ADVERTISEMENT

ಚಿತ್ರಮಂದಿರ ತೆರೆದರೂ ಚಿತ್ರಗಳಿಲ್ಲ!

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 19:57 IST
Last Updated 19 ಜುಲೈ 2021, 19:57 IST
ಚಿತ್ರಮಂದಿರ ತೆರೆಯಲು ಅನುಮತಿ ನೀಡಿದರೂ, ಹೊಸ ಚಿತ್ರಗಳಿಲ್ಲದ ಕಾರಣ ಲಾಕ್‌ಡೌನ್‌ನಲ್ಲೇ ಇರುವಂತೆ ಕಂಡುಬಂದ ಬೆಂಗಳೂರಿನ ಸಂತೋಷ್‌ ಚಿತ್ರಮಂದಿರ       –ಪ್ರಜಾವಾಣಿ ಚಿತ್ರ
ಚಿತ್ರಮಂದಿರ ತೆರೆಯಲು ಅನುಮತಿ ನೀಡಿದರೂ, ಹೊಸ ಚಿತ್ರಗಳಿಲ್ಲದ ಕಾರಣ ಲಾಕ್‌ಡೌನ್‌ನಲ್ಲೇ ಇರುವಂತೆ ಕಂಡುಬಂದ ಬೆಂಗಳೂರಿನ ಸಂತೋಷ್‌ ಚಿತ್ರಮಂದಿರ       –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯ ಸರ್ಕಾರ ಕೋವಿಡ್ ಲಾಕ್‌ಡೌನ್‌ ಅನ್ನು ಇನ್ನಷ್ಟು ಸಡಿಲಿಸಿ, ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನ ಆರಂಭಿಸಲು ಒಪ್ಪಿಗೆ ನೀಡಿದೆ. ಆದರೆ, ಪ್ರೇಕ್ಷಕರ ಸಂಖ್ಯೆಯನ್ನು ನಿರ್ಬಂಧಿಸಿರುವ ಕಾರಣ ಸದ್ಯಕ್ಕೆ ಹೊಸ ಚಿತ್ರಗಳ ಬಿಡುಗಡೆಗೆ ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಹೊಸ ಚಿತ್ರ ಗಳಿಲ್ಲದೆ ‘ಲಾಕ್‌ಡೌನ್‌’ ಸ್ಥಿತಿಯಲ್ಲೇ ಚಿತ್ರಮಂದಿರಗಳಿವೆ.

ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಒಟ್ಟು ಸಾಮರ್ಥ್ಯದ ಶೇ 50ರಷ್ಟು ವೀಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸಿರುವುದು ಬಿಗ್‌ಬಜೆಟ್‌ ಚಿತ್ರಗಳ ಬಿಡುಗಡೆಗೆ ಅಡ್ಡಿಯಾಗಿದೆ. ಶೇ 100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಿ ದರಷ್ಟೇ ಚಿತ್ರ ಬಿಡುಗಡೆಗೆ ಬಿಗ್‌ಬಜೆಟ್‌ ಚಿತ್ರಗಳ ನಿರ್ಮಾಪಕರು ನಿರ್ಧರಿಸಿದ್ದಾರೆ.

ಪ್ರಸ್ತುತ ‘ಸಲಗ’, ‘ಕೋಟಿಗೊಬ್ಬ–3’, ‘ಭಜರಂಗಿ–2’, ‘ಕೆಜಿಎಫ್‌–2’, ‘ವಿಕ್ರಾಂತ್‌ ರೋಣ’ದಂತಹ ಬಿಗ್‌ ಬಜೆಟ್‌ ಚಿತ್ರಗಳು ಸೇರಿದಂತೆ ಹತ್ತಾರು ಸಿನಿಮಾಗಳು ಬಿಡುಗಡೆಗೆ ಕಾಯುತ್ತಿವೆ. ‘ಪ್ರೇಕ್ಷಕರ ಸಂಖ್ಯೆಯನ್ನು ಶೇ 50 ನಿರ್ಬಂಧಿಸಿರುವ ಕಾರಣ, ಜುಲೈ 30ರವರೆಗೂ ಕಾಯಲು ನಿರ್ಧರಿಸಿ
ದ್ದೇವೆ. ಮುಂದಿನ ಅನ್‌ಲಾಕ್‌ನಲ್ಲಿ ಮತ್ತಷ್ಟು ವಿನಾಯಿತಿ ನೀಡಿ, ಶೇ 100 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಿದರೆ ಆ.1 ಅಥವಾ 2ರಂದು ನಿರ್ಮಾಪಕರು ಸಭೆ ನಡೆಸಿ ಯಾವ ಚಿತ್ರ ಯಾವಾಗ ಬಿಡುಗಡೆ ಎಂಬುದರ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ನಟ ದುನಿಯಾ ವಿಜಯ್‌ ನಟನೆಯ ‘ಸಲಗ’ ಚಿತ್ರದ ನಿರ್ಮಾಪಕ ಶ್ರೀಕಾಂತ್‌ ಕೆ.ಪಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಹೊಸ ಚಿತ್ರಗಳಿಲ್ಲ’: ‘ಕೆಲ ನೆರೆ ರಾಜ್ಯಗಳಲ್ಲಿ ಚಿತ್ರಮಂದಿರಗಳನ್ನು ತೆರೆ ಯಲು ಇನ್ನೂ ಅವಕಾಶ ನೀಡಿಲ್ಲ. ಎಲ್ಲ ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡದ ಚಿತ್ರಗಳೇ ಇರುವುದಿಲ್ಲ. ಇತರೆ ಭಾಷೆಯ ಚಿತ್ರಗಳೂ ಓಡುತ್ತಿರುತ್ತವೆ. ಪ್ರೇಕ್ಷಕರ ಸಂಖ್ಯೆಯನ್ನು ನಿರ್ಬಂಧಿಸಿರುವ ಕಾರಣ ಬಿಗ್‌ಬಜೆಟ್‌ ಚಿತ್ರಗಳ ಬಿಡು ಗಡೆಗೆ ನಿರ್ಮಾಪಕರು ಹಿಂದೇಟು ಹಾಕುತ್ತಿದ್ದು, ಇತರೆ ಭಾಷೆಗಳ ಚಿತ್ರ ಗಳೂ ಸದ್ಯಕ್ಕೆ ಬಿಡುಗಡೆ ಕಾಣುತ್ತಿಲ್ಲ. ಹೀಗಾಗಿ ಈಗ ಚಿತ್ರಮಂದಿರ ತೆರೆದರೂ ಸಿನಿಮಾಗಳ ಕೊರತೆ ಎದುರಾಗಲಿದೆ. ರಾತ್ರಿ ಕರ್ಫ್ಯೂನಿಂದಾಗಿ ಒಂದು ಪ್ರದರ್ಶನವನ್ನೂ ಕಡಿತಗೊಳಿಸ ಬೇಕಾದ ಅನಿವಾರ್ಯತೆ ಇದೆ. ಸರ್ಕಾ ರದ ಮುಂದಿನ ನಿರ್ಧಾರವನ್ನು ಕಾದು ನೋಡುತ್ತೇವೆ’ ಎಂದು ಕರ್ನಾ ಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌.ಜೈರಾಜ್‌ ತಿಳಿಸಿದರು.

ಮರುಬಿಡುಗಡೆಗೆ ಸಜ್ಜಾಗಿದೆ ‘ಕೃಷ್ಣ ಟಾಕೀಸ್‌’: ಲಾಕ್‌ಡೌನ್‌ ಜಾರಿಗೂ ಮುನ್ನ ತೆರೆಕಂಡಿದ್ದ ನಟ ಅಜೇಯ್ ರಾವ್‌ ಅಭಿನಯದ ‘ಕೃಷ್ಣ ಟಾಕೀಸ್‌’ ಚಿತ್ರವನ್ನು ಮತ್ತೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ‘ಕಳೆದ ಏಪ್ರಿಲ್ 16ರಂದು ಬಿಡುಗಡೆಯಾದ ‘ಕೃಷ್ಣ ಟಾಕೀಸ್’ ಸಿನಿಮಾದ ಬಗ್ಗೆ ಮಾಧ್ಯಮ ಹಾಗೂ ಪ್ರೇಕ್ಷಕರಿಂದ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿತ್ತು. ನಮ್ಮ ಚಿತ್ರ ಮರುಬಿಡುಗಡೆಗೆ ಸಜ್ಜಾಗುತ್ತಿದೆ. ಸದ್ಯದಲ್ಲೇ ಬಿಡುಗಡೆಯ ದಿನಾಂಕ ತಿಳಿಸುತ್ತೇವೆ’ ಎಂದು ಚಿತ್ರದ ನಿರ್ದೇಶಕ ವಿಜಯಾನಂದ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.