ADVERTISEMENT

ಉತ್ತರ ಪತ್ರಿಕೆ ಜತೆ ಭವಿಷ್ಯ ಕಸಿದರು!: 15 ವರ್ಷವಾದರೂ ಸಿಗದ ನ್ಯಾಯ

ಎಂ.ಜಿ.ಬಾಲಕೃಷ್ಣ
Published 9 ಜೂನ್ 2020, 22:01 IST
Last Updated 9 ಜೂನ್ 2020, 22:01 IST
ಫಕ್ರುದ್ದಿನ್‌
ಫಕ್ರುದ್ದಿನ್‌   

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಸಿಲ್ಲ ಎಂದು ನ್ಯಾಯಾಲಯದ ತೀರ್ಪು ಪ್ರಕಟವಾದ ಮೇಲೂ ಪದವಿಪೂರ್ವ ಶಿಕ್ಷಣ ಇಲಾಖೆಯು ಅಭ್ಯರ್ಥಿಯ ಅಂಕಪಟ್ಟಿ ನೀಡಿಲ್ಲ.

ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನ ವಿಜಯನಗರ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿದ್ದ ಫಕ್ರುದ್ದೀನ್‌ ಅಲಿಯಾಸ್ ಭಕ್ಷುಸಾಬ್ ಅನ್ಯಾಯಕ್ಕೆ ಒಳಗಾದವರು. ಕೊಪ್ಪಳದ ಗವಿಸಿದ್ದೇಶ್ವರ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 2005ರ ಜುಲೈನಲ್ಲಿ ಪೂರಕ ಪರೀಕ್ಷೆಯಲ್ಲಿ ಇತಿಹಾಸ ಪರೀಕ್ಷೆ ಬರೆಯುತ್ತಿದ್ದ ವೇಳೆ ಅವರನ್ನು ವಶಕ್ಕೆ ಪಡೆಯಲಾಗಿತ್ತು.

‘ನಾನೊಬ್ಬ ನಕಲಿ ಅಭ್ಯರ್ಥಿ ಎಂದು ಆರೋಪಿಸಿ ಜಾಗೃತ ದಳದವರು ನನ್ನ ಉತ್ತರ ಪತ್ರಿಕೆ ಕಸಿದುಕೊಂಡು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ನಾನೇನೂ ತಪ್ಪು ಮಾಡಿಲ್ಲ ಎಂದು ಹೇಳಿದರೂ ಕೇಳಿಸಿಕೊಳ್ಳಲಿಲ್ಲ. ಕೊನೆಗೆ ನ್ಯಾಯಾಲಯದ ಮೊರೆ ಹೋದೆ. ನ್ಯಾಯಾಲಯಕ್ಕೆ ಒಂಬತ್ತು ವರ್ಷ ಅಲೆದ ಬಳಿಕ 2014ರಲ್ಲಿ ಕೊಪ್ಪಳ ಜೆಎಂಎಫ್‌ಸಿ ನಾನು ನಿರ್ದೋಷಿ ಎಂದು ತೀರ್ಪು ನೀಡಿತು’ ಎಂದು ಫಕ್ರುದ್ದೀನ್‌ ಹೇಳಿದರು.

ADVERTISEMENT

‘ನನ್ನ ಫಲಿತಾಂಶ ತಿಳಿಸಿ ಎಂದು ನಾನು ಆರು ವರ್ಷಗಳಿಂದ ಕೇಳುತ್ತಿದ್ದೇನೆ. ನಿಮ್ಮ ಉತ್ತರ ಪತ್ರಿಕೆ ಕಳೆದುಹೋಗಿದ್ದು, ಹೊಸದಾಗಿ ಪರೀಕ್ಷೆ ಬರೆಯಿರಿ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಪಾಠ ಓದಿ 15 ವರ್ಷಗಳು ಕಳೆದಿವೆ. ಪಠ್ಯಗಳು ಬದಲಾಗಿವೆ. ಈಗ ‍ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಅಧಿಕಾರಿಗಳು ನನ್ನ ಭವಿಷ್ಯದ ಜತೆಗೆ ಚೆಲ್ಲಾಟವಾಡುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡರು.

ಈ ಬಗ್ಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಂದ ಪ್ರತಿಕ್ರಿಯೆ ಸಿಗಲಿಲ್ಲ.

ಕೆಲಸ ಕಾಯಂಗೆ ತೊಡಕು
ಫಕ್ರುದ್ದೀನ್‌ ಅವರು ಖಾಸಗಿ ಕಂಪನಿಯಲ್ಲಿ ಉದ್ಗೋಗದಲ್ಲಿದ್ದಾರೆ. ಈಚೆಗೆ ಅವರಿಗೆ ಬಡ್ತಿ ನೀಡುವ ವಿಚಾರ ಬಂದಾಗ, ‘ದ್ವಿತೀಯ ಪಿಯು ಫಲಿತಾಂಶದ ದಾಖಲೆ ತೋರಿಸಿದರೆ ಬಡ್ತಿ ಕೊಡುತ್ತೇವೆ’ ಎಂದು ಕಂಪನಿಯವರು ಹೇಳಿದ್ದರು. ಈ ಕಾರಣಕ್ಕೆ ಅವರು ಈಗ ಪದವಿಪೂರ್ವ ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.