ADVERTISEMENT

ನಂದಿಬೆಟ್ಟದ ತುದಿಯಲ್ಲಿ ಬಂಡೆ ಓತಿಯ ದರ್ಶನ

ದಕ್ಷಿಣ ಭಾರತದ ಕಲ್ಲು ಬೆಟ್ಟಗಳಿರುವ ಪ್ರದೇಶಕ್ಕೆಮಾತ್ರ ಸಿಮೀತವಾದ ಅಪರೂಪದ ಓತಿ

ಡಿ.ಜಿ.ಮಲ್ಲಿಕಾರ್ಜುನ
Published 14 ಡಿಸೆಂಬರ್ 2019, 15:57 IST
Last Updated 14 ಡಿಸೆಂಬರ್ 2019, 15:57 IST
ನಂದಿಬೆಟ್ಟದ ಕೋಡುಗಲ್ಲಿನ ತುದಿಯಲ್ಲಿ ಕೂತು ಶೂನ್ಯ ದಿಗಂತದೆಡೆಗೆ ನೋಡುತ್ತಿರುವ ಬಂಡೆ ಓತಿ
ನಂದಿಬೆಟ್ಟದ ಕೋಡುಗಲ್ಲಿನ ತುದಿಯಲ್ಲಿ ಕೂತು ಶೂನ್ಯ ದಿಗಂತದೆಡೆಗೆ ನೋಡುತ್ತಿರುವ ಬಂಡೆ ಓತಿ   

ಶಿಡ್ಲಘಟ್ಟ : “ಓತಿ ತನ್ನ ಮುಂದೆ ಕೋಟಿ ಕೋಟಿ ಜ್ಯೋತಿರ್ವರ್ಷಗಳವರೆಗೆ ಹಬ್ಬಿದ್ದ ಅನಂತ ಶೂನ್ಯವನ್ನು ನೋಡಿತು. ಕೋಡುಗಲ್ಲಿನ ಅಂಚಿನಿಂದ ಪ್ರಪಾತದ ಕಡೆಗೆ ಕುಪ್ಪಳಿಸಿ ಚಿಮ್ಮಿತು. ಈ ವಿಚಿತ್ರ ಸರೀಸೃಪ ನಮಗೆ ದೃಷ್ಟಿ ದೂರವಾಗಿ ಶೂನ್ಯದಲ್ಲಿ ಕರಗಿ ಹೋಯ್ತು. ಕಾಲ ದೇಶದ ಆಚೆಗಿನ ಯಾವುದೋ ವಿಸ್ಮೃತಿಯ ತುಣುಕು ನಮ್ಮೆದುರು ಮಿಂಚಿ ಮತ್ತೆ ಅದೇ ವಿಸ್ಮೃತಿಯಲ್ಲಿ ಲೀನವಾಗಿ ಹೋಗಿತ್ತು”. ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೋ ಕಾದಂಬರಿಯಲ್ಲಿ ಹಾರುವ ಓತಿಯ ವಿವರಣೆಯಿದು.

ತೇಜಸ್ವಿಯವರ ಹಾರುವ ಓತಿಯನ್ನು ನೆನಪಿಸುವಂತೆ ನಂದಿಬೆಟ್ಟದ ತುದಿಯಲ್ಲಿ ಶೂನ್ಯ ದಿಗಂತದೆಡೆಗೆ ನೋಡುತ್ತಿದ್ದ ಓತಿಯೊಂದು ಕಾಣಿಸಿತು. ನಂದಿ ಬೆಟ್ಟದ ಬೆಟ್ಟದ ನೈಋತ್ಯ ದಿಕ್ಕಿನಲ್ಲಿ ಸುಮಾರು ಒಂದು ಸಾವಿರ ಅಡಿಯ ಪ್ರಪಾತವಿದೆ. ಟಿಪ್ಪು ಡ್ರಾಪ್ ಎಂದೇ ಹೆಸರಾದ ಇಲ್ಲಿನ ಕೋಡುಗಲ್ಲಿನ ತುದಿಯಲ್ಲಿ ಕುಳಿತಿದ್ದ ಓತಿ ತನ್ನ ಉದ್ದುದ್ದ ಬೆರಳುಗಳಿಂದ ಕ್ಷಣಗಣನೆ ಮಾಡುವಂತೆ ಭಾಸವಾಗುತ್ತಿತ್ತು.

ದಕ್ಷಿಣ ಭಾರತೀಯ ಬಂಡೆ ಓತಿಗಳೆನ್ನುವ ಇವನ್ನುಆಂಗ್ಲ ಭಾಷೆಯಲ್ಲಿ ಸೌಥ್‌ ಇಂಡಿಯನ್‌ ರಾಕ್‌ ಅಗಮಾ ಅಥವಾ ಪೆನಿನ್ಸುಲಾರ್‌ ರಾಕ್‌ ಅಗಮಾ ಎಂದು ಕರೆಯುವರು. ಇವುಗಳು ಕಲ್ಲು ಬಂಡೆ ಪ್ರದೇಶದಲ್ಲಿ ವಾಸಿಸುವ ಕೀಟಹಾರಿ ಜೀವಿಗಳಾಗಿವೆ. ಇವು ದಕ್ಷಿಣ ಭಾರತದ ಕಲ್ಲು ಬೆಟ್ಟಗಳಿರುವ ಪ್ರದೇಶಕ್ಕೆಮಾತ್ರ ಸಿಮೀತವಾದ ಅಪರೂಪದ ಓತಿಗಳಾಗಿವೆ. ಈ ಬಂಡೆ ಓತಿಗಳಲ್ಲಿ ಗಂಡು ಓತಿಗೆ ಗಾಢ ಕಪ್ಪು ದೇಹದ ಮೇಲೆ ಹಳದಿ, ಕೇಸರಿ ಬಣ್ಣವಿರುತ್ತದೆ. ಹೆಣ್ಣುಗಳು ಬಂಡೆಗಳ ಬಣ್ಣವನ್ನೇ ಹೊಂದಿರುತ್ತವೆ.

ADVERTISEMENT

ಈ ಓತಿಯ ಬಗ್ಗೆ ಮಾಹಿತಿ ನೀಡಿದ ಉಪನ್ಯಾಸಕ ಅಜಿತ್ ಕೌಂಡಿನ್ಯ, “ಸರೀಸೃಪ ವರ್ಗಕ್ಕೆ ಸೇರುವ ಈ ಜೀವಿಗಳು ಪಕ್ಷಿಗಳು ಮತ್ತು ಸಸ್ತನಿಗಳು ಈ ಜಗತ್ತಿನಲ್ಲಿ ಕಾಣಿಸಿಕೊಳ್ಳುವುದಕ್ಕೂ ೨೦೦ ಮಿಲಿಯ ವರ್ಷಗಳ ಹಿಂದೆಯೇ ಅಸ್ತಿತ್ವದಲ್ಲಿದ್ದವು. ಕ್ರಿಟೀಷಿಯಸ್ ಅವಧಿಯ ಅಂತ್ಯದಲ್ಲಿ ದೈತ್ಯೋರಗ ಡೈನೊಸಾರ್‌ಗಳು ಕಣ್ಮರೆಯಾದರೂ ಅವುಗಳು ಅಸಾಮಾನ್ಯ ರೀತಿಯಲ್ಲಿ ವಿವಿಧ ರೀತಿಯ ವಾಸಸ್ಥಳಗಳಿಗೆ ಹೊಂದಿಕೊಂಡು ಬದುಕಿವೆ.

ಅವುಗಳ ತಂಪು ರಕ್ತ ಗುಣವೇ ಯಶಸ್ವಿ ಬದುಕನ್ನು ನಡೆಸಲು ಸಾಧ್ಯಮಾಡಿದೆ. ತಾವು ಬದುಕಲು ಬೇಕಾಗುವಷ್ಟು ಉಷ್ಣತೆಯನ್ನು ಪರಿಸರದಿಂದ ಗಳಿಸಿಕೊಳ್ಳುವುದರಿಂದ ಆಹಾರ ವಿರಳವಾದ ಪ್ರದೇಶದಲ್ಲೂ ಅವು ಬದುಕಬಲ್ಲವು. ಅವುಗಳ ಹೊರಚರ್ಮ ಜಲಾಭೇದ್ಯವಾದುದು. ದೇಹದ ತೇವಾಂಶ ಕಳೆದುಹೋಗದಂತೆ ತಡೆಯುವ ಹುರುಪೆಗಳ ಹೊದಿಕೆಯನ್ನು ಹೊಂದಿವೆ.

ಇರುವೆ, ಗೊದ್ದ, ಕಪ್ಪೆ, ಪತಂಗ, ಜೇಡ, ಇಲಿ, ಹಲ್ಲಿ ಮುಂತಾದ ಸಣ್ಣ ಪ್ರಾಣಿಗಳು ಅವುಗಳ ಆಹಾರ. ಹಲ್ಲಿಗಳಂತೆ ಅವು ತಮ್ಮ ಬಾಲವನ್ನು ಕಳಚುವುದಿಲ್ಲ, ಆದರೆ ಚರ್ಮವನ್ನು ಪೊರೆಯಂತೆ ಕಳಚುತ್ತವೆ. ಗಂಡು ಹೆಣ್ಣಿಗಿಂತ ದೊಡ್ಡದಿರುತ್ತದೆ.

ಆಹಾರ ಕೊಂಡಿಯ ಪ್ರಮುಖ ಜೀವಿಯಿದು. ಪರಿಸರ ಸೌಂದರ್ಯದಲ್ಲಿ ಇದರ ಪಾತ್ರವೂ ಇದೆ. ಈ ಬಂಡೆ ಓತಿಗಳು ಕೋಲಾರ ಜಿಲ್ಲೆಯ ಕೆಲವು ಬೆಟ್ಟ ಗುಡ್ಡಗಳು, ದೇವರಾಯನದುರ್ಗ, ರಾಮನಗರ, ನಂದಿಬೆಟ್ಟದಲ್ಲಿ ಕಾಣಸಿಗುತ್ತವೆ” ಎಂದು ಅವರು ವಿವರಿಸಿದರು.

“ನಂದಿಬೆಟ್ಟದ ಕೋಟೆ ಗೋಡೆಗಳ ಮೇಲೆ, ಬಂಡೆಗಳ ತುದಿಯಲ್ಲಿ ಈ ಓತಿಗಳು ಕಂಡುಬರುತ್ತವೆ. ಜನರ ಮಾತಿನ ಶಬ್ದ ಕೇಳುತ್ತಿದ್ದಂತೆಯೇ ಮರೆಯಾಗುತ್ತವೆ. ಅನೇಕ ವರ್ಷಗಳಿಂದ ಈ ಬೆಟ್ಟದ ಬಂಡೆಕಲ್ಲುಗಳನ್ನೇ ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಂಡಿರುವ ಈ ಬಂಡೆ ಓತಿಗಳು ಒಂದು ರೀತಿಯಲ್ಲಿ ನಂದಿಗಿರಿಧಾಮದ ಮೂಲನಿವಾಸಿಗಳೆನ್ನಬಹುದು” ಎಂದು ತೋಟಗಾರಿಕೆ ಇಲಾಖೆಯ ನಂದಿಗಿರಿಧಾಮದ ವಿಶೇಷ ಅಧಿಕಾರಿ ಎನ್.ರಮೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.