ADVERTISEMENT

ನಂದಿಬೆಟ್ಟದ ತಪ್ಪಲಿನಲ್ಲಿ ‘ನಮ್ಮ ನಂದಿ’ ಆಂದೋಲನಕ್ಕೆ ಸದ್ಗುರು ಚಾಲನೆ

‘ನಮ್ಮ ನಂದಿ’ ಆಂದೋಲನಕ್ಕೆ ‌ಸದ್ಗುರು ಜಗ್ಗಿ ವಾಸುದೇವ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 13:59 IST
Last Updated 18 ಸೆಪ್ಟೆಂಬರ್ 2021, 13:59 IST
‘ನಮ್ಮ ನಂದಿ‘ ಆಂದೋಲನದ ಅಂಗವಾಗಿ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಬೆಟ್ಟದ ತಪ್ಪಲಿನಲ್ಲಿ ಸದ್ಗುರು ಜಗ್ಗಿ ವಾಸುದೇವ ಅವರು ಸಸಿಗಳನ್ನು ನೆಟ್ಟರು. ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಅರಸಲನ್ ಇದ್ದರು
‘ನಮ್ಮ ನಂದಿ‘ ಆಂದೋಲನದ ಅಂಗವಾಗಿ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಬೆಟ್ಟದ ತಪ್ಪಲಿನಲ್ಲಿ ಸದ್ಗುರು ಜಗ್ಗಿ ವಾಸುದೇವ ಅವರು ಸಸಿಗಳನ್ನು ನೆಟ್ಟರು. ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಅರಸಲನ್ ಇದ್ದರು   

ಚಿಕ್ಕಬಳ್ಳಾಪುರ: ಪ್ರಸಿದ್ಧ ನಂದಿಗಿರಿಧಾಮ ಹಾಗೂ ಸುತ್ತಲಿನ ಬೆಟ್ಟಗಳನ್ನು ಮತ್ತಷ್ಟು ಹಸಿರೀಕರಣಗೊಳಿಸುವ ಉದ್ದೇಶದಿಂದ ಸದ್ಗುರು ಜಗ್ಗಿ ವಾಸುದೇವ ಅವರ ಈಶಾ ಔಟ್‌ರೀಚ್ ಸಂಸ್ಥೆ ಹಾಗೂ ಬೆಂಗಳೂರಿನ ಹಸಿರು ಸಂಸ್ಥೆಯ ನೇತೃತ್ವದಲ್ಲಿ ಶನಿವಾರ ನಂದಿಬೆಟ್ಟದ ತಪ್ಪಲಿನಲ್ಲಿ ‘ನಮ್ಮ ನಂದಿ’ ಆಂದೋಲನಕ್ಕೆ ಚಾಲನೆ ನೀಡಲಾಯಿತು.

400ಕ್ಕೂ ಹೆಚ್ಚು ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಂದಿಬೆಟ್ಟದ ತಪ್ಪಲು ಹಾಗೂ ಯಲುವಳ್ಳಿಯ ಗುಂಡುತೋಪಿನಲ್ಲಿ ವಿವಿಧ ಜಾತಿಯ 500ಕ್ಕೂ ಹೆಚ್ಚು ಸಸಿಗಳನ್ನು ನಾಟಿ ಮಾಡಲಾಯಿತು.

ನಂದಿಬೆಟ್ಟ ಮತ್ತು ಇದಕ್ಕೆ ಹೊಂದಿಕೊಂಡಿರುವ ಬೆಟ್ಟದ ಸಾಲುಗಳಲ್ಲಿ ಹಾಗೂ ಗುಂಡುತೋಪುಗಳಲ್ಲಿ ‘ನಮ್ಮ ನಂದಿ’ ಆಂದೋಲನದ ಮೂಲಕ ಸಸಿ ನೆಡಲಾಗುತ್ತಿದೆ. ಈಶಾ ಔಟ್‌ರೀಚ್ ಸಂಸ್ಥೆ ಎರಡು ವರ್ಷಗಳ ಕಾಲ ಈ ಸಸಿಗಳ ಪೋಷಣೆಯ ಜವಾಬ್ದಾರಿವಹಿಸಿಕೊಂಡಿದೆ.

ADVERTISEMENT

‘ನಮ್ಮ ನಂದಿ’ಗೆ ಚಾಲನೆ ನೀಡಿದ ಸದ್ಗುರು ಜಗ್ಗಿ ವಾಸುದೇವ, ಕಾಡುಗಳು ಸಾವಿರಾರು ವರ್ಷಗಳಿಂದ ತಮ್ಮಷ್ಟಕ್ಕೆ ತಾವೇ ಬೆಳೆದಿವೆ. ತಮ್ಮನ್ನು ತಾವೇ ಕಾಪಾಡಿಕೊಂಡು ಬರುತ್ತಿವೆ. ಆದರೆ ಅರಣ್ಯ ಒತ್ತುವರಿ, ಮರಕಡಿಯುವುದು ಸೇರಿದಂತೆ ಮನುಷ್ಯನ ಹಸ್ತಕ್ಷೇಪ ಕಾಡುಗಳ ಮೇಲಾಗುತ್ತಿದೆ. ಸರ್ಕಾರಗಳೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಾವು ಸ್ವಲ್ಪ ಮಟ್ಟಿಗೆ ಕಾಡುಗಳ ರಕ್ಷಣೆಗಾಗಿ ಕೆಲಸ ಮಾಡಬೇಕು’ ಎಂದು ಹೇಳಿದರು.

‘ನಮ್ಮ ನಂದಿ ಯೋಜನೆಯಲ್ಲಿ ಜನರು ಭಾಗಿ ಆಗುವುದು ಮುಖ್ಯ. ಈ ಆಂದೋಲನಕ್ಕಾಗಿ 10 ಸಾವಿರ ಯುವಕರನ್ನು ನೋಂದಣಿ ಮಾಡಿಸಬೇಕು. ಪ್ರತಿ ವಾರ 2,500 ಯುವಕರು ನಮ್ಮ ನಂದಿಯ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಾಡಬೇಕು’ ಎಂದರು.

‘ತಿಂಗಳಲ್ಲಿ 10 ದಿನ ಕರ್ನಾಟಕದಲ್ಲಿ ವಾಸ್ತವ್ಯಕ್ಕೆ ಪ್ರಯತ್ನಿಸುವೆ. ಚಿಕ್ಕಬಳ್ಳಾಪುರದಲ್ಲಿ ಲೀಡರ್‌ಶಿಫ್ ಅಕಾಡೆಮಿ, ವಸತಿ ಶಾಲೆ ಮತ್ತು ಯೋಗ ಕೇಂದ್ರವನ್ನು ಆರಂಭಿಸುತ್ತೇವೆ. ನಾನು ಚಿಕ್ಕಂದಿನಲ್ಲಿ ಚಿಕ್ಕಬಳ್ಳಾಪುರದಲ್ಲಿ ಬಹಳ ದಿನಗಳ ಕಾಲ ಇರುತ್ತಿದ್ದೆ. ಈಗ ಮತ್ತೆ ಇಲ್ಲಿಗೆ ಬರುವ ಕಾಲ ಬರುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.