ADVERTISEMENT

ಚಾಮರಾಜನಗರ: ಅನ್‌ಲಾಕ್‌ ಆದರೂ ರಸ್ತೆಗಿಳಿಯದ ಖಾಸಗಿ ಬಸ್‌

ಆಷಾಢ ಮಾಸ, ಡೀಸೆಲ್‌ ಬೆಲೆ ಹೆಚ್ಚಳ ಪರಿಣಾಮ: ಶ್ರಾವಣದಲ್ಲಿ ಸಂಚಾರ ಆರಂಭವಾಗುವ ನಿರೀಕ್ಷೆ

ಸೂರ್ಯನಾರಾಯಣ ವಿ
Published 10 ಜುಲೈ 2021, 19:30 IST
Last Updated 10 ಜುಲೈ 2021, 19:30 IST
ನಂಜನಗೂಡು ರಸ್ತೆಯ ಪೆಟ್ರೋಲ್‌ ಬಂಕ್‌ ಒಂದರಲ್ಲಿ ನಿಂತಿರುವ ಖಾಸಗಿ ಬಸ್‌ಗಳು
ನಂಜನಗೂಡು ರಸ್ತೆಯ ಪೆಟ್ರೋಲ್‌ ಬಂಕ್‌ ಒಂದರಲ್ಲಿ ನಿಂತಿರುವ ಖಾಸಗಿ ಬಸ್‌ಗಳು   

ಚಾಮರಾಜನಗರ: ಕೋವಿಡ್‌ 2ನೇ ಅಲೆ ತಡೆಗೆ ಹೇರಲಾಗಿದ್ದ ಲಾಕ್‌ಡೌನ್‌ ನಿರ್ಬಂಧಗಳು ಬಹುತೇಕ ತೆರವುಗೊಂಡು ವಾರ ಕಳೆದರೂ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳು ಪೂರ್ಣಪ್ರಮಾಣದಲ್ಲಿ ಇನ್ನೂ ರಸ್ತೆಗೆ ಇಳಿದಿಲ್ಲ.

ಜಿಲ್ಲೆಯಲ್ಲಿ 140 ಪರ್ಮಿಟ್‌ ಹಾಗೂ 40 ಕಾಂಟ್ರಾಕ್ಟ್‌ ಕಾರಿಯೇಜ್‌ ಬಸ್‌ಗಳಿವೆ. ಪಟ್ಟಣ ಹಾಗೂ ನಗರ ಪ್ರದೇಶಗಳ ನಡುವೆ ಸಂಚರಿಸಿರುವ ಐದಾರು ಬಸ್‌ಗಳನ್ನು ಬಿಟ್ಟರೆ ಉಳಿದ ಬಸ್‌ಗಳು ಇನ್ನೂ ಸಂಚಾರ ಆರಂಭಿಸಿಲ್ಲ. ಸದ್ಯದ ಮಟ್ಟಿಗೆ ಖಾಸಗಿ ಬಸ್‌ ಸೇವೆ ಆರಂಭವಾಗುವ ಲಕ್ಷಣವೂ ಇಲ್ಲ.

ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿದ್ದರೂ, ಗ್ರಾಮೀಣ ಭಾಗದ ಜನರು ಸಂಚಾರಕ್ಕಾಗಿ ಖಾಸಗಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಸಾರಿಗೆ ಬಸ್‌ಗಳು ಹೋಗದ ಊರುಗಳಿಗೆಲ್ಲ ಖಾಸಗಿ ಬಸ್‌ಗಳು ಓಡಾಡುತ್ತವೆ. ಅದರಲ್ಲೂ ಹನೂರು, ಚಾಮರಾಜನಗರದಲ್ಲಿ ಕಾಡಂಚಿನ ಪ‍್ರದೇಶಗಳಲ್ಲಿ ಖಾಸಗಿ ಬಸ್‌ಗಳ ಸೇವೆಯಷ್ಟೇ ಲಭ್ಯವಿದೆ.

ADVERTISEMENT

ಲಾಕ್‌ಡೌನ್‌ ತೆರವುಗೊಂಡ ನಂತರ ಆರಂಭದಲ್ಲಿ ಶೇ 50ರಷ್ಟು ಆಸನ ಸಾಮರ್ಥ್ಯದ ಮಿತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸರ್ಕಾರ ಸೂಚನೆ ನೀಡಿತ್ತು. ಇದರಿಂದ ಲಾಭ ಬರುವುದು ಸಾಧ್ಯವಿಲ್ಲ ಎಂದುಕೊಂಡು ಬಸ್‌ ಮಾಲೀಕರು ಬಸ್‌ಗಳನ್ನು ಓಡಿಸಿರಲಿಲ್ಲ. ಈಗ ಅನ್‌ಲಾಕ್‌ ಪೂರ್ಣ ಪ್ರಮಾಣದಲ್ಲಿ ಜಾರಿಯಾದ ನಂತರವೂ ಬಸ್‌ಗಳು ಇನ್ನೂ ಸಂಚಾರ ಆರಂಭಿಸಿಲ್ಲ.

ಆಷಾಢ, ಡೀಸೆಲ್‌ ಬೆಲೆ ಏರಿಕೆ:ಆಷಾಢ ಮಾಸ ಆರಂಭವಾಗಿದೆ. ಈಗ ಶುಭ ಸಮಾರಂಭಗಳು ನಡೆಯುವುದಿಲ್ಲ. ಹಾಗಾಗಿ, ಬಾಡಿಗೆಗಳು ಇಲ್ಲ. ಡೀಸೆಲ್‌ ಬೆಲೆಯೂ ಗಣನೀಯವಾಗಿ ಹೆಚ್ಚಾಗಿದೆ. ಶಾಲಾ ಕಾಲೇಜುಗಳು ಇನ್ನೂ ಆರಂಭವಾಗಿಲ್ಲ. ಜನರ ಓಡಾಟವೂ ಮೊದಲಿನಂತಿಲ್ಲ. ಹೀಗಾಗಿ ಬಸ್‌ ಮಾಲೀಕರು ಸೇವೆ ಪುನರಾರಂಭಿಸಲು ಹಿಂದೇಟು ಹಾಕುತ್ತಿದ್ದಾರೆ.

‘ಕೊಳ್ಳೇಗಾಲ, ಮೈಸೂರು ಹೀಗೆ... ಪ್ರಮುಖ ಪಟ್ಟಣ ‌ನಗರಗಳ ನಡುವೆ ಮಾತ್ರ ಬೆರಳೆಣಿಕೆಯಷ್ಟು ಬಸ್‌ಗಳು ಸಂಚರಿಸುತ್ತಿವೆ. ಆ ಬಸ್‌ಗಳಿಗೂ ಹೇಳಿಕೊಳ್ಳುವಷ್ಟು ಜನರಿಲ್ಲ. ಲೀಟರ್‌ ಡೀಸೆಲ್‌ ಈಗ ₹95–₹96 ಇದೆ. ಎರಡೂವರೆ ತಿಂಗಳ ಅವಧಿಯಲ್ಲಿ ಲೀಟರ್‌ ಡೀಸೆಲ್‌ ₹22ನಷ್ಟು ಜಾಸ್ತಿಯಾಗಿದೆ. ಶಾಲಾ ಕಾಲೇಜುಗಳು ಆರಂಭವಾಗಿಲ್ಲ. ಕೋವಿಡ್ ಭಯದಿಂದ ಜನರು ಇನ್ನೂ ಪ್ರಯಾಣ ಮಾಡುತ್ತಿಲ್ಲ. ಈಗ ಆಷಾಢ ಮಾಸವೂ ಆಗಿರುವುದರಿಂದ ಸದ್ಯಕ್ಕೆ ಬಸ್‌ ಮಾಲೀಕರು ಸೇವೆ ಒದಗಿಸಲು ಉತ್ಸಾಹ ಹೊಂದಿಲ್ಲ’ ಎಂದು ಜಿಲ್ಲಾ ಖಾಸಗಿ ಬಸ್‌ ಮಾಲೀಕರ ಸಂಘದ ಕಾರ್ಯದರ್ಶಿ ತ್ಯಾಗರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎರಡೂವರೆ ತಿಂಗಳುಗಳಿಂದ ಬಸ್‌ ನಿಂತಲ್ಲೆ ಇದೆ. ಈಗ ಅದನ್ನು ಓಡಿಸಬೇಕಾದರೆ ಬ್ಯಾಟರಿ ಬದಲಾವಣೆ, ಇತರೆ ಸಣ್ಣಪುಟ್ಟ ಕೆಲಸ ಸೇರಿದಂತೆ ಕನಿಷ್ಠ ₹1 ಲಕ್ಷ ಬೇಕು. ಡೀಸೆಲ್‌ ಬೆಲೆ ಏರಿಕೆಯಿಂದ ನಮಗೆ ಜಾಸ್ತಿ ಹೊರೆಯಾಗುತ್ತದೆ. ಈಗಿನ ಟಿಕೆಟ್ ದರದಲ್ಲಿ ಸೇವೆ ಒದಗಿಸಲೂ ಸಾಧ್ಯವಿಲ್ಲ. ಬಹುಶಃ ಶ್ರಾವಣ ಮಾಸದ ಆರಂಭದಲ್ಲಿ ಹೆಚ್ಚಿನ ಬಸ್‌ಗಳು ಸಂಚರಿಸಬಹುದು’ ಎಂದು ಅವರು ಮಾಹಿತಿ ನೀಡಿದರು.

ಕೆಎಸ್‌ಆರ್‌ಟಿಸಿ ಗಳಿಕೆ ಚೇತರಿಕೆ
ಈ ಮಧ್ಯೆ, ಲಾಕ್‌ಡೌನ್‌ ನಿರ್ಬಂಧಗಳು ಸಡಿಲಗೊಂಡ ನಂತರ ಕೆಎಸ್‌ಆರ್‌ಟಿಸಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಆದಾಯದಲ್ಲಿ ಚೇತರಿಕೆ ಕಂಡು ಬರುತ್ತಿದೆ.

ಚಾಮರಾಜನಗರ ವಿಭಾಗದಲ್ಲಿ ಈಗ ಪ್ರತಿ ದಿನ 250 ಬಸ್‌ಗಳು ಸಂಚಾರ ನಡೆಸುತ್ತಿವೆ. ಪ್ರತಿ ದಿನ ₹25 ಲಕ್ಷದಿಂದ ₹30 ಲಕ್ಷದವರೆಗೆ ಸಂಗ್ರಹವಾಗುತ್ತಿದೆ. ಕೋವಿಡ್‌ ಹಾವಳಿಗೂ ಮುನ್ನ ವಿಭಾಗದ ದಿನದ ಗಳಿಕೆ ₹55 ಲಕ್ಷದಿಂದ ₹60 ಲಕ್ಷದವರೆಗೆ ಇರುತ್ತಿತ್ತು.

‘ಪರಿಸ್ಥಿತಿ ಈಗ ಸ್ವಲ್ಪ ಸುಧಾರಿಸಿದೆ. ಮೊದಲಿನ ಸ್ಥಿತಿಗೆ ಬರಲು ಇನ್ನೂ ಸ್ವಲ್ಪ ದಿನಗಳ ಬೇಕು. ಗ್ರಾಮೀಣ ಭಾಗಗಳಿಗೂ ಬಸ್‌ಗಳನ್ನು ಹಾಕಲಾಗುತ್ತಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಬಸ್‌ಗಳನ್ನು ಓಡಿಸುತ್ತಿದ್ದೇವೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.