ADVERTISEMENT

ಗಿಡ ಮರಗಳ ಒಳದನಿ ಕೇಳಿ ಪುಳಕಿತರಾದರು!

‘ಹಸಿರು ನಿನಾದ’ಕ್ಕೆ ತಲೆದೂಗಿದ ಪರಿಸರ ಪ್ರಿಯರು: ಪ್ರಾಜೆಕ್ಟ್‌ ವೃಕ್ಷ ಫೌಂಡೇಷನ್‌ ವತಿಯಿಂದ ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 19:37 IST
Last Updated 28 ಜುಲೈ 2019, 19:37 IST
ವಿಜಯ್‌ ನಿಶಾಂತ್‌ ಅವರು ಗಿಡಗಳ ಒಳದನಿಯನ್ನು ಕೇಳಿಸುವ ಪ್ರಾತ್ಯಕ್ಷಿಕೆಯನ್ನು ನೀಡಿದರು. ಪ್ರಮೋದಾ ದೇವಿ ಒಡೆಯರ್‌ ಇದ್ದಾರೆ
ವಿಜಯ್‌ ನಿಶಾಂತ್‌ ಅವರು ಗಿಡಗಳ ಒಳದನಿಯನ್ನು ಕೇಳಿಸುವ ಪ್ರಾತ್ಯಕ್ಷಿಕೆಯನ್ನು ನೀಡಿದರು. ಪ್ರಮೋದಾ ದೇವಿ ಒಡೆಯರ್‌ ಇದ್ದಾರೆ   

ಬೆಂಗಳೂರು: ಗಿಡ ಮರಗಳೂ ಮಾತನಾಡುತ್ತವೆಯೇ, ನಮಗೆ ಬೇಸರವಾದಂತೆ ಅವುಗಳಿಗೂ ನೋವಾಗುತ್ತದೆಯೇ? ನೋವು–ನಲಿವುಗಳನ್ನು ಅವುಗಳು ತೋರಿಸಿಕೊಳ್ಳುತ್ತವೆಯೇ?

ಇದಕ್ಕೆ ‘ಹೌದು’ ಅಥವಾ ‘ಇಲ್ಲ’ ಎಂಬ ಖಚಿತ ಉತ್ತರವನ್ನು ಈಗಲೇ ಹೇಳಲಾಗದು. ಆದರೆ,ಸಸ್ಯಗಳು ಕೂಡ ತಮ್ಮ ಸುತ್ತಮುತ್ತಲ ಆಗುಹೋಗುಗಳಿಗೆ ಸ್ಪಂದಿಸುವುದಂತೂ ಸತ್ಯ. ಅವುಗಳ ಪ್ರತಿಕ್ರಿಯೆಯನ್ನು ಸಂಗೀತದ ರೂಪದಲ್ಲಿ ಗ್ರಹಿಸುವುದಕ್ಕೂ ಸಾಧ್ಯವಿದೆ. ಗಿಡ ಮರಗಳ ಒಳದನಿ ಆಲಿಸುವ ಪ್ರಯತ್ನಕ್ಕೆ ನಗರದ ಅರಮನೆ ಆವರಣ ಭಾನುವಾರ ಸಾಕ್ಷಿಯಾಯಿತು. ಅಲ್ಲಿ ಸೇರಿದ್ದ ಪರಿಸರ ಕಾರ್ಯಕರ್ತರು ಗಿಡಗಳಿಂದ ಹೊಮ್ಮಿದ ನಿನಾದ ಆಲಿಸಿ ಪುಳಕಿತರಾದರು.

ಏನಿದು ಹಸಿರು ನಿನಾದ?: ಹೊರಗಿನ ವಾತಾವರಣದಲ್ಲಿ ಆಗುವ ಏರುಪೇರುಗಳಿಗೆ ಅನುಗುಣವಾಗಿ ಗಿಡಗಳ ಒಳಗಡೆ ನಡೆಯುವ ಬೆಳವಣಿಗೆಗಳನ್ನು ಹಾಗೂ ಎಲೆಕ್ಟ್ರಾನಿಕ್‌ ತರಂಗಗಳಲ್ಲಿ ಆಗುವ ವ್ಯತ್ಯಯವನ್ನು ಗ್ರಹಿಸಿ ಸಂಗೀತ ನಿನಾದದ ರೂಪದಲ್ಲಿ ಬಿಂಬಿಸುವ ಪ್ರಾತ್ಯಕ್ಷಿಕೆಯನ್ನು ‘ಪ್ರಾಜೆಕ್ಟ್‌ ವೃಕ್ಷ ಫೌಂಡೇಷನ್‌’ ಪ್ರದರ್ಶಿಸಿತು. ಮೈಸೂರು ರಾಜ ಮನೆತನದ ಪ್ರಮೋದಾ ದೇವಿ ಒಡೆಯರ್‌ ಈ ಅಪೂರ್ವ ಸಂದರ್ಭಕ್ಕೆ ಸಾಕ್ಷಿಯಾದರು.

ADVERTISEMENT

ಗಿಡದ ಎಲೆಗಳಿಗೆ ಎಲೆಕ್ಟ್ರೋಡ್‌ಗಳನ್ನು ಅಳವಡಿಸಿ ಅವುಗಳನ್ನು ಆ್ಯಂಪ್ಲಿಫೈಯರ್‌ಗಳಿಗೆ ಜೋಡಿಸಲಾಗಿತ್ತು. ಹೊರಗಿನ ಬೆಳವಣಿಗೆಯನ್ನು ಆಧರಿಸಿ ಗಿಡಗಳ ಒಳಗೆ ಎಲೆಕ್ಟ್ರಾನಿಕ್‌ ತರಂಗಗಳಲ್ಲಿ ಆಗುವ ಅಲ್ಪ ವ್ಯತ್ಯಾಸಕ್ಕನುಗುಣವಾಗಿ ಸಂಗೀತದ ಅಲೆಗಳು ಹೊರಹೊಮ್ಮಿದವು. ಗಿಡವನ್ನು ಸ್ಪರ್ಶಿಸಿದಾಗ, ಬೆಂಕಿಯನ್ನು ಸಮೀಪಕ್ಕೆ ಒಯ್ದಾಗ ಸಂಗೀತದ ಅಲೆಯಲ್ಲಿ ವ್ಯತ್ಯಯ ಉಂಟಾಗಿದ್ದು ಗಮನಕ್ಕೆ ಬಂತು. ಅಶ್ವತ್ಥ, ಮನಿಪ್ಲಾಂಟ್‌ ಹಾಗೂ ನೇರಳೆ ಗಿಡಗಳ ಎಲೆಗಳು ಉಂಟು ಮಾಡುವ ಸಂಗೀತದ ಅಲೆಗಳಲ್ಲಿ ವ್ಯತ್ಯಾಸವಿತ್ತು.

ಈ ಬಗ್ಗೆ ವಿವರಿಸಿದ ಸಸ್ಯ ವೈದ್ಯ ಹಾಗೂ ಪ್ರಾಜೆಕ್ಟ್‌ ವೃಕ್ಷ ಫೌಂಡೇಷನ್‌ನ ಸಂಸ್ಥಾಪಕ ವಿಜಯ್‌ ನಿಶಾಂತ್‌, ‘ಸಸ್ಯಗಳಿಗೂ ಜೀವ ಇದೆ. ಸುತ್ತ ಮುತ್ತಲಿನ ಆಗುಹೋಗುಗಳಿಗೆ ಅವುಗಳೂ ಸ್ಪಂದಿಸುತ್ತವೆ ಎಂಬುದನ್ನು ಜಗತ್ತಿಗೆ ಮೊಟ್ಟಮೊದಲು ತೋರಿಸಿಕೊಟ್ಟಿದ್ದು ಭಾರತೀಯ ವಿಜ್ಞಾನಿ ಜಗದೀಶ್‌ಚಂದ್ರ ಬೋಸ್‌. ಆದರೆ, ಅವರ ಕಾಲಾನಂತರ ಈ ಕ್ಷೇತ್ರದಲ್ಲಿ ಹೆಚ್ಚಿನ ಪ್ರಯತ್ನಗಳಾಗಿಲ್ಲ. ಈಗ ನಮ್ಮ ಬಳಿ ಡಿಜಿಟಲ್‌ ಸಾಧನಗಳಿವೆ. ಸಸ್ಯಗಳ ದೇಹದ ಒಳಗೆ ಆಗುವ ಸೂಕ್ಷ್ಮ ಬದಲಾವಣೆಗಳನ್ನು ಗ್ರಹಿಸಲು ನೆರವಾಗಲಿವೆ’ ಎಂದರು.

‘ಜಗತ್ತಿನ ಬೇರೆಡೆಯೂ ಇಂತಹ ಪ್ರಯೋಗ ನಡೆಯುತ್ತಿವೆ. ಸಸ್ಯಗಳು ಹೇಗೆ ಸ್ಪರ್ಶಕ್ಕೆ, ಸದ್ದಿಗೆ ಸ್ಪಂದಿಸುತ್ತವೆ ಎಂಬುದು ಜನರ ಅನುಭವಕ್ಕೂ ಸಿಗಲಿ ಎಂಬ ಕಾರಣಕ್ಕೆ ಈ ಪ್ರಾತ್ಯಕ್ಷಿಕೆ ಏರ್ಪಡಿಸಿದ್ದೇನೆ. ವಿಶೇಷವಾಗಿ ಚಿಣ್ಣರಲ್ಲಿ ಪರಿಸರ ಕಾಳಜಿ ಮೂಡಿಸಲು ಇವು ನೆರವಾಗಲಿವೆ’ ಎಂದರು.

‘ನಾಡಿ ಮಿಡಿತ ತಿಳಿಯಲು ವೃಕ್ಷ ಧ್ವನಿ’

‘ನಗರದಲ್ಲಿ ನೂರು ಸಸ್ಯಗಳನ್ನು ಆಯ್ದು ಅವುಗಳು ಉಂಟುಮಾಡುವ ಧ್ವನಿಯನ್ನು ದಾಖಲಿಸಿಕೊಂಡು ವಿಶ್ಲೇಷಣೆ ನಡೆಸಲಿದ್ದೇವೆ. ಸಹಜ ವಾತಾವರಣದಲ್ಲಿ ಹಾಗೂ ಸಂಕಷ್ಟದ ಸಮಯದಲ್ಲಿ ಅವು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬ ಗುಟ್ಟು ತಿಳಿದರೆ ಅವುಗಳ ಆರೈಕೆಗೆ ಸೂಕ್ತ ಕ್ರಮ ಕೈಗೊಳ್ಳಬಹುದು. ಬರವಿದ್ದಾಗ, ಮಳೆ ಇದ್ದಾಗ, ಉಷ್ಣಾಂಶ ಜಾಸ್ತಿ ಅಥವಾ ಕಡಿಮೆ ಇದ್ದಾಗ, ಬೆಂಕಿ ಅವಘಡಗಳ ಸಂದರ್ಭದಲ್ಲಿ ಅವುಗಳ ನಿರ್ದಿಷ್ಟ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ತಿಳಿಯುವುದು ಅವುಗಳ ಸಂರಕ್ಷಣೆ ದೃಷ್ಟಿಯಿಂದ ಪ್ರಯೋಜನಕಾರಿ. ಕೆಲವು ಸಂಕಷ್ಟಗಳನ್ನು ಮುಂಗಾಣುವುದಕ್ಕೂ ಇದು ನೆರವಾಗಲಿದೆ’ ಎಂದು ವಿಜಯ್‌ ನಿಶಾಂತ್‌ ವಿವರಿಸಿದರು.

* ಒಳದನಿ ತಿಳಿಸುವ ಪ್ರಯತ್ನ ಅದ್ಭುತ. ಪ್ರಾಣಿಗಳು ವಿಕೋಪದ ಮುನ್ಸೂಚನೆ ನೀಡುವುದನ್ನು ಕೇಳಿದ್ದೇವೆ. ಈ ವಿಧಾನ ಸುಧಾರಿಸಿದರೆ ಸಸ್ಯಗಳು ನೆರವಾಗಬಹುದು

-ಪ್ರಮೋದಾ ದೇವಿ ಒಡೆಯರ್‌,ಮೈಸೂರು ರಾಜವಂಶಸ್ಥೆ

* ಕೊಂಬೆ ಕಡಿದರೆ, ಎಲೆ ಕಿತ್ತರೆ ಮರಕ್ಕೆಷ್ಟು ನೋವಾಗುತ್ತದೆ ಎಂದು ತಿಳಿಯಲು ಇದು ನೆರವಾಗಲಿದೆ. ಸಸ್ಯಗಳ ತಾಯಿ ಹೃದಯವನ್ನೂ ಅರ್ಥೈಸಿಕೊಳ್ಳ‌ಲು ಇದು ಅವಕಾಶ ಕಲ್ಪಿಸಲಿದೆ

-ಕೃಪಾ ಜಿ.ಪಿ., ಚಾಮರಾಜಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.