ADVERTISEMENT

ಮಹದೇಶ್ವರ ಬೆಟ್ಟ | ಮಾದಪ್ಪನ ಸನ್ನಿಧಿಯಲ್ಲಿ ವೈಭವದ ಯುಗಾದಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2023, 9:07 IST
Last Updated 22 ಮಾರ್ಚ್ 2023, 9:07 IST
   

ಮಹದೇಶ್ವರ ಬೆಟ್ಟ (ಚಾಮರಾಜನಗರ): ಇಲ್ಲಿನ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಯುಗಾದಿ ಜಾತ್ರೆಯ ಅಂಗವಾಗಿ ಮಹದೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಬುಧವಾರ ಬೆಳಿಗ್ಗೆ ವಿಜೃಂಭಣೆಯಿಂದ ನಡೆಯಿತು.

ಜಿಲ್ಲೆ, ಹೊರ‌ಜಿಲ್ಲೆಗಳು, ನೆರೆಯ ತಮಿಳುನಾಡಿನಿಂದ ಬಂದಿದ್ದ ಸಾವಿರಾರು ಭಕ್ತರು ಮಾದಪ್ಪನ ರಥೋತ್ಸವವನ್ನು ಕಣ್ತುಂಬಿಕೊಂಡರು.

ರಥೋತ್ಸವದ ಅಂಗವಾಗಿ ಬುಧವಾರ ಮುಂಜಾನೆಯಿಂದಲೇ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ನಡೆಯಿತು.

ADVERTISEMENT

ಮಹದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಿದ ಬಳಿಕ, ಅಲಂಕೃತ ತೇರಿನಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಬೇಡಗಂಪಣ ಸಮುದಾಯದ 108 ಹೆಣ್ಣುಮಕ್ಕಳು ಸ್ವಾಮಿಗೆ ಬೆಲ್ಲದ ಆರತಿ ಬೆಳಗಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಬೆಳಿಗ್ಗೆ 10.16ಕ್ಕೆ ರಥೋತ್ಸವ ಆರಂಭವಾಯಿತು. ನೂರಾರು ಭಕ್ತರು, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ದೇವಾಲಯದ ಸುತ್ತ ಒಂದು ಬಾರಿ ತೇರನ್ನು ಎಳೆದರು.

ದೇವಾಲಯದ ಆವರಣದಲ್ಲಿ ಕಿಕ್ಕಿರಿದು ಸೇರಿದ್ದ ಭಕ್ತರು ನಾಣ್ಯ, ಹಣ್ಣು ಧವಸವನ್ನು ತೇರಿಗೆ ಎಸೆದು ಹರಕೆ ತೀರಿಸಿದರು. 'ಉಘೇ ಉಘೇ ಮಾದಪ್ಪ' 'ಮಾಯ್ಕಾರ ಮಾದಪ್ಪನಿಗೆ ಉಘೇ' ಎಂಬ ಘೋಷಣೆಗಳು ಬೆಟ್ಟದಾದ್ಯಂತ ಮಾರ್ದನಿಸಿತು.

ಮಹಾರಥೋತ್ಸವ ಜರುಗಿದ ಬಳಿಕ ಪಲ್ಲಕ್ಕಿ ಉತ್ಸವ ನಡೆಯಿತು.

ಭಕ್ತರು ಹುಲಿವಾಹನ, ರುದ್ರಾಕ್ಷಿ ಮಂಟಪ, ಬಸವವಾಹನ ಸೇವೆಗಳನ್ನು ನೆರವೇರಿಸಿ, ಪಂಜಿನ ಸೇವೆ, ಉರುಳುಸೇವೆ, ಆಲಾಂಬಾಡಿ ಬಸವೇಶ್ವರನ ಬೆಣ್ಣೆ ಸೇವೆಯನ್ನು ನೆರವೇರಿಸಿದರು.

ರಥೋತ್ಸವದೊಂದಿಗೆ ಮಹದೇಶ್ಬರ ಸ್ವಾಮಿಯ ಯುಗಾದಿ ಜಾತ್ರೋತ್ಸವಕ್ಕೆ ತೆರೆ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.