ADVERTISEMENT

ಮತ್ತೆ ಯುಗಾದಿ, ಬೇವು–ಬೆಲ್ಲದ ಹಾದಿ!

ಪಲ್ಲವಿಸಿದ ಚಿಗುರು: ಮನೆಗಳಲ್ಲಿ ಹೂರಣದ ಘಮಲು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2023, 6:30 IST
Last Updated 22 ಮಾರ್ಚ್ 2023, 6:30 IST
ಯಳಂದೂರು ತಾಲ್ಲೂಕಿನಲ್ಲಿ ಲೋಲಕದಂತೆ ಇಳಿಬಿದ್ದಿರುವ ಕಕ್ಕೆಯ ದಟ್ಟ ಹಳದಿ ಹೂಗಳು ಯುಗಾದಿಯ ಸ್ವಾಗತಕ್ಕೆ ತೋರಣ ಕಟ್ಟಿದಂತಿದೆ
ಯಳಂದೂರು ತಾಲ್ಲೂಕಿನಲ್ಲಿ ಲೋಲಕದಂತೆ ಇಳಿಬಿದ್ದಿರುವ ಕಕ್ಕೆಯ ದಟ್ಟ ಹಳದಿ ಹೂಗಳು ಯುಗಾದಿಯ ಸ್ವಾಗತಕ್ಕೆ ತೋರಣ ಕಟ್ಟಿದಂತಿದೆ   

ಚಾಮರಾಜನಗರ/ಯಳಂದೂರು: ‘ಎಲ್ಲೋ ಯಾರೋ ಒತ್ತಿದರು ಸ್ವಿಚ್ಚುಇಲ್ಲಿ ಈ ಬೋಳು ಬಯಲಲ್ಲಿ
ಹಠಾತ್ತನೆ ಮರಮರದ ಮೈಯಲ್ಲಿ ಹಳದಿ ಹೂವಿನ ಹುಚ್ಚು...’

-ಕವಿ ಜಿ.ಎಸ್.ಶಿವರುದ್ರಪ್ಪ ಅವರ ಈ ಕವಿತೆಯು ಯುಗಾದಿಗೆ ಪ್ರಕೃತಿ ಮಾತೆ ಸಲ್ಲಾಪ ಹಾಡಿದಂತಿದೆ. ಹಬ್ಬದ ಸಮಯದಲ್ಲಿ ಕವಿತೆ ಹುಟ್ಟಿರುವ ಪರಿ ಮಾನವ ಪರಿಸರದ ಸಾಂಗತ್ಯವನ್ನು ಕಟ್ಟಿಕೊಟ್ಟಂತಿದೆ. ಪರಿಸರದ ಚಿತ್ತಾರ, ಬಯಲ ಚೆಲುವು, ಹೊಸ ಸಂವತ್ಸರದ ಸಡಗರ ಎಲ್ಲವನ್ನೂ ನಿಸರ್ಗ ಇಲ್ಲಿ ಬಿಚ್ಚಿಟ್ಟಿದೆ.

ತಳಿರು ತೋರಣಗಳನ್ನು ಇಳಿಬಿಟ್ಟ ವೃಕ್ಷಗಳು ಧರಣಿಯನ್ನು ಸ್ವಾಗತಿಸುವ ಪರಿ ಅನನ್ಯ. ಯುಗಾದಿ ಸಮಯದಲ್ಲಿ ಅರಳುವ ತರುಲತೆಗಳು ವಸಂತನ ಆಗಮನಕ್ಕೆ ಮೆರವಣಿಗೆ ಹೊರಟಂತೆ ಭಾಸವಾಗುತ್ತದೆ. ಯುಗಾದಿ ಬರೀ ಹಬ್ಬವಲ್ಲ. ಹೊಸ ವರ್ಷದ ಆರಂಭ. ಚೈತ್ರ ಶುದ್ಧ ಪಾಡ್ಯದಲ್ಲಿ ಒಳಿತನ್ನು ಅರಸುವ ಸಂಭ್ರಮವೂ ಸೇರಿದೆ.

ADVERTISEMENT

ಜಿಲ್ಲೆಯಾದ್ಯಂತ ದೇವಾಲಯಗಳಲ್ಲಿ ಮಂಗಳವಾರದಿಂದಲೇ ವಿಶೇಷ ಪೂಜೆ ಪುನಸ್ಕಾರಕ್ಕೆ ಸಿದ್ಧತೆ ನಡೆದಿದೆ. ಕಪ್ಪಡಿ, ತ್ರಿವೇಣಿ ಸಂಗಮ, ಮಹದೇಶ್ವರನ ದರ್ಶನಕ್ಕೆ ಭಕ್ತರು ಈಗಾಗಲೇ ಸಾಲುಗಟ್ಟಿದ್ದಾರೆ. ಮನೆ ಮಂದಿ ಬುಧವಾರ ಮನೆಗಳಲ್ಲಿ ಇಷ್ಟ ದೇವರನ್ನು ಪೂಜಿಸಲು ಸಕಲ ಸಿದ್ಧತೆ ನಡೆಸಿದ್ದಾರೆ.

‘ಹೊನ್ನೇರು ಕಟ್ಟಿ ಹೊಲಕ್ಕೆ ತೆರಳಿ ಭೂಮಿ ಪೂಜೆ ನೆರವೇರಿಸುವ ವಾಡಿಕೆ ಹಳ್ಳಿಗಳಲ್ಲಿ ಇದೆ. ಕೊಂಡೋತ್ಸವದ ಸಿದ್ಧತೆಗೂ ಒತ್ತು ನೀಡುತ್ತಾರೆ. ದೇವಳಗಳಲ್ಲಿ ವಿಶೇಷ ಪೂಜೆ ನಡೆಯಲಿದೆ’ ಎಂದು ಬಿಳಿಗಿರಿಬೆಟ್ಟದ ಅರ್ಚಕ ರವಿಕುಮಾರ್ ಹೇಳಿದರು.

ಬೇವು–ಬೆಲ್ಲ ಸೇವನೆ: ಯುಗಾದಿ ಬೇವು ಬೆಲ್ಲದ ರೂಪಕ. ಮನೆಗೆ ಹಸಿರ ತೋರಣ, ಅಡುಗೆ ಮನೆಯಲ್ಲಿ ಒಬ್ಬಟ್ಟಿನ ಹೂರಣ ಇರಲೇಬೇಕು. ಹೊಸ ಬಟ್ಟೆ ತೊಟ್ಟು, ಮಕ್ಕಳು ಸಿಂಗರಿಸಿಕೊಂಡು ಓಡಾಡಬೇಕು. ಹಿರಿಯರು ಎಣ್ಣೆಸ್ನಾನ ಮಾಡಿ, ಮನೆಮಂದಿ ಒಟ್ಟಾಗಿ ಕುಳಿತು ಹಬ್ಬಕ್ಕೆ ಜೊತೆಯಾಗುತ್ತಾರೆ. ನೆಂಟರು ಮತ್ತು ದೂರದ ಸಂಬಂಧಿಗಳು ಪರಸ್ಪರ ಶುಭ ಹಾರೈಸುವ ಮೂಲಕ ಯುಗಾದಿ ಸಡಗರ ಹೆಚ್ಚಿಸುತ್ತಾರೆ. ನಸುಕಿನಲ್ಲಿ ಎದ್ದು ಆಹ್ನಿಕ ಪೂರೈಸಿ, ಬೇವು–ಬೆಲ್ಲದ ಮಿಶ್ರಣ ಮೆದ್ದು ಮನಸ್ಸಿನ ಜಾಡ್ಯ ನೀಗಬೇಕು. ಮೈಮನದ ಜಿಡ್ಡು ತೆಗೆದು ಹೊಸತನ ಪಡೆಯಬೇಕು. ಯುಗಾದಿಯ ಹಾದಿಯಲ್ಲಿ ಹೊಸ ವರ್ಷ ಉಲ್ಲಾಸದಿಂದ ಆರಂಭಿಸಬೇಕು ಎಂಬುದು ಅನುಭವಿಗಳ ಮಾತು.

ಪರಿಸರದಲ್ಲೂ ಹೊಸತನ: ಜಿಲ್ಲೆಯಲ್ಲಿ ಪ್ರಖರ ಧಗೆ ಹೊಮ್ಮುತ್ತಿದೆ. ಹೊರಗೆ ಹೂ ಪಕಳೆಗಳು ತಾಪವನ್ನು ಮರೆಸಿ ರಂಗು ಸೂಸಿವೆ. ಬಿಸಿಲಿನಲ್ಲೂ ಬೆಳದಿಂಗಳ ಚೆಲ್ಲಿದಂತೆ ಅರಳಿದ ಲತೆಗಳಲ್ಲಿ ಜೇನಿನ ಸ್ಪರ್ಶ, ಚಿಟ್ಟೆಯ ಸಾಂಗತ್ಯ ಯುಗಾದಿಯಿಂದ ಆರಂಭವಾಗುತ್ತದೆ. ಕಿಂಚಗ, ಕಕ್ಕೆ, ಇಚ್ಚಿ, ಕಾಡುಗೇರು, ಮುತ್ತುಗ, ಕಂಚುವಾಳ, ಜಾಲ, ಕೆಂಡೆ, ಕಾಂದೂಪ ಯುಗಾದಿಗೆ ಹೂ ಬಿಟ್ಟು, ಪ್ರಕೃತಿಯನ್ನು ಸ್ವಾಗತಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.