ADVERTISEMENT

ಶಿಕ್ಷಣ ನೀತಿಯಲ್ಲಿ ಮಾತೃಭಾಷೆಗೆ ಪ್ರಾಶಸ್ತ್ಯ ಕೊಡಲಿ: ಎಂ.ಜಿ. ಗಂಗನಪಳ್ಳಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 15:05 IST
Last Updated 22 ಸೆಪ್ಟೆಂಬರ್ 2021, 15:05 IST
ಎಂ.ಜಿ. ಗಂಗನಪಳ್ಳಿ
ಎಂ.ಜಿ. ಗಂಗನಪಳ್ಳಿ   

ಬೀದರ್: ಮಾತೃಭಾಷೆ ಕಲಿಕೆಗೆ ಪ್ರಥಮ ಪ್ರಾಶಸ್ತ್ಯ ಕೊಟ್ಟು ರಾಷ್ಟ್ರೀಯ ಶಿಕ್ಷಣ ರೂಪಿಸಬೇಕು ಎಂದು ಚಿಂತಕ ಎಂ.ಜಿ. ಗಂಗನಪಳ್ಳಿ ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ ಪ್ರಜಾತಂತ್ರದಲ್ಲಿ ನುಂಗಲಾರದ ಬಿಸಿ ತುಪ್ಪ ಆಗಬಾರದು. ನೀರಿಳಿಯದ ಗಂಟಲಲ್ಲಿ ಕಡಬು ತುಂಬಿದಂತೆಯೂ ಆಗಬಾರದು. ತಾಂತ್ರಿಕ ಯುಗದಲ್ಲಿ ಶಿಕ್ಷಣ ವ್ಯವಸ್ಥೆ ಮಾತೃಭಾಷಾ ಕೇಂದ್ರ ಬಿಂದುವಿನಿಂದ ದೂರ ಸರಿಯುತ್ತಿರುವುದು ಶೋಚನೀಯ ಸಂಗತಿ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಮಗುವಿನ ಮೆದುಳಿನ ವಿಕಾಸಕ್ಕೆ, ಕಲ್ಪನೆ ಗರಿಗೆದರಿ ಹಾರಾಡುವುದಕ್ಕೆ ಮಾತೃಭಾಷಾ ಸಂವಹನ ಮೂಲ ತಳಹದಿ. ಮಾತೃ ಭಾಷೆ ಕಲಿಕೆಗೆ ಗಾಂಧೀಜಿ, ಟ್ಯಾಗೋರ್ ತಮ್ಮ ಸಮರ್ಥನೆ ನೀಡಿದ್ದುಂಟು. ಕುವೆಂಪು ಅವರು ಕನ್ನಡ ಬಳಸಿ ಮಹಾಕವಿಯಾದರು. ಬಂಗಾಲದ ಪಬ್ಲಿಕ್ ಸ್ಕೂಲ್‍ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಸರ್ ಜಗದೀಶ್‍ಚಂದ್ರ ಬೋಸ್ ಜಗತ್ ಪ್ರಸಿದ್ಧ ವಿಜ್ಞಾನಿಯಾದರು. ಕರ್ನಾಟಕದ ಯು.ಆರ್.ರಾವ್ ಅವರು ಭಾಷಾ ಶಿಕ್ಷಣದ ಮಹತ್ವವನ್ನು ಎತ್ತಿ ಹಿಡಿದಿದ್ದಾರೆ ಎಂದು ತಿಳಿಸಿದ್ದಾರೆ.

ADVERTISEMENT

ತಾಯಿಯನ್ನು ಗೌರವಿಸದ ಯಾವ ವ್ಯಕ್ತಿಯೂ ಘನತೆಗೆ ಏರುವುದಿಲ್ಲ. ಮಾತೃಭಾಷೆ ಕಡೆಗಣಿಸಿದರೆ ಶಿಕ್ಷಣದ ಸರ್ವಾಂಗೀಣ ವಿಕಾಸ ಸಾಧ್ಯವಿಲ್ಲ. ಶಿಕ್ಷಣ ತಜ್ಞರು ಈ ಕುರಿತು ಯೋಚಿಸಲಿ. ಎಷ್ಟಿದ್ದರೂ ಪರಭಾಷೆ ವಿದ್ಯೆ ಕೇವಲ ಗಿಳಿ ಪಾಠ. ತಾಯ್ನುಡಿಯ ಸತ್ವ ಬೇರೆ ಭಾಷೆ ತುಂಬಲಾರದು. ಒತ್ತಾಯದ ಹೇರಿಕೆ ಸಾಧುವಲ್ಲ. ಪ್ರಜಾತಂತ್ರ ಯಾರದೋ ರಾಜ್ಯ, ಯಾರದೋ ಜಾತ್ರೆಯಂತೆ ಆಗಬಾರದು ಎಂದು ಹೇಳಿದ್ದಾರೆ.

ನಮ್ಮ ರಾಷ್ಟ್ರವನ್ನು ಅನ್ಯ ಸಂಸ್ಕೃತಿ ಆಳುವುದು ಸರಿಯೇ ಎಂದು ಪ್ರಶ್ನಿಸಿರುವ ಅವರು, ತಾಯಿಯ ಮಡಿಲು, ಪರಿಸರದ ಭಾಷೆ ಮಗುವಿನ ಪ್ರಾಥಮಿಕ ಹಂತದ ಬೆಳವಣಿಗೆಗೆ ತುಂಬಾ ಉಪಯುಕ್ತವಾಗುತ್ತದೆ ಎಂದು ತಿಳಿಸಿದ್ದಾರೆ.

ಕನ್ನಡದಲ್ಲಿ ಹರ ತಿರಿಯುವನು, ಕನ್ನಡದಲ್ಲಿ ಹರಿ ಬರೆಯುವನು ಎಂಬ ಕುವೆಂಪು ವಾಣಿಯ ಇಂಗಿತವೇನು? ಮಾತೃಭಾಷೆ ಹೃದಯದ ಭಾಷೆ; ಮನ ಭಾಷೆ, ಪ್ರೀತಿಯ ಭಾಷೆ, ಬಾಳಿನ ಭಾಷೆ. ತಾಯ್ನುಡಿ, ತಾಯಿ ಎಂದೂ ಪರದೇಶಿಯಾಗಬಾರದು. ಪರ ಸಂಸ್ಕೃತಿ ಎಷ್ಟಿದ್ದರೂ ಅದು ಹೊರೆ. ಇಲ್ಲದ ಹೊರೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿ ಹೆಸರಿನಲ್ಲಿ ಮಗುವಿನ ಮೇಲೆ ಹೇರಬಾರದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.