ADVERTISEMENT

ಚನ್ನಗಿರಿಯ ಜಲಪಾತಗಳು ನೋಡಲು ಬಲು ಚೆನ್ನ

ಡಿ.ಜಿ.ಮಲ್ಲಿಕಾರ್ಜುನ
Published 27 ಸೆಪ್ಟೆಂಬರ್ 2019, 17:16 IST
Last Updated 27 ಸೆಪ್ಟೆಂಬರ್ 2019, 17:16 IST
ಚನ್ನರಾಯನಬೆಟ್ಟದ ಮೇಲಿಂದ ಹರಿದ ನೀರಿನ ಗುರುತುಗಳು ಹಾಗೂ ಸುತ್ತಲಿನ ಕಾಡು
ಚನ್ನರಾಯನಬೆಟ್ಟದ ಮೇಲಿಂದ ಹರಿದ ನೀರಿನ ಗುರುತುಗಳು ಹಾಗೂ ಸುತ್ತಲಿನ ಕಾಡು   

ಶಿಡ್ಲಘಟ್ಟ: ಕಳೆದ ವಾರ ಜಿಲ್ಲೆಯಾದ್ಯಂತ ಬಿದ್ದ ಮಳೆಯ ಪ್ರತಿಫಲವನ್ನು ವಿವಿಧ ರೀತಿಯಲ್ಲಿ ನಾವು ಕಾಣಬಹುದಾಗಿದೆ. ಚನ್ನರಾಯನಬೆಟ್ಟದ ನಾನಾ ಕಡೆ ಜಲಪಾತಗಳ ಸೃಷ್ಟಿಯಾಗಿದೆ. ವಿಶೇಷವೆಂದರೆ ಇಡೀ ಬೆಟ್ಟವೇ ಲಾವಾರಸ ಕಕ್ಕುವ ಅಗ್ನಿಪರ್ವತದಂತೆ, ತನ್ನೊಡಲಿನಲ್ಲಿ ಹುಗಿದಿರಿಸಿಕೊಂಡ ನೀರನ್ನು ಹೊರಕ್ಕೆ ಚೆಲ್ಲಿದೆ. ದೂರದಿಂದ ನೋಡಿದರೆ ಬೆಟ್ಟದಿಂದ ಹರಿದ ಬಂದ ಜಲಧಾರೆಗಳ ಹೆಜ್ಜೆಗುರುತು ಸ್ಪಷ್ಟವಾಗಿ ಕಾಣಿಸುತ್ತದೆ.

ಚನ್ನರಾಯನಬೆಟ್ಟವನ್ನು ಚನ್ನಗಿರಿ ಅಥವಾ ಚನ್ನಕೇಶವಬೆಟ್ಟ ಎಂದು ಕರೆಯುವರು. 4,762 ಅಡಿ ಎತ್ತರವಿರುವ ಈ ಬೆಟ್ಟ ಉತ್ತರ ಮತ್ತು ದಕ್ಷಿಣ ಪಿನಾಕಿನಿ ನದಿಗಳ ಉಗಮಸ್ಥಾನ. ಚಿಕ್ಕಬಳ್ಳಾಪುರದಿಂದ ನೈಋತ್ಯ ದಿಕ್ಕಿನಲ್ಲಿ ಐದು ಮೈಲು ದೂರದಲ್ಲಿದೆ. ಈ ಬೆಟ್ಟ ಹಾಗೂ ಸುತ್ತಲಿನ ಕಾಡು ರಾಜ್ಯ ಸರ್ಕಾರದಿಂದ ಕಾಯ್ದಿರಿಸಲಾಗಿದೆ. ಚಿರತೆ, ಕರಡಿ, ಜಿಂಕೆ, ಕಾಡು ಹಂದಿ ಈಗಲೂ ಇಲ್ಲಿನ ನಿವಾಸಿಗಳು. ಬೆಟ್ಟದ ಮೇಲೆ ದೊಡ್ಡ ಬಂಡೆ ಗವಿಯನ್ನು ಹೊಂದಿಕೊಂಡ ಚನ್ನಕೇಶವಸ್ವಾಮಿಯ ಪುಟ್ಟ ಗುಡಿ ಹಾಗೂ ಬಂಡೆಗಲ್ಲುಗಳನ್ನು ಬಳಸಿ ಮಾಡಿರುವ ಪುರಾತನ ಪುಷ್ಕರಣಿಯಿದೆ. ಇದರಲ್ಲಿ ಸದಾ ಕಾಲ ನೀರಿರುತ್ತದೆ.

ಬೆಟ್ಟದ ಮೇಲೆ ಒಂದಕ್ಕೊಂದು ಹೊಂದಿಕೊಂಡಂತಿರುವ ಎರಡು ದೊಡ್ಡ ಬಂಡೆಗಳ ನಡುವಿನಿಂದ ಧುಮ್ಮಿಕ್ಕುವ ಜಲಧಾರೆಯನ್ನು ‘ದೊಡ್ಡ ಜರ್ತಿ’ ಎಂದು ಕರೆಯುತ್ತಾರೆ. ಅದರ ಒಂದು ಪಾರ್ಶ್ವದಲ್ಲಿ ನೂರಾರು ಜಾಲಾರಿ ಮರಗಳಿವೆ. ಬೇಸಿಗೆಯಲ್ಲಿ ಅವು ಹೂಬಿಟ್ಟಾಗ ಅದರ ಸುಗಂಧ ಬಹುದೂರದವರೆಗೆ ಸಾಗುತ್ತದೆ. ಇನ್ನೊಂದು ಪಾರ್ಶ್ವದಲ್ಲಿನ ಗುಂಡುಗಳನ್ನು ಸ್ಥಳೀಯರು ಬುರುಗ್ಗುಂಡುಗಳು ಎನ್ನುತ್ತಾರೆ. ಅವುಗಳ ಮೇಲಿಂದ ಹರಿದುಬರುವ ನೀರನ್ನು ‘ಶೀಮನಳ್ಳಿ ಜರ್ತಿ’ ಎಂದು ಕರೆಯುವರು.

ADVERTISEMENT
ಎರಡು ದೊಡ್ಡ ಬಂಡೆಗಳ ನಡುವೆ ಧುಮ್ಮಿಕ್ಕುವ ಜಲಧಾರೆ

‘ದೊಡ್ಡ ಜರ್ತಿ ಮತ್ತು ಶೀಮನಳ್ಳಿ ಜರ್ತಿಯ ನೀರು ಒಗ್ಗೂಡಿ ಸೇರುವುದು ‘ಕರ್ನಳ್ಳೋನ್ ಬಾಯಿ’ಗೆ. ಯಾರೋ ಕರ್ನಳ್ಳಿಯವನು, ಪುಣ್ಯಾತ್ಮ, ನಿರ್ಮಿಸಿರುವ ಕಲ್ಯಾಣಿಯಿದು. ಇಲ್ಲಿ ಬೇಸಿಗೆಯಲ್ಲೂ ಸಹ ನೀರು ಇದ್ದೇ ಇರುತ್ತದೆ. ಜೀವ ಜಂತುಗಳಿಗೆ ಉಪಯೋಗವಾಗುತ್ತದೆ. ಕರ್ನಳ್ಳೋನ್ ಬಾಯಿ ತುಂಬಿ ಹರಿದು ‘ಕೃಷ್ಣನ್ ಪೊದೆ ಪೇಟು’ಗೆ ಹರಿಯುತ್ತದೆ. ಅದು ತುಂಬಿದ ಮೇಲೆ ಮಾವಿನಮರದಹಳ್ಳಕ್ಕೆ ಹರಿಯುತ್ತದೆ. ಅಲ್ಲಿಂದ ಕಳ್ಳುಮಾರನಹಳ್ಳಕ್ಕೆ ಹರಿದು ನಂತರ ಚನ್ನಾಪುರದ ಕೆರೆಯತ್ತ ನೀರು ಹರಿಯುತ್ತದೆ. ಚನ್ನಾಪುರದ ಕೆರೆಯಿಂದ ಕೂಸಮ್ಮನ ಕೆರೆ’ ಎಂದು ಬೆಟ್ಟದ ಮೇಲಿಂದ ಬರುವ ನೀರಿನ ದಾರಿಯನ್ನು ಚನ್ನಾಪುರದ ತಿಮ್ಮರಾಯಪ್ಪ ವಿವರಿಸಿದರು.

‘ಈ ಬೆಟ್ಟದ ಕಲ್ಲುಗಳನ್ನು ಕತ್ತರಿಸಿ, ಪುಡಿ ಮಾಡಿ ಸಾಗಿಸುವ ಅಕ್ರಮ ಗಣಿಗಾರಿಕೆ, ಮರಮುಟ್ಟುಗಳ ಸಾಗಣೆ ಮತ್ತು ಮರಳುದಂಧೆಗೆ ತಡೆಬಿದ್ದಿದೆ. ಆದರೆ ನೀರಿನಲ್ಲಿ ಚಲ್ಲಾಟವಾಡಲು, ಕುಡಿದು ಗಲಾಟೆ ಮಾಡುವವರ ಹಾವಳಿಗೆ ತಡೆ ಬೇಕು. ಕುಡಿದು ಬಾಟಲಿಗಳನ್ನು ಒಡೆದು ಹಾಕಿದವರಿಂದ ನಮ್ಮ ಜಾನುವಾರುಗಳಿಗೆ ಸಾಕಷ್ಟು ತೊಂದರೆಯಾಗಿದೆ. ಗಾಜು ಚುಚ್ಚಿಕೊಂಡು ವ್ರಣವಾಗಿದ್ದರಿಂದ ಒಂದು ಹಸುವನ್ನು ನಾನೇ ಕಳೆದುಕೊಂಡೆ. ಬೆಟ್ಟ ಕಡಿದಾಗಿದ್ದು, ಎಲ್ಲೆಡೆ ನೀರು ಹರಿಯುವುದರಿಂದ ಜಾರಿಕೆ ಇರುತ್ತದೆ. ಅಪಾಯವನ್ನು ಕಡೆಗಣಿಸಿ ನೀರಿನಲ್ಲಿ ಆಡಲು ಹೋಗಿ ಬಂಡೆಗಳ ಮೇಲಿಂದ ಜಾರಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ’ ಎನ್ನುತ್ತಾರೆ ಚನ್ನಾಪುರದ ತಿಮ್ಮರಾಯಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.