ADVERTISEMENT

ಸಾಧನೆಯ ಮೂಲಕ ಉಳಿದವರು ಸಿಜಿಕೆ, ಸಿದ್ಧಲಿಂಗಯ್ಯ: ಪಂಡಿತಾರಾಧ್ಯ ಶಿವಾಚಾರ್ಯರು

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಮತ *ರಂಗ ಚಂದಿರ, ರಂಗ ಚೇತನದಿಂದ ನುಡಿ ನಮನ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 4:36 IST
Last Updated 28 ಜೂನ್ 2021, 4:36 IST
ರಂಗ ಚಂದಿರ ಮತ್ತು ರಂಗ ವಿಜಯಾ ಸಂಘಟನೆಯ ಸದಸ್ಯರು ಸಿಜಿಕೆ ಹಾಗೂ ಸಿದ್ಧಲಿಂಗಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ರಂಗ ಚಂದಿರ ಮತ್ತು ರಂಗ ವಿಜಯಾ ಸಂಘಟನೆಯ ಸದಸ್ಯರು ಸಿಜಿಕೆ ಹಾಗೂ ಸಿದ್ಧಲಿಂಗಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.   

ಬೆಂಗಳೂರು: ‘ಸಿ.ಜಿ. ಕೃಷ್ಣಸ್ವಾಮಿ (ಸಿಜಿಕೆ) ಹಾಗೂ ಸಿದ್ಧಲಿಂಗಯ್ಯ ಅವರು ದೈಹಿಕವಾಗಿ ದೂರವಾದರೂ ತಮ್ಮ ಸಾಧನೆಗಳ ಮೂಲಕ ನಮ್ಮ ನಡುವೆಯೇ ಉಳಿದಿದ್ದಾರೆ’ ಎಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.

ರಂಗ ಚಂದಿರ ಮತ್ತು ರಂಗ ವಿಜಯಾ ಸಂಘಟನೆಯು ಆನ್‌ಲೈನ್ ವೇದಿಕೆಯಲ್ಲಿ ಭಾನುವಾರ ಆಯೋಜಿಸಿದ ‘ಸಿಜಿಕೆ 70ರ ಸವಿನೆನಪು ಹಾಗೂ ಕವಿ ಸಿದ್ಧಲಿಂಗಯ್ಯ ಅವರಿಗೆ ನುಡಿನಮನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾಟಕಕಾರ ಎಲ್.ಎನ್. ಮುಕುಂದರಾಜ್, ‘ಸಿಜಿಕೆ ಅವರು ಕನ್ನಡ ರಂಗಭೂಮಿಗೆ ದೊಡ್ಡ ಶಕ್ತಿ ನೀಡಿದರು. ಸಿದ್ಧಲಿಂಗಯ್ಯ ಅವರು ಕನ್ನಡಕ್ಕೆ ವಿಶೇಷವಾದ ಶಕ್ತಿಯನ್ನು ಒದಗಿಸಿದರು. ಕನ್ನಡದ ಕಾವ್ಯ ಜಗತ್ತು ಆಗಾಗ ಜಡ್ಡುಗಟ್ಟುತ್ತದೆ. ವಚನಕಾರರ ಮಾದರಿಯಲ್ಲಿ ಕನ್ನಡಕ್ಕೆ ಹೊಸ ದಿಕ್ಕನ್ನು ತೋರಿಸಿದವರು ಸಿದ್ಧಲಿಂಗಯ್ಯ’ ಎಂದರು.

ADVERTISEMENT

ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, ‘ಸಿಜಿಕೆ ಅವರು ತೆರೆಮರೆಯಲ್ಲಿದ್ದವರಿಗೆ ಪ್ರೋತ್ಸಾಹ ನೀಡಿ, ಮುನ್ನೆಲೆಗೆ ತರಲು ಶ್ರಮಿಸಿದರು. ತಾವು ಬೆಳೆಯುವ ಜತೆಗೆ ಬೇರೆಯವರನ್ನೂ ಬೆಳೆಸಿದರು’ ಎಂದರು.

ಚಿಂತಕಿ ಎಂ.ಎಸ್. ಆಶಾದೇವಿ, ‘ಸಿಜಿಕೆ ಅವರು ಸಾಮಾಜಿಕ ಪಲ್ಲಟಕ್ಕೆ ರಂಗಭೂಮಿ ಬಳಸುವ ದಾರಿಯನ್ನು ಹಲವು ಪ್ರಯೋಗಗಳ ಮೂಲಕ ಕಂಡುಕೊಂಡಿದ್ದರು. ಸಿದ್ಧಲಿಂಗಯ್ಯ ಅವರು ಅರಿವಿನ ಕವಿಯಾಗಿದ್ದರಿಂದ ಜನತೆಯ ಕವಿಯಾಗಿದ್ದರು. ಕನ್ನಡ ಕಾವ್ಯ ಪರಂಪರೆಯ ಅಂಗವೈಕಲ್ಯತೆಯನ್ನು ರಿಪೇರಿ ಮಾಡಿದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.