ADVERTISEMENT

ಕಾಲುವೆ ನೀರಿಗಾಗಿ ರೈತರೊಂದಿಗೆ ಬಿಜೆಪಿ ಶಾಸಕ ಪ್ರತಿಭಟನೆ 

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 8:41 IST
Last Updated 4 ಮಾರ್ಚ್ 2023, 8:41 IST
   

ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ(ಟಿಎಲ್‌ಬಿಸಿ) ಕೊನೆ ಭಾಗಕ್ಕೆ ನೀರು ಹರಿಸುವಂತೆ ಒತ್ತಾಯಿಸಿ ಬಿಜೆಪಿ ಶಾಸಕ ಡಾ. ಶಿವರಾಜ ಪಾಟೀಲ್ ಅವರು ರೈತರೊಂದಿಗೆ ಸೇರಿ ಪ್ರತಿಭಟನೆ ಆರಂಭಿಸಿದ್ದಾರೆ.

ನಗರದ ಹೊರವಲಯದ ಸಾತ್ ಮೈಲಿ ಕ್ರಾಸ್ ನಲ್ಲಿ ಹೆದ್ದಾರಿ ಸಂಚಾರ ತಡೆದು ಕರ್ನಾಟಕ ರಾಜ್ಯ ರೈತ ಸಂಘವು ಆರಂಭಿಸಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಶಾಸಕರು ನೀರು ಹರಿಸುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.

ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ, ಕಾಲುವೆ ಕೊನೆ ಭಾಗದಲ್ಲಿರುವ ಮಾನ್ವಿ ಮತ್ತು ಸಿರವಾರ ತಾಲ್ಲೂಕುಗಳಲ್ಲಿ ಬೆಳೆಗಳು ನೀರಿಲ್ಲದೆ ಒಣಗುವ ಹಂತದಲ್ಲಿದ್ದು, ಕೂಡಲೇ ಕಾಲುವೆಗೆ ನೀರು ಹರಿಸಬೇಕು. ಇಲ್ಲದಿದ್ದರೆ ಲಕ್ಷಾಂತರ ಹೆಕ್ಟೇರ್ನಲ್ಲಿರುವ ಮೆಣಸಿನಕಾಯಿ ಮತ್ತು ಭತ್ತದ ಬೆಳೆಗಳು ಹಾಳಾಗಿ ಹೋಗಲಿವೆ ಎಂದು ಹೇಳಿದರು.

ADVERTISEMENT

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಕಾಲುವೆ ಕೊನೆ ಭಾಗಕ್ಕೆ ನೀರು ತಲುಪಿಸದಿದ್ದರೆ ಸರ್ಕಾರ ವಿಫಲವಾದಂತೆ ಆಗುತ್ತದೆ. ರೈತರು ಅನುಭವಿಸುತ್ತಿರುವ ಸಂಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು. ತುಂಗಭದ್ರಾ ಹಾಗೂ ಕೃಷ್ಣಾ‌‌ ನದಿಗಳ ಎರಡೂ ಕಾಲುವೆಗೂ ಸಿರವಾರ,‌ ಮಾನ್ವಿ ಹಾಗೂ ಸಿರವಾರ ತಾಲ್ಲೂಕುಗಳು ಕೊನೆಭಾಗದಲ್ಲಿವೆ. ಕಾಲುವೆ ಮೇಲ್ಭಾಗದಲ್ಲಿ ಅಕ್ರಮಗಳನ್ನು ತಡೆದು ಕೊನೆಭಾಗಕ್ಕೆ ನೀರು ತಲುಪಿಸುವ ಕೆಲಸವನ್ನು ನೀರಾವರಿ ಎಂಜಿನಿಯರುಗಳು ಮಾಡಬೇಕು ಎಂದರು.
ಪ್ರಭಾಕರ ಪಾಟೀಲ, ಬೂದಯ್ಯಸ್ವಾಮಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.