ADVERTISEMENT

ಪರಾಗದ ಕಣಗಳಿಂದಲೂ ಅನಾರೋಗ್ಯ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 9:58 IST
Last Updated 18 ಅಕ್ಟೋಬರ್ 2019, 9:58 IST
   

ಬೆಂಗಳೂರು:ಒಂದು ವರ್ಷದ ಹಿಂದೆ ಅನುಷ್ಕಾ ಗೌಡ ಎಂಬುವವರು ಅಮೇರಿಕಾದಿಂದ ತನ್ನ ಎರಡು ವರ್ಷದ ಮಗಳ ಜೊತೆಗೆ ಬೆಂಗಳೂರಿಗೆ ಬಂದು ನೆಲೆಸಿದ್ದರು.ಕೆಲಸಮಯಗಳ ಬಳಿಕ ಮಗುವಿನಲ್ಲಿ ಅಸ್ತಮಾದ ಇನ್ನೊಂದು ರೂಪದಂತಿರುವ ಅಲರ್ಜಿಕ್ ರೆನಿಟಿಸ್ ಕಾಣಿಸಿಕೊಂಡಿತ್ತು.

`ಹೇ ಫೀವರ್’ ಎಂಬ ಹೆಸರಿನ ಜ್ವರವೇ ಈ ಅಲರ್ಜಿಕ್ ರೆನಿಟಿಸ್. ಇದು ಸಾಮಾನ್ಯವಾಗಿ ಸುತ್ತಲಿನ ಪರಿಸರದಲ್ಲಿನ ಹೂವಿನ ಪರಾಗ, ಧೂಳು ಮತ್ತು ಬೆಕ್ಕಿನ ಕೂದಲಿನಂತಹ ವಸ್ತುಗಳಿಂದ ಹರಡುತ್ತದೆ. ವಿಪರೀತ ಶೀತದಿಂದ ಉಬ್ಬಸ ಹಾಗೂ ಕಣ್ಣುಗಳು ಊದಿಕೊಳ್ಳುವಷ್ಟರ ಮಟ್ಟಿಗೆ ಈ ಜ್ವರದ ತೀವ್ರತೆಯಿರುತ್ತದೆ.

ಅನುಷ್ಕಾ ಗೌಡರ ಮಗಳು ನಿದ್ದೆ ಹಾಗೂ ಏಕಾಗ್ರತೆಯ ಮೇಲೆ ವ್ಯತಿರಿಕ್ತ ಪರಿಣಾಮ ಅನುಭವಿಸುವಂತಾಯಿತು. ಇದು ಕೂಡ ಈ ರೋಗದ ಲಕ್ಷಣಗಳೇ. ವೈದ್ಯರು ಮಗುವಿನ ರೋಗಲಕ್ಷಣಗಳನ್ನು ಕಡಿಮೆ ಮಾಡುವ ಸಲುವಾಗಿ ಶ್ವಾಸಕೋಶವನ್ನುಬಲಪಡಿಸುವ ಔಷಧಿ ಹಾಗೂ ಆಹಾರ ಕ್ರಮವನ್ನು ಬದಲಾಯಿಸುವ ಸಲಹೆ ನೀಡಿದರು.

ADVERTISEMENT

ಒಂದು ಬಾರಿಈ ರೋಗಕ್ಕೆ ಒಳಗಾದ ಮಗುವು ಜೀವನ ಪರ್ಯಂತ ಅದರ ಪರಿಣಾಮವನ್ನು ಅನುಭವಿಸುತ್ತಲೇ ಬದುಕಬೇಕಾಗಿ ಬರಬಹುದು.

ಉದ್ಯಾನ ನಗರಿ ಬೆಂಗಳೂರಿನ ವಾಯು ಮಾಲಿನ್ಯವಷ್ಟೇ ಈ ಆತಂಕಕ್ಕೆ ಕಾರಣವಲ್ಲ. ಬದಲಾಗಿ ಇದರ ಜೊತೆಗೆ ಮಹಾನಗರದಲ್ಲಿ ಸಂಭವಿಸುವ ಜೈವಿಕ ಮಾಲಿನ್ಯ, ನೈಸರ್ಗಿಕ ಮಾಲಿನ್ಯಗಳೂ ಎರಡು ವರ್ಷದಷ್ಟು ಸಣ್ಣ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ರೋಗಗಳಿಗೆ ಕಾರಣವಾಗಿದೆ.

ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಪಿಜಿಐಎಮ್‍ಇಆರ್) ಪರಿಸರ ಅಧ್ಯಯನ ವಿಭಾಗದಹೆಚ್ಚುವರಿ ಪ್ರಾಧ್ಯಾಪಕರಾಗಿರುವ ಡಾ. ರವೀಂದ್ರ ಖಲಿವಾಲ್,‘ಹೂ ಬಿಡುವ ಗಿಡಮರಗಳ ಪರಾಗಗಳಿಂದ ಪರಾಗಸ್ಪರ್ಶ ನಡೆಯುವ ನಿಸರ್ಗ ಸಹಜ ಪ್ರಕ್ರಿಯೆಯಿಂದಾಗಿ ಮನುಷ್ಯನ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತೆ. ಇದರಿಂದಾಗಿ ಅಸ್ತಮಾ, ಕ್ರಾನಿಕ್ ಅಬ್ಸಟ್ರಕ್ಟಿವ್ ಪಲ್ಮನರಿಡಿಸೀಸ್ (ದೀರ್ಘಕಾಲದ ಶ್ವಾಸಕೋಶದ ಕಾಯಿಲೆ), ಅಲೆರ್ಜಿಕ್ ರಿನಿಟಿಸ್, ರಿನೋ – ಕನ್ಜಕ್ಟಿವಿಟೀಸ್ ಹಾಗೂ ನಾನಾ ವಿಧದ ಚರ್ಮದ ಖಾಯಿಲೆಗಳಾದ ಎಕ್ಜೆಮಾ ಮತ್ತು ಡೆರ್ಮಟಿಟಿಸ್ ರೋಗಗಳು ಬರುವ ಸಾಧ್ಯತೆಗಳಿರುತ್ತವೆ’ ಎಂದು ವಿವರಿಸುತ್ತಾರೆ.

‘ಹೀಗೆ ವಾತಾವರಣದಲ್ಲಿರುವ ಜೈವಿಕ ಮಾಲಿನ್ಯಕಾರಕಗಳು ವಾಯಮಾಲಿನ್ಯದ ಮಟ್ಟವನ್ನು ಅಳೆಯುವ `ಪಿಎಂ’ನ ಸಂಯೋಜಿತ ಭಾಗವಾಗಿದ್ದು, ಅವು ಅತ್ಯಂತ ಸೂಕ್ಷ್ಮ ಕಣಗಳಾಗಿವೆ. ಆದ್ದರಿಂದ ಇವು ಉಸಿರಾಟದ ಕಾಯಿಲೆ, ಪಾಶ್ರ್ವವಾಯು ಮತ್ತು ಹೃದಯದ ತೊಂದರೆಗಳಂತಹ ಅಪಾಯಕಾರಿ ಅಂಶಗಳಾಗಿ ಕಾರ್ಯನಿರ್ವಹಿಸುತ್ತವೆ’ ಎನ್ನುತ್ತಾರೆ ಅವರು.

ಜೈವಿಕ ಮಾಲಿನ್ಯಗಳಿಂದ ಎದುರಾಗುವ ಇಂತಹ ಕಾಯಿಲೆಗೆ ಯಾವುದೇ ಖಚಿತವಾದ ಚಿಕಿತ್ಸೆ ಇಲ್ಲದಿರುವುದರಿಂದ ಮುನ್ನೆಚ್ಚರಿಕೆ ಹಾಗೂ ತಡೆಗಟ್ಟುವಿಕೆಯೇ ಅಪಾಯವನ್ನು ನಿಯಂತ್ರಿಸುವ ಏಕೈಕ ಮಾರ್ಗವಾಗಿದೆ.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‍ನ ಮಾಜಿ ವೈದ್ಯಕೀಯ ಅಧಿಕಾರಿ ಹಾಗೂ ಲೈಫ್ ಸ್ಪಾನ್ ಇಂಡಿಯಾದಲ್ಲಿ ಮಧುಮೇಹ ಸಲಹಾ ತಜ್ಞರಾಗಿರುವ ಡಾ. ರಿಂಕು ರಾಯ್, ‘ಜೈವಿಕ ಮಾಲಿನ್ಯಗಳಿಂದ ಉಂಟಾಗುವ ಇಂತಹ ರೋಗಗಳು ಮುಂದೆ ದೀರ್ಘಕಾಲದ ಅಸ್ತಮಾ ಅಥವಾ ಬ್ರಾಂಕೈಟಿಸ್‍ಗೂ ಕಾರಣವಾಗಬಹುದು. ವಿಶೇಷವಾಗಿ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯು ದುರ್ಬಲವಾಗಿರುತ್ತದೆ’ ಎನ್ನುತ್ತಾರೆ.

ಮಳೆಗಾಲದ ತಿಂಗಳುಗಳಲ್ಲಿ ಅಲರ್ಜಿಯನ್ನುಂಟು ಮಾಡುವ ಪರಾಗಗಳು ಹೆಚ್ಚಿನ ಸಂಖ್ಯೆಯಲ್ಲಿ ವಾತಾವರಣ ಸೇರಿಕೊಳ್ಳುತ್ತವೆ. ದೆಹಲಿ ಮೂಲದ ಇನ್‍ಸ್ಟಿಟ್ಯೂಟ್ ಆಫ್ ಜಿಯೋನಾಮಿಕ್ಸ್ ಆಂಡ್ ಇಂಟರ್‍ಗ್ರೇಟಿವ್ ಬಯಾಲಜಿಯ ವಿಜ್ಞಾನಿ ಎ.ಬಿ. ಸಿಂಗ್ ಅವರ ಪ್ರಕಾರ ‘ಪರಾಗಗಳು ನೀರಿನತ್ತ ಆಕರ್ಷಿತಗೊಳ್ಳುವ ಗುಣವನ್ನು ಹೊಂದಿರುತ್ತವೆ. ಮಳೆಗಾಲದಲ್ಲಿ ಗಾಳಿಯಲ್ಲಿಯೇ ಅಧಿಕ ತೇವಾಂಶವಿರುವುದರಿಂದ ಪರಾಗದ ಸೂಕ್ಷ್ಮ ಕಣಗಳು ಇನ್ನಷ್ಟು ವಿಭಜನೆಗೊಂಡು ಹೆಚ್ಚು ಸಮಸ್ಯೆಗೆ ಕಾರಣವಾಗುತ್ತದೆ’.

ದ್ವಿಗುಣಗೊಂಡ ಅಪಾಯ

ಜೈವಿಕ ಮಾಲಿನ್ಯಕಾರಕಗಳಾದ ಗಿಡ, ಮರಗಳಲ್ಲಿ ಬಿಡುವ ಹೂವಿನ ಪರಾಗಗಳ ಕಣಗಳು ಬೆಂಗಳೂರು ಮಹಾನಗರದ ಹವಾಮಾನದಲ್ಲಿ ಕೆಲವು ಋತುಗಳಲ್ಲಷ್ಟೇ ಇರುವುದಾದರೂ ಇತ್ತೀಚಿನ ವರ್ಷಗಳಲ್ಲಿ ವಾಹನ ದಟ್ಟಣೆಯಿಂದ ಉಂಟಾಗುತ್ತಿರುವ ಮಾಲಿನ್ಯವು ಈ ಸಮಸ್ಯೆಯನು ಇನ್ನಷ್ಟು ಉಲ್ಬಣಗೊಳಿಸಿದೆ.

‘ಪರಾಗಗಳು ಹವಾಮಾನದಲ್ಲಿರುವ ಇತರ ಮಾಲಿನ್ಯಗಳ ಕಣಗಳೊಂದಿಗೆ ಸೇರಿಕೊಂಡು ಇನ್ನಷ್ಟು ಅಪಾಯಕಾರಿಯಾಗುತ್ತದೆ. ಪರಾಗಗಳ ಕಣವನ್ನು ವಾಯುಮಾಲಿನ್ಯಕಾರಕಗಳು ಬದಲಾಯಿಸುತ್ತವೆ. ಮಾಲಿನ್ಯ ಕಾರಕಗಳಿಂದಾಗಿ ಪರಾಗದ ಕಣಗಳುತೆಳುವಾಗುವುದು, ಗಾತ್ರ ಕಿರಿದುಗೊಳಿಸುವುದುಅಥವಾ ದ್ರವರೂಪಕ್ಕಿಳಿಯುವ ಸಾಧ್ಯತೆ ಇದೆ. ಇದು ವಾತಾವರಣದಲ್ಲಿ ಆಂತರಿಕ ಕಣಗಳು ಅಥವಾ ಉಪ ಪರಾಗಗಳ ಬಿಡುಗಡೆಗೆ ಕಾರಣವಾಗುತ್ತದೆ’ ಎನ್ನುತ್ತಾರೆ ಡಾ. ಖಲಿವಾಲ್.

ಜೈವಿಕ ಮಾಲಿನ್ಯಕಾರಕಗಳಿಂದ ಉಂಟಾಗುವ ಅಲರ್ಜಿಯ ಜೊತೆಗೆ ಮಾನವ ನಿರ್ಮಿತ ಮಾಲಿನ್ಯಕಾರಗಳಿಂದಲೂ ಸಮಸ್ಯೆ ಹೆಚ್ಚಳವಾಗಿದೆ. ಮಕ್ಕಳ ಶ್ವಾಸಕೋಶಶಾಸ್ತ್ರಜ್ಞ ಡಾ. ಪರಮೇಶ್ ಹೆಚ್. ಅವರ ಪ್ರಕಾರ ‘ಬೆಂಗಳೂರಿನ ಗಾಳಿಯನ್ನು ಒಂದು ಗಂಟೆ ಉಸಿರಾಡಿದ ವ್ಯಕ್ತಿ ಅನುಭವಿಸುವ ಹಾನಿಯನ್ನು ಸರಿಪಡಿಸಲು ಒಂದು ತಿಂಗಳೇ ಬೇಕಾಗುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ವಾಯುಮಾಲಿನ್ಯದ ಕಣಗಳು ರಕ್ತ ಹೆಪ್ಪುಗಟ್ಟುವಿಕೆ, ಹೃದಯಾಘಾತ, ನರಗಳ ಹಾನಿಗೂ ಕಾರಣವಾಗುತ್ತದೆ’.

ಬೆಂಗಳೂರು ಮೂಲದ ಇಎನ್‍ಟಿ ಸರ್ಜನ್ ಹಾಗೂ ಅಲರ್ಜಿ ತಜ್ಞರಾಗಿರುವ ಡಾ. ಗಾಯತ್ರಿ ಪಂಡಿತ್ ಅವರ ಪ್ರಕಾರ ‘ಉಸಿರಾಟದ ತೊಂದರೆಗಳಿಗೆ ಹಾಗೂ ಅಲರ್ಜಿಗೆ ಧೂು ಪ್ರಮುಖ ಕಾರಣವಾಗಿದ್ದು, ನಂತರದ ಸ್ಥಾನವನ್ನು ಪರಾಗಗಳು ಪಡೆದಿವೆ. ಇದು ಪ್ರತಿಶತ 20ರಷ್ಟಿದೆ’.

‘ಲೇಕ್ ಸೈಡ್ ಮೆಡಿಕಲ್ ಸೆಂಟರ್ ಆಂಡ್ ಆಸ್ಪತ್ರೆ ನಡೆಸಿದ ಅಧ್ಯಯನದ ಪ್ರಕಾರ 1979ರಲ್ಲಿ ಶೇ.9 ಮಕ್ಕಳು ಅಸ್ತಮಾದಿಂದ ಬಳಲುತ್ತಿದ್ದರು. 2009ರಲ್ಲಿ ಈ ಸಂಖ್ಯೆಯು ಮೂರು ಪಟ್ಟಿನಷ್ಟು ಅಧಿಕಗೊಂಡಿದ್ದು, 25 ಪ್ರತಿಶತಕ್ಕೇರಿತು. ಇದೀಗ ಶೇ. 35ಕ್ಕಿಂತಲೂ ಅಧಿಕ ಸಂಖ್ಯೆಯ ಮಕ್ಕಳು ಅಸ್ತಮಾ ಅಥವಾ ಇನ್ನಿತರ ಶ್ವಾಸಕೋಶ ಸಂಬಂಧಿ ರೋಗಗಳಿಂದ ಬಳಲುತ್ತಿದ್ದಾರೆ’ ಎನ್ನುತ್ತಾರೆ ಅಧ್ಯಯನ ತಂಡದ ಭಾಗವಾಗಿದ್ದ ಡಾ. ಪರಮೇಶ್.

ನಿಭಾಯಿಸುವ ದಾರಿಗಳು

ನಗರದಲ್ಲಿನ ಜೈವಿಕ ಮಾಲಿನ್ಯಕಾರಕಗಳ ಬೆಳವಣಿಗೆಯನ್ನು ಹತೋಟಿಗೆ ತರುವ ಅನೇಕ ಮಾರ್ಗೋಪಾಯಗಳಿವೆ. ಜೈವಿಕ ಮಾಲಿನ್ಯಕಾರಕಗಳೆಂದರೆ ಹೂಬಿಡುವ ಗಿಡ, ಮರಗಳಿಂದ ಬಿಡುಗಡೆಯಾಗುವ ಪರಾಗ ಅಥವಾ ಶಿಲೀಂಧ್ರ ಬೀಜಗಳು. ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ಪ್ರಾಧ್ಯಾಪಕಿನಂದಿನಿ ಎನ್. ಅವರ ಪ್ರಕಾರ `ಪೆಲ್ಟೋಫಾರಂ ಸ್ಟೆರೋಕಾರ್ಪಂ (ಕಾಪರ್ ಕಾಡ್) ಹಾಗೂ ಡೆಲೋನಿಕ್ಸ್ ರೆಜಿಯಾ (ಗುಲ್‌ಮೊಹರ್) ಹಾಗೂ ಇತರ ಕೆಲವು ಮರಗಳು ಪರಾಗಗಳನ್ನು ಗಾಳಿಯೊಂದಿಗೆ ಬಿಡುಗಡೆ ಮಾಡುತ್ತವೆ.

ಡಾ. ಖಲಿವಾಲ್ ಅವರ ಸಲಹೆಯಂತೆ ಮೊದಲ ಹೆಜ್ಜೆಯಾಗಿ ಇಂತಹ ಮರಗಳನ್ನು ಬೆಳೆಸುವುದನ್ನು ತಡೆಯಬೇಕಿದೆ. ’ಪರಾಗಕುರಿತಾದ ಮಾಹಿತಿಯಿರುವ ಕ್ಯಾಲೆಂಡರ್ ಹಾಗೂ ಅದರ ಕುರಿತಾದ ಮಾಹಿತಿಯನ್ನು ಜನರಿಗೆ ನೀಡುವುದರಿಂದ ಪರಾಗಗಳಿಂದ ಎದುರಾಗುವ ಅಪಾಯಗಳ ಬಗ್ಗೆ ಅವರು ಎಚ್ಚೆತ್ತುಕೊಳ್ಳಬಹುದು.ಹೆಚ್ಚು ಪರಾಗದ ಕಣಗಳನ್ನು ಹೊಂದಿರುವ ವಾತಾವರಣದಲ್ಲಿ ಹಾಗೂ ಪರಾಗ ಹೊರಬಿಡುವ ಋತುವಿನಲ್ಲಿ ರಕ್ಷಣಾತ್ಮಕ ಅಂಶಗಳನ್ನು ಜನರು ಅಳವಡಿಸಿಕೊಳ್ಳಬೇಕು. ಆ ಸಮಯದಲ್ಲಿ ಪರಾಗದಲ್ಲಿನ ಅಲರ್ಜಿಯ ಅಂಶಗಳೂ ಅಧಿಕವಾಗಿರುತ್ತವೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.