ADVERTISEMENT

ಹಿಂದುಳಿದ ವರ್ಗಕ್ಕೆ ಬಿಬಿಎಂಪಿ ಮೇಯರ್‌ ಹುದ್ದೆ ನೀಡುವ ಖಾಸಗಿ ಮಸೂದೆ ಮಂಡನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 16:53 IST
Last Updated 17 ಸೆಪ್ಟೆಂಬರ್ 2021, 16:53 IST
ಪಿ.ಆರ್‌ ರಮೇಶ್‌
ಪಿ.ಆರ್‌ ರಮೇಶ್‌   

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್‌ ಮತ್ತು ಉಪ ಮೇಯರ್‌ ಹುದ್ದೆಗಳ ಮೀಸಲಾತಿ ನಿಗದಿಯಲ್ಲಿ ಹಿಂದುಳಿದ ವರ್ಗಗಳಿಗೂ ಅವಕಾಶ ಕಲ್ಪಿಸುವುದಕ್ಕೆ ಪೂರಕವಾಗಿ ಕಾಂಗ್ರೆಸ್‌ ಸದಸ್ಯ ಪಿ.ಆರ್‌. ರಮೇಶ್‌ ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಖಾಸಗಿ ಮಸೂದೆ ಮಂಡಿಸಿದರು.

ಕರ್ನಾಟಕ ನಗರಾಡಳಿತ ಕಾಯ್ದೆಯ ವ್ಯಾಪ್ತಿಯಲ್ಲಿರುವ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ–ಎ, ಹಿಂದುಳಿದ ವರ್ಗ–ಬಿ ಹಾಗೂ ಸಾಮಾನ್ಯ ವರ್ಗಗಳಿಗೆ ಮೀಸಲಾತಿ ಸೌಲಭ್ಯವಿದೆ. 2020ರಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಪ್ರತ್ಯೇಕ ಕಾಯ್ದೆ ರೂಪಿಸಲಾಗಿತ್ತು. ಆಗ, ಹಿಂದುಳಿದ ವರ್ಗ–ಎ ಮತ್ತು ಹಿಂದುಳಿದ ವರ್ಗ–ಬಿ ಪದಗಳು ಮಸೂದೆಯಲ್ಲಿ ಬಿಟ್ಟುಹೋಗಿದ್ದವು. ಹೀಗಾಗಿ ಕಾಯ್ದೆಯಲ್ಲೂ ಈ ಅಂಶ ಇಲ್ಲ.

ಈ ತಾಂತ್ರಿಕ ಲೋಪವನ್ನು ಸರಿಪಡಿಸಿ, ಹಿಂದುಳಿದ ವರ್ಗದವರಿಗೂ ಮೇಯರ್‌ ಮತ್ತು ಉಪ ಮೇಯರ್‌ ಹುದ್ದೆಗಳಲ್ಲಿ ಮೀಸಲಾತಿ ನಿಗದಿಪಡಿಸುವುದಕ್ಕೆ ಅವಕಾಶ ಕಲ್ಪಿಸಲು ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಮೊದಲನೇ ತಿದ್ದುಪಡಿ) ಮಸೂದೆ–2020’ ಅನ್ನು ರಮೇಶ್‌ ಮಂಡಿಸಿದರು.

ADVERTISEMENT

‘ಹಿಂದೆ ಕಾಯ್ದೆ ರೂಪಿಸುವಾಗ ಕಣ್ತಪ್ಪಿನಿಂದ ಉಂಟಾಗಿರುವ ಸಮಸ್ಯೆ ಪರಿಹರಿಸಲು ಸರ್ಕಾರವೂ ಸಿದ್ಧತೆ ನಡೆಸಿದೆ. ಸರ್ಕಾರವೇ ಈ ಸಂಬಂಧ ಪ್ರತ್ಯೇಕ ಮಸೂದೆ ಮಂಡಿಸಲಿದೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಸದನಕ್ಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.