ADVERTISEMENT

ಚಂಗಡಿ ಗ್ರಾಮ ಸ್ಥಳಾಂತರ: 4 ವರ್ಷಗಳ ಹೋರಾಟ

ವನ್ಯಜೀವಿಗಳ ಹಾವಳಿ; ಮೂಲಸೌಕರ್ಯ ಕೊರತೆ

ಸೂರ್ಯನಾರಾಯಣ ವಿ
Published 14 ನವೆಂಬರ್ 2020, 20:31 IST
Last Updated 14 ನವೆಂಬರ್ 2020, 20:31 IST
ಚಂಗಡಿ ಗ್ರಾಮದ ಉಪಗ್ರಹ ಆಧರಿತ ನಕ್ಷೆ
ಚಂಗಡಿ ಗ್ರಾಮದ ಉಪಗ್ರಹ ಆಧರಿತ ನಕ್ಷೆ   

ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿರುವ ಕುಗ್ರಾಮ ಚಂಗಡಿ ಗ್ರಾಮವನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಗ್ರಾಮಸ್ಥರೇ ಸ್ವಯಂ ಪ್ರೇರಿತರಾಗಿ ಮನವಿ ಸಲ್ಲಿಸಿದ್ದರೂ ಅದಕ್ಕೆ ಸಮ್ಮತಿ ನೀಡಲು, ಸರ್ಕಾರ ನಾಲ್ಕು ವರ್ಷಗಳ ಸಮಯ ತೆಗೆದುಕೊಂಡಿತ್ತು.

ಸದ್ಯ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಪುನರ್ವಸತಿಗಾಗಿ ಗುರುತಿಸಲಾಗಿದ್ದ ಜಾಗಕ್ಕೆ ಸಂಬಂಧಿಸಿದಂತೆ ಸಮಸ್ಯೆ ಆಗಿರುವುದರಿಂದ ಬೇರೆ ಜಾಗ ಹುಡುಕುವ ಅನಿವಾರ್ಯತೆ ಉಂಟಾಗಿದೆ. 2021ರ ಒಳಗಾಗಿ ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಳಿಸುವ ಆಶಯವನ್ನು ಈ ಹಿಂದೆ ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ವ್ಯಕ್ತಪಡಿಸಿತ್ತು. ಆದರೆ, ಈಗ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಮೂಲ ಸೌಕರ್ಯಗಳ ಕೊರತೆ ಹಾಗೂ ವನ್ಯಜೀವಿಗಳ ಹಾವಳಿಯಿಂದ ಬೇಸತ್ತ ಗ್ರಾಮಸ್ಥರು, ಗ್ರಾಮವನ್ನು ಬೇರೆ ಕಡೆಗೆ ಸ್ಥಳಾಂತರಿಸುವಂತೆ 2015ರಿಂದ ಮನವಿ ಮಾಡುತ್ತಲೇ ಬಂದಿದ್ದರು. ಈ ವರ್ಷದ ಮೇ ತಿಂಗಳಲ್ಲಿ ರಾಜ್ಯ ಸರ್ಕಾರ ಇಡೀ ಗ್ರಾಮದ ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸಿತ್ತು. ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸುವುದಕ್ಕಾಗಿಜಿಲ್ಲಾಧಿಕಾರಿ ನೇತೃತ್ವದಲ್ಲಿ 13 ಸದಸ್ಯರನ್ನು ಒಳಗೊಂಡ ಜಿಲ್ಲಾ ಮಟ್ಟದ ಪುನರ್ವಸತಿ ಸಮಿತಿ ರಚಿಸಿತ್ತು.

ADVERTISEMENT

ಆ ನಂತರ, ಇದುವರೆಗೆ ಸಮಿತಿಯು ಎರಡು ಬಾರಿ ಸಭೆ ಸೇರಿದೆ. 906.187 ಚದರ ಕಿ.ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಮಲೆ ಮಹದೇಶ್ವರ ವನ್ಯಧಾಮದ ಕೋರ್‌ ವಲಯ ಹಾಗೂ ನಿರ್ಣಾಯಕ ವನ್ಯಜೀವಿ ಆವಾಸದ ವ್ಯಾಪ್ತಿಯಲ್ಲಿ ಈ ಗ್ರಾಮವಿದೆ. 226 ಕುಟುಂಬಗಳು ಇಲ್ಲಿದ್ದು, ಈ ಪೈಕಿ 65 ಕುಟುಂಬಗಳು ವಲಸೆ ಹೋಗಿವೆ. 195 ಕುಟುಂಬಗಳು ಸ್ಥಳಾಂತರಕ್ಕೆ ಈಗಾಗಲೇ ಒಪ್ಪಿಗೆ ಸೂಚಿಸಿವೆ.

₹29.25 ಕೋಟಿ ವೆಚ್ಚದಲ್ಲಿ ಗ್ರಾಮಸ್ಥರ ಸ್ಥಳಾಂತರಕ್ಕೆ ಅರಣ್ಯ ಇಲಾಖೆ ಯೋಜನೆ ರೂಪಿಸಿದ್ದು, ಪುನರ್ವಸತಿಗಾಗಿ ಎರಡು ಪರಿಹಾರ ಪ್ಯಾಕೇಜ್‌ಗಳನ್ನು ಮುಂದಿಟ್ಟಿದೆ.ಕುಟುಂಬವೊಂದಕ್ಕೆ ₹15 ಲಕ್ಷ ನಗದು ಕೊಡುವುದು ಮತ್ತು ಇನ್ನೊಂದು, ನಿಗದಿತ ಸ್ಥಳದಲ್ಲಿ ಮೂರು ಎಕರೆ ಜಮೀನು, ನಿವೇಶನ ಹಾಗೂ ಮನೆ ನಿರ್ಮಿಸಿಕೊಡುವುದು.

‘ನಾಲ್ಕು ವರ್ಷಗಳಿಂದ ಮನವಿ ಮಾಡುತ್ತ ಬಂದಿದ್ದೆವು. ಕುಟುಂಬಗಳ ಪುನರ್ವಸತಿಗಾಗಿ ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಬಳಿಯ ಸರ್ವೆ ನಂಬರ್‌ 326ರಲ್ಲಿ ಸರ್ಕಾರಿ ಜಾಗ ಗುರುತಿಸಲಾಗಿತ್ತು. ಎಲ್ಲರಿಗೂ ಪುನರ್ವಸತಿ ಕಲ್ಪಿಸುವಷ್ಟು ಜಮೀನು ಅಲ್ಲಿ ಲಭ್ಯವಿಲ್ಲ ಎಂಬ ಮಾಹಿತಿ ಇದೆ.ಹೊಸ ಸ್ಥಳವನ್ನು ಹುಡುಕಬೇಕಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದಷ್ಟು ಬೇಗ ಸ್ಥಳಾಂತರ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು’ ಎಂದು ಚಂಗಡಿ ಗ್ರಾಮದ ರೈತ ಮುಖಂಡ ಕರಿಯಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪುನರ್ವಸತಿ ಪ್ರಕ್ರಿಯೆ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್‌. ರವಿ, ‘ಎರಡು ಸಭೆಗಳನ್ನು ನಡೆಸಿದ್ದೇವೆ. ಉಸ್ತುವಾರಿ ಸಚಿವರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತನಾಡಿದ್ದಾರೆ. ಗ್ರಾಮದ ಸರ್ವೆ ಕಾರ್ಯಕ್ಕೆ ಸೂಚನೆ ನೀಡಲಾಗಿದೆ. ಇನ್ನೊಂದು ಸಭೆ ಶೀಘ್ರದಲ್ಲಿ ನಡೆಯಲಿದೆ’ ಎಂದು ಹೇಳಿದರು.

ಮಲೆ ಮಹದೇಶ್ವರ ವನ್ಯಧಾಮದಲ್ಲಿ ಸೌಲಭ್ಯ ವಂಚಿತ ಹಲವು ಗ್ರಾಮಗಳಿವೆ. ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆದಗನಾಣೆ, ಪಡಸಲನತ್ತ ಗ್ರಾಮದ ಜನರು ಕೂಡ ಸ್ವಯಂ ಪ್ರೇರಿತರಾಗಿ ಸ್ಥಳಾಂತರಕ್ಕೆ ಮುಂದೆ ಬಂದಿದ್ದು, ಚಂಗಡಿ ಗ್ರಾಮದ ಸ್ಥಳಾಂತರಕ್ಕಾಗಿ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.