ADVERTISEMENT

ಪುಸ್ತಕ ಕೇಳಿ ಪುಳಕಿತರಾದರು...

‘ಮೈ ಲ್ಯಾಂಗ್‌ ಬುಕ್ಸ್‌’ ಲೋಕಾರ್ಪಣೆ– ಅಶ್ವತ್ಥಾಮನ್‌ ಕಾದಂಬರಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 19:28 IST
Last Updated 1 ಮಾರ್ಚ್ 2020, 19:28 IST
ಸಮಾರಂಭದಲ್ಲಿ ‘ಮೈಲ್ಯಾಂಗ್‌ ಬುಕ್ಸ್‌’ ಆ್ಯಪ್ ಹಾಗೂ ‘ಅಶ್ವತ್ಥಾಮನ್’ ಕಾದಂಬರಿಯನ್ನು ಬಿಡುಗಡೆ ಮಾಡಲಾಯಿತು. (ಎಡದಿಂದ) ‘ಮೈಲ್ಯಾಂಗ್ ಬುಕ್ಸ್‌’ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪವಮಾನ್‌ ಪ್ರಸಾದ್‌, ಅರುಂಧತಿ ನಾಗ್‌, ವಸಿಷ್ಠ ಸಿಂಹ, ಅಚ್ಯುತ್‌ ಕುಮಾರ್‌, ರವಿ ಹೆಗಡೆ, ಜೋಗಿ ಇದ್ದಾರೆ - ಪ್ರಜಾವಾಣಿ ಚಿತ್ರ
ಸಮಾರಂಭದಲ್ಲಿ ‘ಮೈಲ್ಯಾಂಗ್‌ ಬುಕ್ಸ್‌’ ಆ್ಯಪ್ ಹಾಗೂ ‘ಅಶ್ವತ್ಥಾಮನ್’ ಕಾದಂಬರಿಯನ್ನು ಬಿಡುಗಡೆ ಮಾಡಲಾಯಿತು. (ಎಡದಿಂದ) ‘ಮೈಲ್ಯಾಂಗ್ ಬುಕ್ಸ್‌’ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪವಮಾನ್‌ ಪ್ರಸಾದ್‌, ಅರುಂಧತಿ ನಾಗ್‌, ವಸಿಷ್ಠ ಸಿಂಹ, ಅಚ್ಯುತ್‌ ಕುಮಾರ್‌, ರವಿ ಹೆಗಡೆ, ಜೋಗಿ ಇದ್ದಾರೆ - ಪ್ರಜಾವಾಣಿ ಚಿತ್ರ   

ಬೆಂಗಳೂರು: ಪುಸ್ತಕ ಬಿಡುಗಡೆ ಸಮಾರಂಭಗಳಲ್ಲಿ ಹೊಸ ಕೃತಿಯನ್ನು ಖರೀದಿಸಿ ಅವುಗಳ ಪುಟಗಳತ್ತ ಕಣ್ಣಾಡಿಸುವುದು ಸಾಮಾನ್ಯ. ಆದರೆ, ಈ ಸಮಾರಂಭದಲ್ಲಿ ಗಣ್ಯರು ಕೃತಿಯನ್ನು ಬಿಡುಗಡೆ ಮಾಡುತ್ತಿದ್ದರೆ, ಸಭಿಕರ ಪೈಕಿ ಕೆಲವರು ಮೊಬೈಲ್‌ನಲ್ಲಿ ಅದನ್ನು ಓದಿದರು, ಕೆಲವರು ‘ಕೇಳಿ’ದರು.

ಇಂಥ ಅಪೂರ್ವ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ‘ಮೈಲ್ಯಾಂಗ್‌ ಬುಕ್ಸ್‌’ ಲೋಕಾರ್ಪಣೆ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಬರಹಗಾರ ಜೋಗಿ ಅವರ ‘ಅಶ್ವತ್ಥಾಮನ್‌’ ಕಾದಂಬರಿ ಯನ್ನು ಪುಸ್ತಕ, ಆಡಿಯೊ ಬುಕ್‌ ಮತ್ತು ಇ–ಬುಕ್‌ ರೂಪಗಳಲ್ಲಿ ಬಿಡುಗಡೆ ಮಾಡಲಾಯಿತು.

ರಂಗಕರ್ಮಿ ಅರುಂಧತಿ ನಾಗ್‌ ಅವರಿಗೆ ಈ ಸಮಾರಂಭ ಪತಿ ಶಂಕರ್‌ ನಾಗ್‌ ಅವರ ನೆನಪು ಕಾಡುವಂತೆ ಮಾಡಿತು. ‘ಶಂಕರ್‌ ಇರುತ್ತಿದ್ದರೆ ಖಂಡಿತಾ ಕನ್ನಡಕ್ಕಾಗಿ ಇಂಥ ಒಂದು ಪ್ರಯತ್ನ ಮಾಡುತ್ತಿದ್ದರು’ ಎಂದರು.

ADVERTISEMENT

‘ಕನ್ನಡ ಓದಲು ಕಷ್ಟಪಡುವ ನನ್ನಂಥವರಿಗೆ ಆಡಿಯೊ ಬುಕ್‌ ಪ್ರಯೋಜನಕಾರಿ. ನಾನು ಕನ್ನಡ ಅಕ್ಷರಗಳಲ್ಲೇ ಕಾದಂಬರಿಯನ್ನು ಓದಿ ಅರಗಿಸಿ ಕೊಳ್ಳಲು ಕನಿಷ್ಠ 3 ತಿಂಗಳು ಹಿಡಿಯುತ್ತದೆ. ಆಡಿಯೊ ಬುಕ್‌ ಇಂತಹ ಕೊರತೆ ನೀಗಿಸಲಿದೆ’ ಎಂದರು.

ಸಿನಿಮಾ ನಟ ಅಚ್ಯುತ್‌ ಕುಮಾರ್‌, ‘ಸಾಹಿತ್ಯವನ್ನು ಡಿಜಿಟಲ್‌ ಲೋಕಕ್ಕೆ ಒಗ್ಗಿಸಿಕೊಳ್ಳುವ ಹಾಗೂ ಆಡಿಯೊ ಬುಕ್‌ಗಳನ್ನು ರೂಪಿಸುವ ಪ್ರಯತ್ನಗಳು ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಸಾಕಷ್ಟು ಆಗಿವೆ. ಕನ್ನಡದಲ್ಲಿ ಅಷ್ಟಾಗಿ ಆಗಿರಲಿಲ್ಲ. ಈ ಕೊರತೆಯನ್ನುಮೈಲ್ಯಾಂಗ್‌ ಬುಕ್ಸ್‌ ನೀಗಿ ಸಲಿದೆ’ ಎಂಬ ಆಶಯ ವ್ಯಕ್ತಪಡಿಸಿದರು.

ಹಿರಿಯ ಪತ್ರಕರ್ತ ರವಿ ಹೆಗಡೆ, ‘ಇ–ಬುಕ್‌ ಹಾಗೂ ಆಡಿಯೊ ಬುಕ್‌ಗಳಿಂದ ಕನ್ನಡದ ಪ್ರಕಾಶನ ಸಂಸ್ಥೆಗಳಿಗೆ ಯಾವುದೇ ತೊಂದರೆ ಇಲ್ಲ. ಹೊಸ ಓದುಗರನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಸೆಳೆಯುವ ಶಕ್ತಿ ಇವುಗಳಿಗೆ ಇದೆ. ಮುಂದಿನ ತಲೆಮಾರಿನ ಓದುಗರನ್ನು ತಲುಪಲು ಇದು ನೆರವಾಗಲಿದೆ’ ಎಂದರು.

ಈ ಕೃತಿಯ ಆಡಿಯೊ ಬುಕ್‌ಗೆ ಧ್ವನಿಯಾಗಿರುವ ಸಿನಿಮಾ ನಟ ವಸಿಷ್ಠ ಸಿಂಹ, ಈ ಕಾದಂಬರಿ ಕಟ್ಟಿಕೊಡುವ ಭಾವತೀವ್ರತೆ ಬಗ್ಗೆ ವಿವರಿಸಿದರು.

‘ಶಂಕರ್‌ಗೆ ಕನ್ನಡ ಬರೆಯಲು ಬರುತ್ತಿರಲಿಲ್ಲ’
ಸಿನಿಮಾ ನಟರಾಗಿದ್ದಾಗ ಆರಂಭದಲ್ಲಿ ಶಂಕರ್ ನಾಗ್‌ ಅವರಿಗೆ ಕನ್ನಡ ಓದಲು– ಬರೆಯಲು ಬರುತ್ತಿರಲಿಲ್ಲವೇ? ಹೌದು. ಈ ಸಂಗತಿಯನ್ನು ಅವರ ಪತ್ನಿ ಅರುಂಧತಿ ನಾಗ್‌ ಅವರೇ ಬಹಿರಂಗಪಡಿಸಿದರು.

‘ಅನೇಕ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ ಬಳಿಕವೂ ಶಂಕರ್‌ಗೆ ಕನ್ನಡ ಓದಲು ಬರೆಯಲು ಬರುತ್ತಿರಲಿಲ್ಲ. ಅವನು ಹಾಗೂ ನಾನು ವನಮಾಲಾ ಅವರಿಂದ ಕನ್ನಡ ಪಾಠ ಹೇಳಿಸಿಕೊಳ್ಳುತ್ತಿದ್ದೆವು. ಅವನು ಬಲುಬೇಗ ಕಲಿತ. ನಾನು ಪ್ರಯತ್ನವನ್ನು ಅರ್ಧಕ್ಕೆ ನಿಲ್ಲಿಸಿದೆ. ಈಗಲೂ ಕನ್ನಡ ಅಕ್ಷರಗಳನ್ನು ಓದಲು ಹೆಣಗಾಡುತ್ತೇನೆ’ ಎಂದು ಅವರು ತಿಳಿಸಿದರು.

ಕಾದಂಬರಿ: ಅಶ್ವತ್ಥಾಮನ್‌
ಪುಟ: 161
ದರ: ₹ 150
ಪ್ರಕಾಶನ: ಮೈಲ್ಯಾಂಗ್‌ ಬುಕ್ಸ್‌
(ಗೂಗಲ್ ಪ್ಲೇಸ್ಟೋರ್‌ನಲ್ಲಿ ಆ್ಯಂಡ್ರಾಯ್ಡ್‌ ಆ್ಯಪ್‌ ಡೌನ್‌ ಲೋಡ್‌ ಕೊಂಡಿ:https://mylang.in/pages/mylang-mobile-apps)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.