ADVERTISEMENT

‘ಒತ್ತುವರಿ ತೆರವಿಗೆ ಅಧಿಕಾರಿಗಳ ನಿರಾಸಕ್ತಿ’

ಚಲಕಾಯಲಪರ್ತಿ ಅಬ್ದುಲ್ ಕಲಾಂ ಜೀವವೈವಿಧ್ಯ ಉದ್ಯಾನದಲ್ಲಿ ಉಸಿರಿಗಾಗಿ ಹಸಿರು ಟ್ರಸ್ಟ್ ಸದಸ್ಯರಿಂದ ಬೀಜದುಂಡೆ ಪ್ರಸರಣ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 10:26 IST
Last Updated 13 ಜುಲೈ 2020, 10:26 IST
ಚಲಕಾಯಲಪರ್ತಿ ಅಬ್ದುಲ್ ಕಲಾಂ ಜೀವವೈವಿಧ್ಯ ಉದ್ಯಾನದಲ್ಲಿ ಉಸಿರಿಗಾಗಿ ಹಸಿರು ಟ್ರಸ್ಟಿನ ಸದಸ್ಯರು ಬೀಜದುಂಡೆ ಪ್ರಸರಣ ಮಾಡಿದರು.
ಚಲಕಾಯಲಪರ್ತಿ ಅಬ್ದುಲ್ ಕಲಾಂ ಜೀವವೈವಿಧ್ಯ ಉದ್ಯಾನದಲ್ಲಿ ಉಸಿರಿಗಾಗಿ ಹಸಿರು ಟ್ರಸ್ಟಿನ ಸದಸ್ಯರು ಬೀಜದುಂಡೆ ಪ್ರಸರಣ ಮಾಡಿದರು.   

ಚಿಕ್ಕಬಳ್ಳಾಪುರ: ದಿಬ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಲಕಾಯಲಪರ್ತಿ ಗ್ರಾಮದಲ್ಲಿ ಉಸಿರಿಗಾಗಿ ಹಸಿರು ಟ್ರಸ್ಟ್ ಅಭಿವೃದ್ಧಿಪಡಿಸುತ್ತಿರುವ ರಾಷ್ಟ್ರಪತಿ ಅಬ್ದುಲ್ ಕಲಾಂ ಜೀವವೈವಿಧ್ಯ ಉದ್ಯಾನದಲ್ಲಿ ಟ್ರಸ್ಟಿನ ಸದಸ್ಯರು ಬೀಜದುಂಡೆ ಪ್ರಸರಣ ಮಾಡಿದರು.

ಉದ್ಯಾನದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅನುದಾನದಲ್ಲಿ ನಿರ್ಮಿಸಿದ ಇಂಗು ಗುಂಡಿಗಳಲ್ಲಿ ಸ್ಥಳೀಯವಾಗಿ ಬೆಳೆಯುವ ಹೊಂಗೆ, ಬೇವು, ಆಲ, ಅರಳಿ, ಸ್ಫೆತೋಡಿಯಾ, ಗುಲ್ ಮೊಹರ್ ‌ಸೇರಿದಂತೆ ವಿವಿಧ ಪ್ರಬೇಧದ ಸುಮಾರು 2,000 ಬೀಜದುಂಡೆಗಳನ್ನು ಪ್ರಸರಣ ಮಾಡಲಾಯಿತು.

ಈ ವೇಳೆ ಮಾತನಾಡಿದ ಉಸಿರಿಗಾಗಿ ಹಸಿರು ಟ್ರಸ್ಟ್ ಕಾರ್ಯಕಾರಿ ಟ್ರಸ್ಟಿ ಎನ್.ಗಂಗಾಧರ ರೆಡ್ಡಿ, ‘ಸುತ್ತಮುತ್ತಲಿನ ಸರ್ಕಾರಿ ಜಮೀನುಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಒತ್ತುವರಿಯನ್ನು ಎದುರಿಸಿ ಸುಮಾರು ಹದಿನಾರು ಎಕರೆ ಪ್ರದೇಶಗಳಲ್ಲಿ ಎರಡು ಸಾವಿರ ಸಸಿಗಳನ್ನು ನೆಟ್ಟು ಉಸಿರಿಗಾಗಿ ಹಸಿರು ಟ್ರಸ್ಟ್ ಪೋಷಣೆ ಮಾಡುತ್ತಿದೆ’ ಎಂದು ಹೇಳಿದರು.

ADVERTISEMENT

‘ಸರ್ಕಾರಿ ಗೋಮಾಳ ಹಾಗೂ ಸಾಮಾಜಿಕ ಅರಣ್ಯ ಇಲಾಖೆಗೆ ಸೇರಿದ ನೂರಾರು ಎಕರೆ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸವೇ ಸರಿ. ಈ ಬಗ್ಗೆ ಚಲಕಾಯಲಪರ್ತಿ ಗ್ರಾಮಸ್ಥರು ಹಲವು ಬಾರಿ ಅಧಿಕಾರಿಗಳ ಗಮನ ಸೆಳೆದರೂ ಏನೂ ಪ್ರಯೋಜನವಾಗಿಲ್ಲ’ ಎಂದು ತಿಳಿಸಿದರು.

‘ಕಳೆದ ಐದು ವರ್ಷಗಳ ಶ್ರಮದಿಂದ ಉದ್ಯಾನದಲ್ಲಿ ಎರಡು ಸಾವಿರ ಸಸಿಗಳು ಬೆಳೆಯುತ್ತಿವೆ. ನರೇಗಾ ಯೋಜನೆ ಅಡಿ ನೂರಾರು ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಂದು ವೇಳೆ ಅಂದು ಈ ಪ್ರದೇಶದಲ್ಲಿ ಸಸಿಗಳನ್ನು ನೆಡದಿದ್ದರೆ ಬಹುಶಃ ಈ ಪ್ರದೇಶವೂ ಒತ್ತುವರಿಯಾಗುತ್ತಿತ್ತು’ ಎಂದರು.

‘ಕಳೆದ ಎರಡು ವಾರಗಳಿಂದ ನರೇಗಾ ಯೋಜನೆ ಅಡಿ ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನ ಕೆಲಸ ಮಾಡುತ್ತಿದ್ದು, ಇಂಗು ಗುಂಡಿಗಳನ್ನು ನಿರ್ಮಾಣ ಮಾಡಿದ್ದಾರೆ. ಇದರಿಂದ ಬೆಳೆಯುತ್ತಿರುವ ಸಸಿಗಳಿಗೆ ನೀರಿನ ಕೊರತೆ ಕಾಡುವುದಿಲ್ಲ’ ಎಂದು ಹೇಳಿದರು.

‘ಕೆಲವೇ ವರ್ಷಗಳ ಹಿಂದೆ ದಟ್ಟವಾಗಿದ್ದ ಅರಣ್ಯದಲ್ಲಿ ವಿವಿಧ ಪ್ರಬೇಧದ ಸಸಿಗಳು, ಪ್ರಾಣಿ-ಪಕ್ಷಿಗಳ ಆವಾಸ ಸ್ಥಾನವಾಗಿದ್ದು, ಇಂದು ಅವೆಲ್ಲಾ ಕಣ್ಮರೆಯಾಗಿವೆ. ಆದರೆ ಅಬ್ದುಲ್ ಕಲಾಂ ಉದ್ಯಾನದಲ್ಲಿ ಇವತ್ತು ವಿವಿಧ ಪ್ರಬೇಧದ ಸ್ಥಳೀಯ ಸಸಿಗಳು ಮತ್ತು ಮರಗಳು ಬೆಳೆಯುತ್ತಿದ್ದು, ಇಲ್ಲಿರುವ ಜೀವ ವೈವಿಧ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ’ ಎಂದು ತಿಳಿಸಿದರು.

ಉಸಿರಿಗಾಗಿ ಹಸಿರು ಟ್ರಸ್ಟಿನ ಕಾರ್ಯದರ್ಶಿ ಎಂ.ಶ್ರೀನಾಥ, ಸದಸ್ಯರಾದ ರಾಮಾಂಜಿನಪ್ಪ ಸಿ.ಕೆ. ಶಶಿಧರ, ಎಸ್‌.ಕೆ.ನಾಗೇಶ್, ಹರೀಶ್, ಗ್ರಾಮಸ್ಥರಾದ ಚಿಕ್ಕನರಸಿಂಹಪ್ಪ, ಗಂಗರಾಜು ರಾಹುಲ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.