ADVERTISEMENT

ಹಾಲಿನ ಇಳುವರಿ ಕುಸಿತ: ಹೈನುಗಾರರ ಹೈರಾಣು ಮಾಡಿದ ಮಳೆ

ಹೊಲ, ಕೊಟ್ಟಿಗೆಗಳಿಂದ ಹೊರಬರದ ಹಸುಗಳು

ಡಿ.ಎಂ.ಕುರ್ಕೆ ಪ್ರಶಾಂತ
Published 9 ಆಗಸ್ಟ್ 2022, 4:02 IST
Last Updated 9 ಆಗಸ್ಟ್ 2022, 4:02 IST
..
..   

ಚಿಕ್ಕಬಳ್ಳಾಪುರ: ಕಳೆದ ಎರಡು ವಾರಕ್ಕೂ ಹೆಚ್ಚು ಕಾಲದಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಹೈನುಗಾರರನ್ನು ಹೈರಾಣು ಮಾಡಿದೆ. ಮಳೆಯಿಂದ ಹಾಲಿನ ಇಳುವರಿ ಕುಂಠಿತವಾಗಿದೆ. ನೀರು ಮೇವಿನ ಸೇವನೆ ಪರಿಣಾಮ ರಾಸುಗಳು ಗುಣಮಟ್ಟದ ಹಾಲು ನೀಡುತ್ತಿಲ್ಲ. ರಾಸುಗಳನ್ನುಹೊಲ, ತೋಟಗಳಿಗೆ ಮೇಯಲು ಬಿಡದ ಪರಿಣಾಮ ಹೈನುಗಾರಿಕೆ ಕೊಂಚ ಮಟ್ಟಿಗೆ ದುಬಾರಿಯೂ ಆಗಿದೆ.

ಕೆಲವು ವೇಳೆ ರಭಸದ ಮಳೆ ಸುರಿದರೆ ಕೆಲವು ಸಮಯ ತುಂತುರು ಮಳೆ ಸುರಿಯುತ್ತಿದೆ. ಈ ಮಳೆಯ ಕಾರಣದಿಂದ ಜಿಲ್ಲೆಯಲ್ಲಿ ಹೈನುಗಾರರು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಹಾಲು ಉತ್ಪಾದನೆಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದೆ.ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ರೈತರು ಹಸುಗಳ ಸಾಕಾಣಿಕೆಯ ಮೂಲಕ ಜೀವನವನ್ನು ಕಟ್ಟಿಕೊಂಡಿದ್ದಾರೆ. 2018ರ ಜಾನುವಾರು ಗಣತಿ ಪ್ರಕಾರ ಜಿಲ್ಲೆಯಲ್ಲಿ 2,13,815 ದನಗಳು ಹಾಗೂ 26,397 ಎಮ್ಮೆಗಳಿವೆ.ಜಿಲ್ಲೆಯಲ್ಲಿ 978 ಹಾಲಿನ ಡೇರಿಗಳಿವೆ. ನಿತ್ಯ ಸರಾಸರಿ 4.30 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತದೆ.

ADVERTISEMENT

ಹೀಗೆ ದೊಡ್ಡಮಟ್ಟದಲ್ಲಿ ರಾಸುಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಮಳೆ ಹಾಲಿನ ಇಳುವರಿಯನ್ನು ಕುಂಠಿತಗೊಳಿಸಿದೆ. ಮತ್ತೊಂದು ಕಡೆ ರಾಸುಗಳನ್ನು ಮೇಯಿಸಲು ತೀವ್ರ ಸಮಸ್ಯೆ ಆಗಿದೆ.

ಕೆಲವರು ಎರಡು ಮೂರು ಹಸುಗಳನ್ನು ಸಾಕಿ ಡೇರಿಗಳಿಗೆ ಹಾಲು ಪೂರೈಸುವ ಮೂಲಕ ಜೀವನ ಸಾಗಿಸಿದರೆ, ಮತ್ತಷ್ಟು ಮಂದಿ ದೊಡ್ಡ ಪ್ರಮಾಣದಲ್ಲಿಯೇ ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಮಳೆ ಈ ಎರಡೂ ವರ್ಗಗಳ ಹೈನುಗಾರರಿಗೆ |ಬರೆ ಹಾಕಿದೆ.

ಮಳೆಯು ಹಾಲಿನ ಇಳುವರಿಯನ್ನು ಕುಂಠಿತಗೊಳಿಸಿದೆ.ರೈತರು ಹಸುಗಳನ್ನು ಸಾಮಾನ್ಯವಾಗಿ ಹೊಲ, ತೋಟಗಳಿಗೆ ಮೇಯಲು ಬಿಡುತ್ತಿದ್ದರು. ಬೆಳಿಗ್ಗೆ ಹಾಲು ಕರೆದು ಡೇರಿಗೆ ಹಾಕಿದ ನಂತರ ಹಸುಗಳು ಹೊಲ, ತೋಟಗಳಲ್ಲಿ ಮೇಯ್ಯುತ್ತಿದ್ದವು. ಸಂಜೆಯ ಹಾಲು ಕರೆಯುವ ವೇಳೆಗೆ ಕೊಟ್ಟಿಗೆಗಳತ್ತ ಬರುತ್ತಿದ್ದವು. ಇದರಿಂದ ರೈತರಿಗೆ ಮೇವಿನ ಹೊರೆಯೂ ಕಡಿಮೆ ಆಗುತ್ತಿತ್ತು. ಈಗ ದಿನವಿಡೀ ಕೊಟ್ಟಿಗೆಯಲ್ಲಿರುವ ರಾಸುಗಳನ್ನು ಆಹಾರ ಹೊಂಚುವುದು ತುಸು ದುಬಾರಿ ಎನಿಸಿದೆ.

ಜಿಲ್ಲೆಯಲ್ಲಿ ಕೆಲವರು ಹೊಲ, ತೋಟಗಳಿಲ್ಲದ ಜನರು ಸಹ ಹಸುಗಳನ್ನು ಸಾಕುವ ಮೂಲಕ ಆರ್ಥಿಕ ಅನುಕೂಲವ ಪಡೆದಿದ್ದರು. ರಸ್ತೆ ಬದಿ, ಬಯಲಿನಲ್ಲಿ ಹೀಗೆ ನಾನಾ ಕಡೆಗಳಲ್ಲಿ ಹಸುಗಳನ್ನು ಮೇಯಿಸುತ್ತಿದ್ದರು. ಇಂತಹ ಹೈನುಗಾರರಿಗೆ ಮಳೆ ತೀವ್ರವಾದ ಪೆಟ್ಟನ್ನೇ ನೀಡಿದೆ.

ಸಾಮಾನ್ಯವಾಗಿ ಮಳೆಗಾಲದಲ್ಲಿ ಹಾಲಿನ ಇಳುವರಿ ಕುಸಿಯುತ್ತದೆ. ಆದರೆ ಈ ಬಾರಿ ಪ್ರತಿ ವರ್ಷಕ್ಕಿಂತ ಹೆಚ್ಚಿನ ಪರಿಣಾಮವನ್ನೇ ಹೈನುಗಾರರು ಎದುರಿಸುತ್ತಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ತುಂತುರು ಮಳೆ ಹೊಲಗಳಿಂದ ಮೇವು ತರುವುದಕ್ಕೂ ಅಡ್ಡಿಯಾಗಿದೆ. ಮಳೆಯ ಕಾರಣದಿಂದ ಕಾರ್ಮಿಕರ ಕೊರತೆ ಎದುರಿಸಬೇಕಾಗಿದೆ.ಕೊಟ್ಟಿಗೆಯಿಂದ ಹಸುಗಳನ್ನು ಕದಲಿಸದಂತೆ
ಆಗಿದೆ.

ಗುಣಮಟ್ಟವಿಲ್ಲ; ಕೆಲಸಗಾರರಿಗೆ ಬರ

3.5 ಪ್ಯಾಟ್‌ನ ಒಂದು ಲೀಟರ್ ಹಾಲಿಗೆ ₹ 27 ಇದೆ. ಆದರೆ ಮಳೆಗಾಲವಾದ ಕಾರಣ ಗುಣಮಟ್ಟ ಬರುತ್ತಿಲ್ಲ. ಪಶು ಆಹಾರದ ಬೆಲೆಗಳು ಗಣನೀಯವಾಗಿ ಹೆಚ್ಚಿವೆ. ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಹೈನುಗಾರಿಕೆ ಕಷ್ಟವಾಗಿದೆ ಎನ್ನುತ್ತಾರೆ ಪಟ್ರೇನಹಳ್ಳಿಯ ಯುವ ರೈತ ವರುಣ್.

ನಿತ್ಯ ಒಂದು ಸಮಯಕ್ಕೆ 180 ಲೀಟರ್ ಹಾಲನ್ನು ಡೇರಿಗೆ ಹಾಕುತ್ತಿದ್ದೆ. ಆದರೆ ಈಗ ಅದು 150 ಲೀಟರ್‌ಗೆ ಬಂದಿದೆ. ವಾತಾವರಣ ಪೂರ್ಣವಾಗಿ ತಣ್ಣಗಿರುವ ಕಾರಣ ರಾಸುಗಳು ಮೇವನ್ನು ಸರಿಯಾಗಿ ತಿನ್ನುತ್ತಿಲ್ಲ. ಮೆಲುಕು ಹಾಕುವುದಿಲ್ಲ. ತೀರಾ ಬಿಸಿಲು ಮತ್ತು ಮಳೆಯ ವಾತಾವರಣವಿದ್ದರೆ ಇಂತಹ ಅನನುಕೂಲಗಳು ಎದುರಾಗುತ್ತವೆ ಎಂದು ಹೇಳಿದರು.

ಮಳೆಯ ಕಾರಣ ಮೇವು ಕಟಾವಿಗೆ ಕೂಲಿ ಕೆಲಸದವರು ಸಹ ಸಿಗುತ್ತಿಲ್ಲ. ಮಳೆಯ ಕಾರಣದಿಂದ ಒಣ ಹುಲ್ಲು ಸಂಗ್ರಹಿಸಿದ್ದೆವು. ಬರಿ ಒಣ ಹುಲ್ಲು ನೀಡಿದರೂ ಇಳುವರಿ ಕುಸಿಯುತ್ತದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹೈನುಗಾರರಿಗೆ ತೊಂದರೆ ಆಗಿದೆ ಎಂದರು.

ನಾಲ್ಕು ಕ್ಯಾನ್ ಹಾಲು ಕುಸಿತ

ಬೆಳಿಗ್ಗೆ ಆರು ಮತ್ತು ಸಂಜೆ ಐದು ಕ್ಯಾನ್ ಹಾಲು ಡೇರಿಯಲ್ಲಿ ಸಂಗ್ರಹವಾಗುತ್ತಿತ್ತು. ಮಳೆಯ ಕಾರಣದಿಂದ ಬೆಳಿಗ್ಗೆ ನಾಲ್ಕು ಮತ್ತು ಸಂಜೆ ಮೂರು ಕ್ಯಾನ್ ಹಾಲು ಮಾತ್ರ ಸಂಗ್ರಹವಾಗುತ್ತಿದೆ ಎಂದುಚಿಕ್ಕಬಳ್ಳಾಪುರ ತಾಲ್ಲೂಕು ಮನ್ನಾರಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷಎಸ್.ರವಿ ತಿಳಿಸಿದರು.

ಮಳೆಯಿಂದ ರಾಸುಗಳನ್ನು ಹೊರಗೆ ಮೇಯಲು ಸಾಧ್ಯವಿಲ್ಲ. ಮಳೆ ಬಂದು ನಿಂತರ ನಂತರ ನಾಲ್ಕು ತಾಸು ಆದರೂ ಹುಲ್ಲು ಒಣಗಬೇಕು. ಆದರೆ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ನೀರಿನ ಅಂಶವಿರುವ ಹುಲ್ಲನ್ನೇ ನೀಡಲಾಗುತ್ತಿದೆ. ಇದರಿಂದ ರಾಸುಗಳು ಗಟ್ಟಿಯಾದ ಸೆಗಣಿ ಇಡುವುದಿಲ್ಲ ಎಂದರು.

ನೀರು ಮೇವು; ಗುಣಮಟ್ಟ ಕುಸಿತ

ಹಸಿರು ಮೇವು ಒಣಗದಂತೆನಿರಂತರವಾಗಿ ಮಳೆ ಸುರಿಯುತ್ತಿದೆ. ನೀರು ತುಂಬಿಕೊಂಡ ಹಸಿರು ಮೇವನ್ನು ತಿಂದರೆ ಹಸುಗಳು ಗುಣಮಟ್ಟದ ಹಾಲನ್ನು ನೀಡುವುದಿಲ್ಲ. ನೀರು ತುಂಬಿದ ಮೇವು ಸೇವಿಸುವ ಹಸುಗಳ ಹಾಲಿನಲ್ಲಿ ಪ್ಯಾಟ್ ಕಡಿಮೆ ಇರುತ್ತದೆ. ಪ್ಯಾಟ್ ಕಡಿಮೆಯಾದರೆ ಹಾಲಿನ ದರವೂ ಕಡಿಮೆ ಆಗುತ್ತದೆ. ನಿರಂತರ ಮಳೆ ಹೈನುಗಾರರಿಗೆ ಆರ್ಥಿಕವಾಗಿ ಅನನುಕೂಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.