ADVERTISEMENT

ಎನ್‌ಟಿಎಂ ಶಾಲೆ ವರ್ಗಾವಣೆ: ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 22:35 IST
Last Updated 21 ಸೆಪ್ಟೆಂಬರ್ 2021, 22:35 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಮೈಸೂರು ನಗರದ ಮಹಾರಾಣಿ ಮಾದರಿ ಶಾಲೆ (ಎನ್‌ಟಿಎಂ) ಜಾಗವನ್ನು ರಾಮಕೃಷ್ಣ ಆಶ್ರಮಕ್ಕೆ ವರ್ಗಾವಣೆ ಮಾಡುವುದನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಅನುಷಾ ಸೇರಿ ಶಾಲೆಯ 22 ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮೊಗದಂ ಅವರಿದ್ದ ಪೀಠ ಮಂಗಳವಾರ ಪ್ರಕಟಿಸಿತು.

ಸ್ಮಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಜನ ಕೇಂದ್ರ ಸ್ಥಾಪಿಸಲು ಎನ್‌ಟಿಎಂ ಶಾಲೆಯ ಜಾಗವನ್ನು ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರಿಸಲು 2013ರ ಜ.9ರಲ್ಲಿ ಹೊರಡಿಸಿರುವ ಆದೇಶ ಜಾರಿಗೆ ತರುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು 2020ರ ನ.19ರಂದು ಮೈಸೂರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಇದನ್ನು ಪ್ರಶ್ನಿಸಿದ್ದ ವಿದ್ಯಾರ್ಥಿಗಳು, ‘ಶಾಲೆಯನ್ನು ವರ್ಗಾವಣೆ ಮಾಡುವುದರಿಂದ ಶಿಕ್ಷಣ ಪಡೆಯುವ ನಮ್ಮ ಮೂಲಭೂತ ಹಕ್ಕಿಗೆ ಚ್ಯುತಿಯಾಗಲಿದೆ’ ಎಂದು ಆಕ್ಷೇಪಿಸಿದ್ದರು.

ADVERTISEMENT

‘ಶಾಲೆಯನ್ನು ವರ್ಗಾವಣೆ ಮಾಡುವುದರಿಂದ ಮೂಲಭೂತ ಹಕ್ಕು ಉಲ್ಲಂಘನೆಯಾಗುತ್ತದೆ ಎಂಬ ಅರ್ಜಿದಾರರ ವಾದ ಒಪ್ಪಲಾಗದು’ ಎಂದು ಅಭಿಪ್ರಾಯಿಸಿದ ಪೀಠ, ಅರ್ಜಿ ವಜಾಗೊಳಿಸಿತು.

1892ರಲ್ಲಿ ಮೊದಲ ಬಾರಿಗೆ ಮೈಸೂರಿಗೆ ಭೇಟಿ ನೀಡಿದ್ದ ಸ್ವಾಮಿ ವಿವೇಕಾನಂದರು ನಿರಂಜನಮಠದಲ್ಲಿ ತಂಗಿದ್ದರು. ಆ ಜಾಗವನ್ನು ಮೈಸೂರು ಮಹಾನಗರ ಪಾಲಿಕೆಯು ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರ ಮಾಡಿತ್ತು. ₹25 ಕೋಟಿ ವೆಚ್ಚದಲ್ಲಿ ವಿವೇಕಾನಂದ ಸ್ಮಾರಕ ಯುವ ಸಾಂಸ್ಕೃತಿಕ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಎನ್‌ಟಿಎಂ ಶಾಲೆಯನ್ನು ದೇವರಾಜ ಅರಸು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದಿಗೆ ವಿಲೀನ ಮಾಡುವಂತೆ ಆದೇಶಿಸಲಾಗಿತ್ತು.

2013ರ ಈ ಆದೇಶವನ್ನು ಏಳು ವರ್ಷಗಳ ಬಳಿಕ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗೆ ಶಿಕ್ಷಣ ಇಲಾಖೆ ಆಯುಕ್ತರು ಪತ್ರ ಬರೆದಿದ್ದರು. ಈ ಪತ್ರವನ್ನು ವಿದ್ಯಾರ್ಥಿಗಳು ಪ್ರಶ್ನಿಸಿದ್ದರು.

ಆನೆಗೆ ತುರ್ತು ಚಿಕಿತ್ಸೆ ಕೋರಿ ಅರ್ಜಿ
ಬೆಂಗಳೂರು: ತುಮಕೂರಿನಲ್ಲಿ ಖಾಸಗಿ ಒಡೆತನದಲ್ಲಿರುವ ಲಕ್ಷ್ಮಿ ಎಂಬ ಆನೆಗೆ ತುರ್ತು ವೈದ್ಯಕೀಯ ಚಿಕಿತ್ಸೆ ಕೊಡಿಸಿ ಪುನರ್ವಸತಿ ಕಲ್ಪಿಸುವ ಅಗತ್ಯವಿದೆ ಎಂದು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಉಗ್ರಾದಿ ಗವಿಮಠ ಮಹಾಸಂಸ್ಥಾನ ಉರ್ವಕೊಂಡಕ್ಕೆ ಸೇರಿದ ಆನೆ ಇದಾಗಿದೆ.

1992ರಲ್ಲಿ ಕರ್ನಾಟಕ ಅರಣ್ಯ ಕ್ಯಾಂಪ್‌ನಲ್ಲಿ ಜನಿಸಿದ ಆನೆಮರಿಯನ್ನು 18 ತಿಂಗಳ ಬಳಿಕ 1994ರ ಮಾರ್ಚ್‌ 28ರಂದು ಮಠಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಸ್ತಾಂತರಿಸಿದ್ದರು. ಗವಿಮಠದ ಶಾಖಾ ಮಠವಾದ ತುಮಕೂರು ಜಿಲ್ಲೆಯ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಸ್ವಾಧೀನದಲ್ಲಿ ಆನೆ ಇತ್ತು ಎಂದು ಪೀಪಲ್ ಫಾರ್ ಅನಿಮಲ್ ಮೈಸೂರು ಸಂಘಟನೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದೆ.‌

ಮೂತ್ರನಾಳ ಸೋಂಕಿನಿಂದ ಬಳಲುತ್ತಿದ್ದ ಆನೆ ಲಕ್ಷ್ಮಿಯನ್ನು 2008ರಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಸ್ಥಳಾಂತರ ಮಾಡಿ ಚಿಕಿತ್ಸೆ ನಿಡಲಾಗಿತ್ತು. ಬಳಿಕ ಮತ್ತೆ ಮಠಕ್ಕೆ ಹಸ್ತಾಂತರಿಸಲಾಗಿದೆ.

‘ಆನೆಗೆ ಹೊಡೆದು ಭಿಕ್ಷಾಟನೆಗೆ ಬಳಸಿಕೊಳ್ಳುತ್ತಿರುವ ವಿಡಿಯೊ ಮತ್ತು ಚಿತ್ರಗಳನ್ನು ಗಮನಿಸಿದರೆ ಆನೆಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಆಂಧ್ರ ಪ್ರದೇಶಕ್ಕೆ ನಡೆಸಿಕೊಂಡೇ ಕರೆದೊಯ್ಯಲಾಗಿದೆ’ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, ಪ್ರತಿವಾದಿಗಳಿಗೆ ನೋಟಿಸ್ ನೀಡಿ ವಿಚಾರಣೆಯನ್ನು ನ.24ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.