ADVERTISEMENT

ಜಾಲತಾಣ: ಕನ್ನಡದಲ್ಲೂ ಮಾಹಿತಿ ನೀಡುವುದು ಕಡ್ಡಾಯ

ಸಹಕಾರ ಇಲಾಖೆಗೆ ಟಿ.ಎಸ್. ನಾಗಾಭರಣ ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 22:18 IST
Last Updated 30 ಜೂನ್ 2020, 22:18 IST
ಟಿ.ಎಸ್.ನಾಗಾಭರಣ
ಟಿ.ಎಸ್.ನಾಗಾಭರಣ   

ಬೆಂಗಳೂರು: ‘ಸಹಕಾರ ಇಲಾಖೆಯ ಜಾಲ ತಾಣ ವನ್ನು ಎರಡು ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕನ್ನಡೀಕರಣಗೊಳಿಸಬೇಕು. ಆಡಳಿತದಲ್ಲಿ ಭಾಷಾ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಸೂಚಿಸಿದ್ದಾರೆ.

ಸಹಕಾರ ಇಲಾಖೆ ಹಾಗೂ ಅಧೀನ ಇಲಾಖೆಗಳ ಮುಖ್ಯಸ್ಥರೊಂದಿಗೆ ಟಿ.ಎಸ್. ನಾಗಾಭರಣ ಅವರು ಮಂಗಳವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಕನ್ನಡ ಪ್ರಗತಿ ಪರಿಶೀಲನೆ ನಡೆಸಿದರು.

‘ಸಹಕಾರ ಇಲಾಖೆಯ ಮೂಲ ಆಶಯಕ್ಕೆ ಮಾರಕವಾಗದಂತೆ ಅಧಿಕಾರಿಗಳು ಎಚ್ಚರವಹಿಸಿ ಕೆಲಸ ಮಾಡಬೇಕು. ಇಲಾಖೆಯೊಂದಿಗೆ ಹಳ್ಳಿಯ ಜನತೆ, ರೈತರು, ಕೆಳವರ್ಗದವರು ಹೆಚ್ಚಾಗಿ ವ್ಯವಹರಿಸುತ್ತಾರೆ. ಹಾಗಾಗಿ ಎಲ್ಲ ಹಂತದಲ್ಲೂ ಕನ್ನಡದಲ್ಲಿ ಮಾಹಿತಿ ನೀಡಬೇಕು. ಆದರೆ, ಸಹಕಾರ ಇಲಾಖೆಯ ವ್ಯಾಪ್ತಿಯಲ್ಲಿನ ಬಹುತೇಕ ಮಂಡಳಗಳ ಜಾಲತಾಣಗಳು ಈಗಲೂ ಅಂಗ್ಲಭಾಷೆಯಲ್ಲಿವೆ’ ಎಂದು ನಾಗಾಭರಣ ಬೇಸರ ವ್ಯಕ್ತಪಡಿಸಿದರು.

ADVERTISEMENT

ಕನ್ನಡಕ್ಕೆ ತರ್ಜುಮೆ ಮಾಡಿ: ‘ರಾಜ್ಯದಲ್ಲಿ ಒಟ್ಟು 3.72 ಲಕ್ಷ ಸಂಘಗಳಿದ್ದು, ಬಹುತೇಕ ಸಂಘಗಳ ನೋಂದಣಿ ಆಂಗ್ಲ ಭಾಷೆಯಲ್ಲಿರುವುದು ದುರ್ದೈವದ ಸಂಗತಿ. ಇವುಗಳನ್ನು ಕೂಡಲೇ ಕನ್ನಡಕ್ಕೆ ತರ್ಜುಮೆ ಮಾಡಬೇಕು’ ಎಂದು ಸೂಚಿಸಿದರು.

ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ‘ಪ್ರಾಧಿಕಾರ ನೀಡಿರುವ ಸಲಹೆಗಳ ಅನುಸಾರ ಜಾಲತಾಣಗಳನ್ನು ಸಂಪೂರ್ಣವಾಗಿ ಕನ್ನಡೀಕರಣಗೊಳಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.