ADVERTISEMENT

ಬಸವರಾಜ ಬೊಮ್ಮಾಯಿ ಹಠಾವೋ, ಕರ್ನಾಟಕ ಬಚಾವೋ ಆಂದೋಲನ

ಶ್ರೀರಾಮ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಸಿದ್ಧಲಿಂಗ ಸ್ವಾಮಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 4:02 IST
Last Updated 22 ಸೆಪ್ಟೆಂಬರ್ 2021, 4:02 IST
ಸಿದ್ದಲಿಂಗ ಸ್ವಾಮೀಜಿ
ಸಿದ್ದಲಿಂಗ ಸ್ವಾಮೀಜಿ   

ಬೀದರ್‌: ‘ಹಿಂದುತ್ವ ವಿರೋಧಿ ನೀತಿ ಅನುಸರಿಸಿದರೆ ಶ್ರೀರಾಮ ಸೇನೆಯಿಂದ ಬಸವರಾಜ ಬೊಮ್ಮಾಯಿ ಹಠಾವೋ, ಕರ್ನಾಟಕ ಬಚಾವೋ ಆಂದೋಲನ ಹಮ್ಮಿಕೊಳ್ಳಲಾಗುವುದು’ ಎಂದು ಶ್ರೀರಾಮ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಸಿದ್ಧಲಿಂಗ ಸ್ವಾಮಿ ಎಚ್ಚರಿಕೆ ನೀಡಿದರು.

‘ಬಸವರಾಜ ಬೊಮ್ಮಾಯಿ, ರಾಜ್ಯದ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ನಂತರ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿಲ್ಲ. ಬದಲಾಗಿ ದೇಶದ ಜನರ ಧಾರ್ಮಿಕ ಭಾವನೆಗಳನ್ನು ಕೆಣಕುವ ಕೆಲಸಕ್ಕೆ ಕೈ ಹಾಕಿದ್ದಾರೆ’ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದರು.

‘ಸುಪ್ರೀಂ ಕೋರ್ಟ್‌ ಆದೇಶ ಮುಂದಿಟ್ಟುಕೊಂಡು ಮೈಸೂರು ಭಾಗದ ಅನೇಕ ಹಿಂದೂ ದೇವಾಲಯಗಳನ್ನು ಕೆಡವಿರುವುದು ಖಂಡನೀಯ. ಸುಪ್ರೀಂ ಕೋರ್ಟ್‌ ಕೇವಲ ಮಂದಿರಗಳ ನೆಲಸಮಕ್ಕೆ ಆದೇಶ ನೀಡಿಲ್ಲ. ಅನಧಿಕೃತವಾಗಿ ನಿರ್ಮಿಸಿದ ಮಸೀದಿ, ಚರ್ಚ್‌ ಸೇರಿದಂತೆ ಎಲ್ಲ ಬಗೆಯ ಪ್ರಾರ್ಥನಾ ಮಂದಿರಗಳನ್ನು ನೆಲ ಸಮಗೊಳಿಸಲು ಸ್ಪಷ್ಟ ಆದೇಶ ನೀಡಿದೆ. ಆದರೆ, ಬೊಮ್ಮಾಯಿ ಅದನ್ನು ನಿರ್ಲಕ್ಷ್ಯಿಸಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ಕಾಲಾವಧಿಯಲ್ಲಿ ಸಾಕಷ್ಟು ಹಿಂದೂ ದೇಗುಲಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಆದರೆ, ಬಸವರಾಜ ಬೊಮ್ಮಾಯಿ ಮಂದಿರಗಳನ್ನು ಹಾಳು ಮಾಡಿದ್ದಾರೆ. ಬಿಜೆಪಿ ವರಿಷ್ಠರು ತಕ್ಷಣ ಬೊಮ್ಮಾಯಿ ಅವರಿಂದ ರಾಜೀನಾಮೆ ಪಡೆಯಬೇಕು’ ಎಂದು ಒತ್ತಾಯಿಸಿದರು.

‘ಬೊಮ್ಮಾಯಿ ಅವರ ಸ್ವಕ್ಷೇತ್ರದ ಬಂಕಾಪುರ ರಸ್ತೆ ಮೇಲೆ ದರ್ಗಾ ಇದೆ. ದರ್ಗಾ ಇರುವ ಕಾರಣ ರಸ್ತೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಸವಣೂರು ಹಾಗೂ ಬಂಕಾಪುರದಲ್ಲಿ ಅತಿಹೆಚ್ಚು ಮುಸ್ಲಿಂ ಮತಗಳಿರುವ ಕಾರಣ ಮಸೀದಿ ತೆರವುಗೊಳಿಸಿಲ್ಲ. ದ್ವಿಮುಖ ನೀತಿ ನಿಲ್ಲಿಸಿ ದರ್ಗಾ ತೆರವುಗೊಳಿಸಿ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಆಗ್ರಹಿಸಿದರು.

‘ಬಸವರಾಜ ಬೊಮ್ಮಾಯಿ ಜನತಾ ದಳದಿಂದ ಬಂದ ಕಮ್ಯುನಿಷ್ಟ್ ರಾಜಕಾರಣಿಯಾಗಿದ್ದಾರೆ. ಸಂಘ ಪರಿವಾರದಿಂದ ಬಂದ ವ್ಯಕ್ತಿಯಲ್ಲ. ಹಿಂದೂ ದೇವಾಲಯಗಳಿಗೆ ಸುಣ್ಣ, ಬೇರೆ ಶ್ರದ್ಧಾ ಕೇಂದ್ರಗಳಿಗೆ ಬೆಣ್ಣೆ ಹಚ್ಚುತ್ತಿದ್ದಾರೆ. ಬಿಜೆಪಿ ಮುಂದಿನ ಚುನಾವಣೆಯಲ್ಲಿ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ದಾವಣಗೆರೆಯಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಇನ್ನು ಹಿಂದೂ ದೇವಾಲಯಗಳನ್ನು ತೆರವುಗೊಳಿಸುವುದಿಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ. ಎಷ್ಟು ದೇಗುಲಗಳನ್ನು ತೆರವುಗೊಳಿಸಿದ್ದಾರೋ, ಅಷ್ಟೇ ಮಸೀದಿ ಹಾಗೂ ಚರ್ಚ್‌ಗಳನ್ನು ನೆಲಸಮಗೊಳಿಸಿದರೆ ಹಿಂದೂಗಳಿಗೂ ನ್ಯಾಯ ದೊರಕಿಸಿಕೊಟ್ಟಂತಾಗಲಿದೆ’ ಎಂದು ಹೇಳಿದರು.

‘ಲೋಕಸಭೆ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ಗೆಲ್ಲಬಹುದು. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟವಾಗಲಿದೆ ಎಂದು ಬಿಜೆಪಿ ನಾಯಕ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದಾರೆ. ಹಿಂದುತ್ವ ಕಡೆಗಣಿಸಿದರೆ ಬಿಜೆಪಿ ಚುನಾವಣೆಯಲ್ಲಿ ನಷ್ಟ ಅನುಭವಿಸಲಿದೆ’ ಎಂದರು.

‘ಈಗಾಗಲೇ ಮೈಸೂರಿನಲ್ಲಿ ಹಿಂದುತ್ವ ವಾದಿಗಳು ಹಿಂದೂ ದೇವಾಲಯಗಳ ರಕ್ಷಣೆಗೆ ಪಾದಯಾತ್ರೆ ಆರಂಭಿಸಲು ನಿರ್ಧರಿಸಿದ್ದಾರೆ’‌ ಎಂದು ತಿಳಿಸಿದರು.

ಶ್ರೀರಾಮ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ವೀರಶೆಟ್ಟಿ ಖ್ಯಾಮಾ, ಅಮೃತ ಪಾಟೀಲ, ಶಂಕರ ಹಾಗೂ ಕರುಣೇಶ್ವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.