ADVERTISEMENT

‘ವಾರ್ಡ್‌ ವಿಂಗಡಣೆ: 8 ವಾರದಲ್ಲಿ ಪೂರ್ಣಗೊಳಿಸಿ’

ಚುನಾವಣಾ ಆಯೋಗದ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಮೇ 2022, 19:24 IST
Last Updated 21 ಮೇ 2022, 19:24 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ವಿಜಯಪುರ ಮಹಾನಗರ ಪಾಲಿಕೆಗಳ ವಾರ್ಡ್‌ಗಳ ಮರುವಿಂಗಡಣೆ ಹಾಗೂ ಮೀಸಲಾತಿ ನಿಗದಿ ಕಾರ್ಯವನ್ನು ಎಂಟು ವಾರಗಳ ಒಳಗೆ ಪೂರ್ಣಗೊಳಿಸಿ, ಸಲ್ಲಿಸಬೇಕು ಎಂದು ರಾಜ್ಯ ಚುನಾವಣಾ ಆಯುಕ್ತ ಬಿ.ಬಸವರಾಜು ಅವರು ನಗರಾಭಿವೃದ್ಧಿ ಇಲಾಖೆಗೆ ಸೂಚಿಸಿದ್ದಾರೆ.

ಆಯುಕ್ತರ ಸೂಚನೆ ಮೇರೆಗೆ ಆಯೋಗದ ಕಾರ್ಯದರ್ಶಿ ಎಸ್‌.ಹೊನ್ನಾಂಬ ಅವರು ಈ ಕುರಿತು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರಿಗೆ ಶನಿವಾರ ಪತ್ರ ಬರೆದಿದ್ದಾರೆ.

‘ಬಿಬಿಎಂಪಿ ಚುನಾವಣೆ ಸಂಬಂಧ ದಾಖಲಾಗಿದ್ದ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ಮೇ 20ರಂದು ಹೊರಡಿಸಿರುವ ಆದೇಶದ ಪ್ರಕಾರ2020ರ ಬಿಬಿಎಂಪಿ ಕಾಯ್ದೆಗೆ ಅನುಗುಣವಾಗಿಯೇ ವಾರ್ಡ್‌ಗಳ ಪುನರ್ವಿಂಗಡಣೆ ಮಾಡಬೇಕು. ಮೀಸಲಾತಿಯ ಅಧಿಸೂಚನೆಗಳನ್ನು ಎಂಟು ವಾರಗಳ ಒಳಗೆ ಪೂರ್ಣಗೊಳಿಸಿ ಅಧಿಸೂಚನೆ ಹೊರಡಿಸಬೇಕು. ನ೦ತರ ಚುನಾವಣೆ ನಡೆಸಲು ಸಿದ್ಧತೆಗಳನ್ನು ಪ್ರಾರಂಭಿಸಬೇಕು’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

‘ವಿಜಯಪುರ ಮಹಾನಗರ ಪಾಲಿಕೆಯ ಚುನಾವಣೆಯನ್ನು ರಾಜ್ಯದ ಹೈಕೋರ್ಟ್‌ 2020ರ ಡಿ.10ರಂದು ನೀಡಿದ್ದ ಆದೇಶದಂತೆ ನಡೆಸಬೇಕಿದೆ. ಬಿಬಿಎಂಪಿ ಚುನಾವಣೆಗೆ ನಿಗದಿಪಡಿಸಿದಷ್ಟೇ ಕಾಲಮಿತಿಯು ವಿಜಯಪುರ ಪಾಲಿಕೆ ಚುನಾವಣೆಗೂ ಅನ್ವಯವಾಗುತ್ತದೆ. ಇದರ ಕ್ಷೇತ್ರ ಮರು ವಿಂಗಡಣೆಗಾಗಿ ಪ್ರತ್ಯೇಕ ಆಯೋಗವನ್ನು ರಚಿಸುವ ಅವಶ್ಯಕತೆ ಇಲ್ಲ. ಸರ್ಕಾರವೇ ಕೇತ್ರ ಮರುವಿಂಗಡಣೆ ಕಾರ್ಯವನ್ನು ಪೂರ್ಣಗೊಳಿಸಿ ಅಂತಿಮ ಅಧಿಸೂಚನೆಯ ಪ್ರತಿಯನ್ನು ಶೀಘ್ರವೇ ಒದಗಿಸಬೇಕು. ಮತದಾರರ ಪಟ್ಟಿ ತಯಾರಿಸಲು ಇದು ಸಹಕಾರಿಯಾಗಲಿದೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.