ADVERTISEMENT

‘ಎಸ್‌ಡಿಎ’ ಪರೀಕ್ಷೆಗೆ ಬಂದಿದ್ದ ಅಭ್ಯರ್ಥಿ ಸಾವು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 15:43 IST
Last Updated 19 ಸೆಪ್ಟೆಂಬರ್ 2021, 15:43 IST

ಬೆಂಗಳೂರು: ದ್ವಿತೀಯ ದರ್ಜೆ ಸಹಾಯಕರ (ಎಸ್‌ಡಿಎ) ನೇಮಕಾತಿ ಪರೀಕ್ಷೆ ಬರೆಯುತ್ತಿದ್ದ ವೇಳೆಯಲ್ಲೇ ಅಭ್ಯರ್ಥಿ ಜಿ. ಸಂಪಿಗೆಕುಮಾರ್ (31) ಎಂಬುವರು ದಿಢೀರ್ ಕುಸಿದು ಬಿದ್ದು, ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.

‘ಕರ್ನಾಟಕ ಲೋಕಸೇವಾ ಆಯೋಗದಿಂದ ಭಾನುವಾರ ಪರೀಕ್ಷೆ ನಡೆಸಲಾಗುತ್ತಿತ್ತು. ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಸಂಪಿಗೆಕುಮಾರ್, ಅನ್ನಪೂರ್ಣೇಶ್ವರಿನಗರ ಠಾಣೆ ವ್ಯಾಪ್ತಿಯ ಎನ್‌ಆರ್‌ಐ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದರು. ಪರೀಕ್ಷೆ ಬರೆಯುತ್ತಿದ್ದ ಸಂಪಿಗೆಕುಮಾರ್, 11 ಗಂಟೆ ಸುಮಾರಿಗೆ ಕುಳಿತ ಜಾಗದಲ್ಲೇ ದಿಢೀರ್ ಕುಸಿದುಬಿದ್ದಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೊಠಡಿಯಲ್ಲಿದ್ದ ಮೇಲ್ವಿಚಾರಕರು, ಕಾಲೇಜು ಸಿಬ್ಬಂದಿ ಸಹಾಯದಿಂದ ಸಂಪಿಗೆಕುಮಾರ್ ಅವರನ್ನು ಫೋರ್ಟಿಸ್ ಆಸ್ಪತ್ರೆಗೆ ಕಳುಹಿಸಿದ್ದರು. ಮಾರ್ಗಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು’ ಎಂದೂ ಮೂಲಗಳು ತಿಳಿಸಿವೆ.

ADVERTISEMENT

‘ಘಟನೆ ಬಗ್ಗೆ ಸಂಪಿಗೆಕುಮಾರ್ ಅವರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವೇ, ಸಾವಿಗೆ ನಿಖರ ಕಾರಣವೇನು? ಎಂಬುದು ತಿಳಿಯಲಿದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.