ADVERTISEMENT

ಮೋದಿ ಜನ್ಮದಿನ: ಬೆಂಗಳೂರಿನ ವಿವಿಧೆಡೆ ಸಂಭ್ರಮ

ಸಚಿವರಿಂದ ವಿವಿಧ ಸೇವಾ ಕಾರ್ಯಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 19:27 IST
Last Updated 17 ಸೆಪ್ಟೆಂಬರ್ 2021, 19:27 IST
ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸಿಹಿ ಹಂಚಿದರು (ಎಡ ಚಿತ್ರ) ಮಹದೇವಪುರ ಕ್ಷೇತ್ರದಲ್ಲಿ ಶಾಸಕ ಅರವಿಂದ ಲಿಂಬಾವಳಿ ಅವರು ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಿದರು. ಮುಖಂಡರಾದ ಮನೋಹರರೆಡ್ಡಿ, ನಟರಾಜ್, ಪುಷ್ಪಾ ಮಂಜುನಾಥ್, ವೆಂಕಟಸ್ವಾಮಿ ರೆಡ್ಡಿ, ನಲ್ಲೂರಹಳ್ಳಿ ಚಂದ್ರಶೇಖರ್, ಪಿಳ್ಳಪ್ಪ, ಮಿಥುನ್ ರೆಡ್ಡಿ ಇದ್ದರು
ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸಿಹಿ ಹಂಚಿದರು (ಎಡ ಚಿತ್ರ) ಮಹದೇವಪುರ ಕ್ಷೇತ್ರದಲ್ಲಿ ಶಾಸಕ ಅರವಿಂದ ಲಿಂಬಾವಳಿ ಅವರು ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಿದರು. ಮುಖಂಡರಾದ ಮನೋಹರರೆಡ್ಡಿ, ನಟರಾಜ್, ಪುಷ್ಪಾ ಮಂಜುನಾಥ್, ವೆಂಕಟಸ್ವಾಮಿ ರೆಡ್ಡಿ, ನಲ್ಲೂರಹಳ್ಳಿ ಚಂದ್ರಶೇಖರ್, ಪಿಳ್ಳಪ್ಪ, ಮಿಥುನ್ ರೆಡ್ಡಿ ಇದ್ದರು   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು 71ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಜನ್ಮದಿನವನ್ನು ನಗರದ ವಿವಿಧೆಡೆ ಸಂಭ್ರಮದಿಂದ ಶುಕ್ರವಾರ ಆಚರಿಸಲಾಯಿತು.

ಮಹಿಳೆಯರು, ಮಕ್ಕಳು ಹಾಗೂ ವೃದ್ಧರಿಗೆ ಕೆಲವರು ಸಿಹಿ ಹಂಚಿ ಖುಷಿಪಟ್ಟರು. ಸಚಿವರು ವಿವಿಧ ಸೇವಾ ಕಾರ್ಯಗಳಿಗೆ ಚಾಲನೆ ನೀಡಿ ಮೋದಿ ಅವರ ಜನ್ಮದಿನದ ಸಂಭ್ರಮವನ್ನು ಇಮ್ಮಡಿಗೊಳಿಸಿದರು.

ಜಯಕಿರಣ ಫೌಂಡೇಷನ್‌ನ ಸಂಸ್ಥಾಪಕ ಕೆ.ಕಿರಣ್‌ಕುಮಾರ್‌ ನೇತೃತ್ವದಲ್ಲಿ ಕೆಂಗೇರಿಯ ಗುರುಕುಲ ವಿದ್ಯಾಪೀಠದಲ್ಲಿ 70 ಮಕ್ಕಳು ಹಾಗೂ ವೃದ್ಧರಿಗೆ ಆಹಾರ ವಿತರಿಸಲಾಯಿತು.

ADVERTISEMENT

ಬೆಂಗಳೂರು ದಕ್ಷಿಣ ಜಿಲ್ಲೆಯ ಜಯನಗರ ಮಂಡಲ ಬಿಜೆಪಿ ಘಟಕದ ವತಿಯಿಂದ ‘ಸೇವೆ ಮತ್ತು ಸಮರ್ಪಣೆ’ ಕುರಿತು ಅಂಚೆ ಚೀಟಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್‌ ಅವರು ಇದಕ್ಕೆ ಚಾಲನೆ ನೀಡಿದರು.

ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಸಂದೀಪ್‌ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಮೋದಿ ಅವರ ಜೀವನ–ಸಾಧನೆಯನ್ನು ಬಿಂಬಿಸುವಡಿಜಿಟಲ್ ಎಲ್‍ಇಡಿ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಯಿತು. ಮೋದಿ ಅವರ 20 ವರ್ಷಗಳ ರಾಜಕೀಯ ಪಯಣ, ಸಾಮಾಜಿಕ ಬದುಕಿನ ಚಿತ್ರಣಗಳನ್ನು ಕಟ್ಟಿಕೊಟ್ಟು ಅದನ್ನು ಜನರಿಗೆ ತಲುಪಿಸುವ, ಅವರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ.‌

ಲಸಿಕಾ ಅಭಿಯಾನ: ಮೋದಿ ಜನ್ಮದಿನದ ಪ್ರಯುಕ್ತ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೋವಿಡ್‌ ಲಸಿಕೆ
ಯನ್ನು ಉಚಿತವಾಗಿ ನೀಡುವ ಕಾರ್ಯ ಕ್ರಮ ಆಯೋಜಿಸಲಾಗಿತ್ತು. ಶಾಸಕ ಉದಯ ಗರುಡಾಚಾರ್‌ ಇದಕ್ಕೆ ಚಾಲನೆ ನೀಡಿದರು. ಜೊತೆಗೆ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಮುಖಗವಸು ಮತ್ತು ಸ್ಯಾನಿಟೈಸರ್‌ ವಿತರಿಸಿ ಕೋವಿಡ್‌ ಕುರಿತು ಜಾಗೃತಿ ಮೂಡಿಸಲಾಯಿತು.

ಮಲ್ಲೇಶ್ವರದಲ್ಲಿ ದಿನದ 24 ಗಂಟೆ ಲಸಿಕೆ

ಮೋದಿ ಜನ್ಮದಿನದ ಅಂಗವಾಗಿ ಮಲ್ಲೇಶ್ವರದಲ್ಲಿ ಏಕಕಾಲಕ್ಕೆ 54 ಕಡೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ದಿನದ 24 ಗಂಟೆ ಲಸಿಕೆ ನೀಡುವ ಸಲುವಾಗಿ ಕೋದಂಡರಾಮಪುರದ
ಕಬಡ್ಡಿ ಮೈದಾನದಲ್ಲಿ ಆರಂಭಿಸಿರುವ ಲಸಿಕಾ ಕೇಂದ್ರವನ್ನೂ ಉದ್ಘಾಟಿಸಲಾಯಿತು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌, ಟ್ಯಾಬ್‌ ಹಾಗೂ ಚಟುವಟಿಕೆ ಆಧಾರಿತ ಪಠ್ಯ ಪುಸ್ತಕ ವಿತರಿಸಿದರು. ಸ್ಮಾರ್ಟ್‌ ಬೋರ್ಡ್‌ ಉದ್ಘಾಟಿಸಿದ ಅವರು ಪ್ರೇರಣಾ ಆ್ಯಪ್‌ ಬಿಡುಗಡೆ ಮಾಡಿದರು.

‘ಭಾರತ ಪ್ರಕಾಶಿಸುತ್ತಿದೆ’

ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಬಿಎಂಪಿ ಸಹಯೋಗದೊಂದಿಗೆ ಕೋವಿಡ್‌ ಲಸಿಕಾ ಮೇಳ ಹಮ್ಮಿಕೊಳ್ಳಲಾಗಿತ್ತು. ಒಟ್ಟು 70 ಸ್ಥಳಗಳಲ್ಲಿ ಜನರಿಗೆ ಲಸಿಕೆಯನ್ನು ಉಚಿತವಾಗಿ ನೀಡಲಾಯಿತು.

ವೃದ್ಧರು ಹಾಗೂ ಅನಾರೋಗ್ಯ ಪೀಡಿತರ ಅನುಕೂಲಕ್ಕಾಗಿ ಮೂರು ಲಸಿಕಾ ವಾಹನಗಳ ವ್ಯವಸ್ಥೆ ಮಾಡಲಾಗಿದ್ದು ಇದಕ್ಕೂ ಚಾಲನೆ ನೀಡಲಾಯಿತು.

‘ಮೋದಿ ಅವರ ದೂರದೃಷ್ಟಿ ಹಾಗೂ ಜನಪರ ಕಾರ್ಯಕ್ರಮಗಳಿಂದಾಗಿ ವಿಶ್ವ‌ಮಟ್ಟದಲ್ಲಿ ಭಾರತ ಪ್ರಕಾಶಿಸುತ್ತಿದೆ’ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.