ADVERTISEMENT

ಯುಗಾದಿ ಸಂಭ್ರಮಕ್ಕೆ ಹೂವು ದುಬಾರಿ; ಜೇಬಿಗೆ ಹೊರೆ

ಹಬ್ಬದ ಆಚರಣೆಗೆ ಖರೀದಿ ಭರಾಟೆ; ಜವಳಿ ಅಂಗಡಿಗಳಲ್ಲಿ ಜನಜಂಗುಳಿ: ತರಕಾರಿ ಬೆಲೆಯಲ್ಲಿ ಕೊಂಚ ಇಳಿಕೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2023, 6:27 IST
Last Updated 22 ಮಾರ್ಚ್ 2023, 6:27 IST
ಚಾಮರಾಜನಗರದ ಜವಳಿ ಅಂಗಡಿಯೊಂದರಲ್ಲಿ ಮಂಗಳವಾರ ಸಂಜೆ ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸಿದ ಜನರು
ಚಾಮರಾಜನಗರದ ಜವಳಿ ಅಂಗಡಿಯೊಂದರಲ್ಲಿ ಮಂಗಳವಾರ ಸಂಜೆ ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸಿದ ಜನರು   

ಚಾಮರಾಜನಗರ: ಹೊಸ ಸಂವತ್ಸರವನ್ನು ಸ್ವಾಗತಿಸುವ ಯುಗಾದಿ ಹಬ್ಬವನ್ನು ಬುಧವಾರ (ಮಾರ್ಚ್‌ 22) ಆಚರಿಸಲು ಜಿಲ್ಲೆಯಾದ್ಯಂತ ಹಿಂದೂಗಳು ಸಿದ್ಧತೆ ನಡೆಸಿದ್ದಾರೆ.

ಹಬ್ಬದ ಆಚರಣೆಗಾಗಿ ಮಂಗಳವಾರ ಜನರು ಹೂವು–ಹಣ್ಣು, ಪೂಜಾ ಸಾಮಗ್ರಿಗಳು, ಹೊಸ ಬಟ್ಟೆ ಖರೀದಿಯಲ್ಲಿ ತೊಡಗಿದ್ದರು.

ಮಂಗಳವಾರ ಅಮಾವಾಸ್ಯೆ ದಿನವಾಗಿದ್ದರಿಂದ ಬೆಳಿಗ್ಗೆಯಿಂದ ಸಂಜೆ ವರೆಗೂ ಜನರು ಕಂಡು ಬರಲಿಲ್ಲ. ಹೂವಿನ ಅಂಗಡಿ, ಜವಳಿ ಮಳಿಗೆಗಳಲ್ಲಿ ಗೋಚರಿಸಿದರು.

ADVERTISEMENT

ಹಬ್ಬದ ಕಾರಣಕ್ಕೆ ಹೂವಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಹೂವುಗಳ ಬೆಲೆ ಏರಿಕೆ ಕಂಡಿದೆ. ತರಕಾರಿ, ಹಣ್ಣುಗಳ ಧಾರಣೆ ಮೇಲೆ ಹಬ್ಬದ ಸಂಭ್ರಮ ಪ್ರಭಾವ ಬೀರಿಲ್ಲ.

ನಗರದ ಚೆನ್ನೀಪುರ ಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಹೂವು ಖರೀದಿದಾರರ ಸಂಖ್ಯೆ ಹೆಚ್ಚಿತ್ತು. ಚೆಂಡು ಹೂವು ಬಿಟ್ಟು ಉಳಿದ ಎಲ್ಲ ಹೂವುಗಳ ಬೆಲೆ ಹೆಚ್ಚಾಗಿತ್ತು.

ಕನಕಾಂಬರಕ್ಕೆ ಕೆ.ಜಿ ಗೆ ₹ 800, ಮಲ್ಲಿಗೆಗೆ ₹ 500, ಕಾಕಡಕ್ಕೆ ₹ 600, ಸೇವಂತಿಗೆಗೆ ₹ 240–₹ 280, ಸುಗಂಧರಾಜ ಹೂವಿಗೆ ₹ 160ರಿಂದ ₹ 200, ಬಟನ್‌ ಗುಲಾಬಿ ಕೆ.ಜಿ ಗೆ ₹ 200 ಇತ್ತು. ಚೆಂಡು ಹೂವಿಗೆ ಬೇಡಿಕೆ ಕಡಿಮೆ ಇದ್ದುದರಿಂದ ₹ 20ರಿಂದ ₹ 30ಕ್ಕೆ ಮಾರಾಟವಾಗುತ್ತಿತ್ತು.

‘ಸೋಮವಾರದವರೆಗೆ ಬೆಲೆ ಕಡಿಮೆ ಇತ್ತು. ಮಂಗಳವಾರ ಬೇಡಿಕೆ ಹೆಚ್ಚಾಗಿರುವುದರಿಂದ ಧಾರಣೆಯಲ್ಲೂ ಏರಿಕೆ ಕಂಡಿದೆ. ಬುಧವಾರವೂ ಇದೇ ಬೆಲೆ ಇರಲಿದೆ’ ಎಂದು ಹೂವಿನ ವ್ಯಾಪಾರಿ ರವಿ ಹೇಳಿದರು.

ಇಳಿದ ಬೀನ್ಸ್‌ ಬೆಲೆ: ತರಕಾರಿ ಮಾರುಕಟ್ಟೆಯಲ್ಲಿ ಕಳೆದ ವಾರ ಬೀನ್ಸ್‌ ಬೆಲೆ ಕೆ.ಜಿ ಗೆ ₹ 80 (ಹಾಪ್‌ಕಾಮ್ಸ್‌) ಇತ್ತು. ಈ ವಾರ ಬೆಲೆ ಇಳಿದಿದ್ದು, ₹ 60ಕ್ಕೆ ತಲುಪಿದೆ. ಟೊಮೆಟೊ ಬೆಲೆಯೂ ಇಳಿಕೆ ಕಂಡು ₹ 10 ಆಗಿದೆ. ಕ್ಯಾರೆಟ್‌ ಬೆಲೆ ಕೆ.ಜಿ ಗೆ ₹ 10 ಇಳಿದಿದೆ. ಸದ್ಯ ₹ 20 ಇದೆ.

ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಪೂಜಾ ಕಾರ್ಯಕ್ಕಾಗಿ ಬಾಳೆಹಣ್ಣಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಹೇಳುತ್ತಾರೆ ಹಣ್ಣಿನ ವ್ಯಾಪಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.