ADVERTISEMENT

ತಂಗಿ, ತಮ್ಮನಿಗೆ ಹೇಗೆ ಧೈರ್ಯ ಹೇಳಲಿ?

ಹುಮನಾಬಾದ್‌ನ ದುಬಲಗುಂಡಿಯ ಶಿಕ್ಷಕ ದಂಪತಿ ಸಾವು: ಖಾಲಿಯಾಗಿದೆ ಸಂತಸ ತುಂಬಿದ ಮನೆ

ಚಂದ್ರಕಾಂತ ಮಸಾನಿ
Published 17 ಜೂನ್ 2021, 5:30 IST
Last Updated 17 ಜೂನ್ 2021, 5:30 IST
ಸುರೇಶ ನೀಲಂಗಿ ಹಾಗೂ ಮೀನಾಕ್ಷಿ
ಸುರೇಶ ನೀಲಂಗಿ ಹಾಗೂ ಮೀನಾಕ್ಷಿ   

ಬೀದರ್‌: ‘ಶಿಕ್ಷಕರಾಗಿದ್ದ ತಂದೆ–ತಾಯಿ ಇಬ್ಬರೂ ಕೋವಿಡ್‌ನಿಂದ ನಮ್ಮನ್ನು ಅಗಲಿದ್ದಾರೆ. ಸಂತಸ ತುಂಬಿದ ಮನೆ ಖಾಲಿಯಾಗಿದೆ. ತಾಯಿ ನೆನಪಾಗುತ್ತಲೇ ತಮ್ಮ ಕಣ್ಣೀರಿಡುತ್ತಿದ್ದಾನೆ. ತಂಗಿ, ತಮ್ಮ ಇನ್ನೂ ಚಿಕ್ಕವರು. ಅವರಿಗೆ ಹೇಗೆ ಧೈರ್ಯ ಹೇಳಬೇಕು ಎನ್ನುವುದು ಅರ್ಥವಾಗುತ್ತಿಲ್ಲ. ನನಗೂ ದಿಕ್ಕು ತೋಚುತ್ತಿಲ್ಲ...’

‘ತಂದೆ– ತಾಯಿಯ ಮದುವೆಯ ಬೆಳ್ಳಿ ಮಹೋತ್ಸವದಲ್ಲಿ ಪಾಲ್ಗೊಳ್ಳಲು ರಜೆ ಪಡೆದು ಬೆಂಗಳೂರಿನಿಂದ ಮನೆಗೆ ಬಂದಿದ್ದೆ. ತಾಯಿ ಮೀನಾಕ್ಷಿ ಕೋವಿಡ್‌ನಿಂದ ಕೊನೆಯುಸಿರೆಳೆದ ಒಂದು ತಿಂಗಳಲ್ಲಿ ತಂದೆಯೂ ಕೋವಿಡ್‌ನಿಂದಲೇ ಮೃತಪಟ್ಟರು. ಕುಟುಂಬವೇ ಶೋಕ ಸಾಗರದಲ್ಲಿ ಮುಳುಗುವಂತಾಯಿತು’ ಎಂದು ಹುಮನಾಬಾದ್ ತಾಲ್ಲೂಕಿನ ದುಬಲಗುಂಡಿಯ ಶಿಕ್ಷಕ ದಂಪತಿಯ ಹಿರಿಯ ಮಗಳು ಸುಷ್ಮಾ ಕಣ್ಣೀರು ಹಾಕಿದರು.

‘ತಂದೆ–ತಾಯಿ ಇಬ್ಬರೂ ನಮಗೆ ಆಸರೆಯಾಗಿದ್ದರು. ಕೆಲ ತಿಂಗಳ ಹಿಂದೆಯಷ್ಟೇ ನಾನು ಬೆಂಗಳೂರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದೆ. ಒಂದಿಷ್ಟು ಹಣ ಕೂಡಿಟ್ಟು ಮದುವೆಯ ಬೆಳ್ಳಿ ಮಹೋತ್ಸವಕ್ಕೆ ಅಮ್ಮನಿಗೆ ಚಿನ್ನದ ಆಭರಣವನ್ನೇ ಉಡುಗೊರೆ ನೀಡಬೇಕೆಂದಿದ್ದೆ. ಆದರೆ, ನಾನು ಅಂದುಕೊಂಡಂತೆ ಆಗಲಿಲ್ಲ’ ಎಂದು ಮೌನಕ್ಕೆ ಜಾರಿದರು.

ADVERTISEMENT

‘ಮನೆ ಮನೆ ಸಮೀಕ್ಷೆ ಕೆಲಸದಲ್ಲಿ ತೊಡಗಿದ್ದ ತಂದೆಗೆ ಮೊದಲು ಕೋವಿಡ್‌ ತಗುಲಿತು. ಅವರಿಂದ ನನಗೂ ಕೋವಿಡ್‌ ಬಂತು. ನಮ್ಮನ್ನು ಉಪಚರಿಸುತ್ತಿದ್ದ ತಾಯಿಗೆ ಯಾವಾಗ ಸೋಂಕು ತಗುಲಿತು ಗೊತ್ತಾಗಲಿಲ್ಲ. ಒಂದು ದಿನ ಯಾಕೋ ಮೈಕೈ ನೋವು ಆಗುತ್ತಿದೆ ಎಂದು ಹೇಳಿದಳು. ಎರಡು ದಿನಗಳ ನಂತರ ಹಠಾತ್‌ ಉಸಿರಾಟದಲ್ಲಿ ಏರುಪೇರಾಗಿ ಕೊನೆಯುಸಿರೆಳೆದಳು’ ಎಂದು ತಿಳಿಸಿದರು.

‘ತಾಯಿ ಸಾವಿಗೀಡಾದ ಸುದ್ದಿ ಕೇಳಿ ತಂದೆಗೆ ಹೃದಯಾಘಾತವಾದೀತು ಎನ್ನುವ ಭಯದಿಂದ ಮನೆಮಂದಿಯಲ್ಲ ವಿಷಯವನ್ನು ಬಚ್ಚಿಟ್ಟಿದ್ದೆವು. ತಾಯಿಯನ್ನು ಕಳೆದುಕೊಂಡ ದುಃಖದಲ್ಲಿದ್ದ ನಾವು ತಂದೆಯನ್ನಾದರೂ ಉಳಿಸಿಕೊಳ್ಳೋಣ ಎಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೆವು. ಚಿಕಿತ್ಸೆಗಾಗಿ ₹10 ಲಕ್ಷ ಖರ್ಚಾಯಿತು’ ಎಂದು ಹೇಳಿದರು.

‘ತಂದೆ ಆಸ್ಪತ್ರೆಯಲ್ಲಿದ್ದಾಗ ಮೀನಾಕ್ಷಿಯನ್ನು ಫೋನ್‌ನಲ್ಲಿ ಮಾತನಾಡಿಸಿ ಎಂದು ಪದೇ ಪದೇ ಹೇಳುತ್ತಿದ್ದರು. ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಗೆ ಬಂದಿದ್ದರು. ಅಮ್ಮ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅಲ್ಲಿ ಮೊಬೈಲ್‌ನಲ್ಲಿ ಮಾತನಾಡಿಸಲು ಅವಕಾಶ ಇಲ್ಲ ಎಂದು ಸ್ವಲ್ಪ ದಿನ ತಳ್ಳಿದೆವು. ನಂತರ ಅವರು ಮತ್ತೆ ಹಾಸಿಗೆ ಹಿಡಿದವರು ಏಳಲೇ ಇಲ್ಲ’ ಎಂದು ಹೇಳಿದರು.

ಸುರೇಶ ನೀಲಂಗಿ ಅವರು ಭಾಲ್ಕಿ ತಾಲ್ಲೂಕಿನ ನಾವದಗಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಅವರ ಪತ್ನಿ ಮೀನಾಕ್ಷಿ ಅವರು ದುಬಲಗುಂಡಿಯ ಅನುದಾನ ರಹಿತ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಏಪ್ರಿಲ್ 21 ರಂದು ಮೀನಾಕ್ಷಿ ಹಾಗೂ ಮೇ 24 ರಂದು ಸುರೇಶ ಮೃತಪಟ್ಟಿದ್ದಾರೆ.

12 ವರ್ಷದ ಗಗನ್ ದುಬಲಗುಂಡಿಯ ಬಸವತೀರ್ಥ ವಿದ್ಯಾಪೀಠದ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಹಾಗೂ 17 ವರ್ಷದ ಸಹನಾ ಬೀದರ್‌ನ ಶಾಹೀನ್‌ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಪಿಯುಸಿ ದ್ವಿತೀಯ ವರ್ಷದಲ್ಲಿ ಓದುತ್ತಿದ್ದಾರೆ. ಸುರೇಶ ಅವರು ಹಿರಿಯ ಮಗಳಿಗೆ ಭಾಲ್ಕಿಯ ಭೀಮಣ್ಣ ಖಂಡ್ರೆ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಶಿಕ್ಷಣ ಕೊಡಿಸಿ ಎಂಜಿನಿಯರ್‌ ಮಾಡಿದ್ದಾರೆ. ಮಕ್ಕಳು ಈಗ ದುಬಲಗುಂಡಿಯಲ್ಲಿ ಚಿಕ್ಕದಾದ ಕಿರಾಣಿ ಅಂಗಡಿ ಇಟ್ಟುಕೊಂಡಿರುವ ಅಜ್ಜಿ ಜಗದೇವಿ ಅವರ ಸುಪರ್ದಿಯಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.