವರು ಆರೋಪಿಗಳು ಸ್ನೇಹಿತರು. ಚಿಂದಿ ಆಯುವ ಕೆಲಸ ಮಾಡುತ್ತಿದ್ದರು. ನಿತ್ಯವೂ ಒಟ್ಟಿಗೆ ಮದ್ಯ ಕುಡಿಯುತ್ತಿದ್ದರು. ಊಟ ಮಾಡುತ್ತಿದ್ದರು.’

ADVERTISEMENT

‘ಕೆಲ ದಿನಗಳ ಹಿಂದಷ್ಟೇ ಸ್ನೇಹಿತರೆಲ್ಲರೂ ಊಟಕ್ಕೆ ಹೋಟೆಲ್‌ಗೆ ಹೋಗಿದ್ದರು. ಸಂಜಯ್ ಬಳಿ ಹಣವಿರಲಿಲ್ಲ. ಹೀಗಾಗಿ, ದೀಪಕ್ ಬಳಿ ₹ 20 ಪಡೆದಿದ್ದರು. ಹಲವು ದಿನ ಕಳೆದರೂ ₹ 20 ವಾಪಸು ಕೊಟ್ಟಿರಲಿಲ್ಲ. ಇದೇ ವಿಚಾರವಾಗಿ ಅವರಿಬ್ಬರ ನಡುವೆ ವೈಷಮ್ಯ ಬೆಳೆದಿತ್ತು.’

‘ಸೆ. 13ರಂದು ರಾತ್ರಿ ದೀಪಕ್, ತನ್ನ ₹ 20 ನೀಡುವಂತೆ ಸಂಜಯ್‌ ಅವರನ್ನು ಕೇಳಿದ್ದ. ಹಣವಿಲ್ಲವೆಂದು ಅವರು ಹೇಳಿದ್ದರು. ಅಷ್ಟಕ್ಕೆ ಮಾತಿನ ಚಕಮಕಿ ನಡೆದು, ಗಲಾಟೆ ಶುರುವಾಗಿತ್ತು. ದೀಪಕ್ ಹಾಗೂ ಆತನ ಸ್ನೇಹಿತರು, ಸಂಜಯ್ ಮೇಲೆ ಹಲ್ಲೆ ಮಾಡಿ ಕೊಂದಿದ್ದರು’ ಎಂದೂ ಅಧಿಕಾರಿ ವಿವರಿಸಿದರು.

ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆ: ‘ಕೊಲೆ ದೃಶ್ಯ ಸಮೀಪದ ಮದ್ಯದಂಗಡಿ ಎದುರಿನ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಮದ್ಯದಂಗಡಿ ವ್ಯವಸ್ಥಾಪಕರು ನೀಡಿದ್ದ ಸುಳಿವು ಆಧರಿಸಿ, ಚಿಂದಿ ಆಯುತ್ತಿದ್ದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗಲೇ ಆರೋಪಿಗಳು ಸಿಕ್ಕಿಬಿದ್ದರು’ ಎಂದೂ ಪೊಲೀಸ್ ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.