ADVERTISEMENT

ವರ್ಗಾವಣೆ ಮಾಡದಿದ್ದರೆ ರಾಜ್ಯವ್ಯಾಪಿ ಹೋರಾಟ: ಎಚ್ಚರಿಕೆ

ಸಕ್ಕರೆ ಕಾರ್ಖಾನೆಯ ಶರಣವನ್‌ ವಿರುದ್ಧ 9ನೇ ದಿನವೂ ಪ್ರತಿಭಟನೆ ನಡೆಸಿದ ರೈತ ಮುಖಂಡರು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 12:38 IST
Last Updated 21 ಸೆಪ್ಟೆಂಬರ್ 2021, 12:38 IST
ಬಣ್ಣಾರಿ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶರವಣನ್‌ ಅವರ ವರ್ಗಾವಣೆಗೆ ಆಗ್ರಹಿಸಿ ರೈತ ಸಂಘಟನೆಗಳ ಮುಖಂಡರು 9ನೇ ದಿನವಾದ ಮಂಗಳವಾರವೂ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು
ಬಣ್ಣಾರಿ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶರವಣನ್‌ ಅವರ ವರ್ಗಾವಣೆಗೆ ಆಗ್ರಹಿಸಿ ರೈತ ಸಂಘಟನೆಗಳ ಮುಖಂಡರು 9ನೇ ದಿನವಾದ ಮಂಗಳವಾರವೂ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ರೈತ ಸಂಘಟನೆಗಳು ಹಾಗೂ ಮುಖಂಡರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶರವಣನ್‌ ಅವರನ್ನು ಹೊರ ರಾಜ್ಯಕ್ಕೆ ವರ್ಗಾವಣೆ ಮಾಡುವವರೆಗೆ ಹೋರಾಟ ಮುಂದುವರೆಯಲಿದ್ದು, ಪ್ರತಿಭಟನೆಯನ್ನು ರಾಜ್ಯ ವ್ಯಾಪಿ ವಿಸ್ತರಿಸಲಾಗುವುದುಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಹಾಗೂ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ಅವರು ಮಂಗಳವಾರ ತಿಳಿಸಿದರು.

ಜಿಲ್ಲಾಡಳಿತ ಭವನದ ದ್ವಾರದ ಎದುರು 9ನೇ ದಿನವೂ ಪ್ರತಿಭಟನೆ ಮುಂದುವರೆಸಿ ಪತ್ರಿಕಾಗೋಷ್ಠಿ ನಡೆಸಿದ ಪ್ರಕಾಶ್‌ ಅವರು ‘ಒಂಬತ್ತು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮ ವಹಿಸಿಲ್ಲ. ಒಂದು ಖಾಸಗಿ ಕಾರ್ಖಾನೆಯನ್ನು ನಿಯಂತ್ರಿಸಲು ಜಿಲ್ಲೆಯ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಅವರ ಎಂಜಲು ಕಾಸನ್ನು ಪಡೆದು ಸುಮ್ಮನಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈ ಹೋರಾಟವನ್ನು ನಾವು ರಾಜ್ಯದಾದ್ಯಂತ ವಿಸ್ತರಿಸುತ್ತೇವೆ. ಈ ಬಗ್ಗೆ ಚರ್ಚಿಸಲು 23ರಂದು (ಗುರುವಾರ) ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಅವರು ಭೇಟಿ ನೀಡಲಿದ್ದಾರೆ. ಅಂದು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು’ ಎಂದರು.

ADVERTISEMENT

ಹೋರಾಟದ ಬಗ್ಗೆ ಇಲ್ಲಿವರೆಗೆ ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿಗಳು ಮೌನ ವಹಿಸಿರುವುದನ್ನು ನೋಡಿದರೆ ಜನಪ್ರತಿನಿಧಿಗಳು ಕೂಡ ಜಿಲ್ಲಾಡಳಿತದ ರೀತಿಯಲ್ಲೇ ಕಾರ್ಖಾನೆಯ ಎಂಜಲು ಕಾಸಿಗೆ ಕೈವೊಡ್ಡಿರುವ ಸಂಶಯ ಬರುತ್ತದೆ. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶರವಣನ್‌ ಅವರು ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸಂಬಂಧ ನಡಾವಳಿ ಆಗಿದ್ದು, ಅವರ ವರ್ಗಾವಣೆಗೆ 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ಇದುವರೆಗೂ ವರ್ಗಾವಣೆ ಆಗಿಲ್ಲ’ ಎಂದರು.

ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ಅವರು ಮಾತನಾಡಿ, ‘ಶರವಣನ್‌ ಅವರು ರೈತ ಸಂಘಟನೆಗಳು ಹಾಗೂ ಮುಖಂಡರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರೇ ಒಪ್ಪಿಕೊಂಡಿದ್ದರು. ವರ್ಗಾವಣೆ ಮಾಡುವ ಲಿಖಿತ ಭರವಸೆಯನ್ನೂ ನೀಡಿದ್ದರು. ಹಾಗಾಗಿ, ಅವರು ತಪ್ಪು ಮಾಡಿರುವುದು ಸಾಬೀತಾಗಿದೆ. ಈಗ ವರ್ಗಾವಣೆ ಮಾಡಲಾಗಿದೆ ಎಂಬ ಪತ್ರವನ್ನೂ ನೀಡಿದ್ದಾರೆ. ಆದರೆ, ಅದರಲ್ಲಿ ದಿನಾಂಕ ನಮೂದಾಗಿಲ್ಲ. ಯಾವಾಗ ವರ್ಗಾವಣೆ ಮಾಡಲಾಗುತ್ತದೆ ಎಂಬುದನ್ನು ಬಹಿರಂಗವಾಗಿ ಹೇಳಿದರೆ ಚಳವಳಿ ಅಂತ್ಯವಾಗುತ್ತದೆ. ಇಲ್ಲದಿದ್ದರೆ ಮುಂದುವರೆಯಲಿದೆ. ರಾಜ್ಯ ವ್ಯಾಪಿ ನಡೆಯಲಿದೆ’ ಎಂದರು.

ರೈತ ಸಂಘದವರಲ್ಲ: ಶರವಣನ್‌ ಅವರನ್ನು ಬೆಂಬಲಿಸಿ ಕಬ್ಬು ಬೆಳೆಗಾರರ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹೊನ್ನೂರು ಪ್ರಕಾಶ್‌ ಹಾಗೂ ಭಾಗ್ಯರಾಜ್‌ ಅವರು, ‘ಅವರೆಲ್ಲ ಯಾರು, ಏನು ಎಂಬುದು ಎಲ್ಲರಿಗೂ ಗೊತ್ತು. 10 ವರ್ಷಗಳ ಹಿಂದೆಯೇ ಅವರನ್ನು ರೈತ ಸಂಘದಿಂದ ಉಚ್ಚಾಟಿಸಲಾಗಿತ್ತು. ವಿವಿಧ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ. ರೈತರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

ರೈತ ಮುಖಂಡರಾದ ಹೊನ್ನೂರು ಬಸವಣ್ಣ, ದಿಲೀಪ್ ಕುಮಾರ್, ಹೆಗ್ಗೋಠಾರ ವಿಜಿ, ಪುಟ್ಟಮಾದಯ್ಯ, ಬಸವಯ್ಯ, ರಾಜು, ಶಿವಸ್ವಾಮಿ, ಹಾಡ್ಯ ರವಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.