ADVERTISEMENT

ಅಜ್ಜಂಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಸಮ್ಮೇಳನದಿಂದ ಕನ್ನಡ ಜಾಗೃತಗೊಳ್ಳಲಿ: ಎಂ.ಒ. ಮಮತೇಶ್

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 8:03 IST
Last Updated 19 ಮಾರ್ಚ್ 2023, 8:03 IST
ಅಜ್ಜಂಪುರ ತಾಲ್ಲೂಕಿನ ಚಿಕ್ಕಾನವಂಗಲ ಗ್ರಾಮದಲ್ಲಿ ಶನಿವಾರ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಸಾಹಿತಿ ಮಮತೇಶ್, ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಾಸಕ ಡಿ.ಎಸ್. ಸುರೇಶ್, ಪರಿಷತ್ತಿನ ಜಿಲ್ಲಾ ಘಟಕ ಅಧ್ಯಕ್ಷ ಸೂರಿ ಶ್ರೀನಿವಾಸ್ ಇದ್ದರು
ಅಜ್ಜಂಪುರ ತಾಲ್ಲೂಕಿನ ಚಿಕ್ಕಾನವಂಗಲ ಗ್ರಾಮದಲ್ಲಿ ಶನಿವಾರ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಸಾಹಿತಿ ಮಮತೇಶ್, ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಾಸಕ ಡಿ.ಎಸ್. ಸುರೇಶ್, ಪರಿಷತ್ತಿನ ಜಿಲ್ಲಾ ಘಟಕ ಅಧ್ಯಕ್ಷ ಸೂರಿ ಶ್ರೀನಿವಾಸ್ ಇದ್ದರು   

ಅಜ್ಜಂಪುರ: ‘ನಮ್ಮ ಮಾತೃ ಭಾಷೆ ಕನ್ನಡ ಉಳಿಸಲು, ಬಳಸಲು ಮತ್ತು ಬೆಳೆಸಲು ಪ್ರತಿಯೊಬ್ಬರು ಕಂಕಣಬದ್ಧರಾಗಬೇಕು’ ಎಂದು ಸಾಹಿತಿ ಎಂ.ಒ. ಮಮತೇಶ್ ಹೇಳಿದರು.

ತಾಲ್ಲೂಕಿನ ಚಿಕ್ಕಾನವಂಗಲ ಗ್ರಾಮದಲ್ಲಿ ಶನಿವಾರ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕನ್ನಡ ಶಾಲೆಗಳು ಉಳಿಯಬೇಕು. ಆಗ, ಭಾಷೆ ಜೀವಂತವಾಗಿರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಿ ನೌಕರರು, ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಸೇರಿಸಬೇಕು ಎಂಬ ಆದೇಶ ಸರ್ಕಾರ ಮಾಡಬೇಕು. ನಾಡಿನಲ್ಲಿ ತಲೆ ಎತ್ತಿರುವ ವಿದೇಶಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ದೊರಕುವಂತಾಗಬೇಕು. ಕನ್ನಡಿಗರ ಹಿತ ಕಾಯಬೇಕು’ ಎಂದು ಆಶಿಸಿದರು.

ADVERTISEMENT

‘ಅಜ್ಜಂಪುರ ವಿಶಿಷ್ಟ ಇತಿಹಾಸವನ್ನು ಹೊಂದಿದೆ. ಅಜ್ಜಂಪುರ ಕೃಷ್ಣಸ್ವಾಮಿ, ಗೊ.ರು. ಚನ್ನಬಸಪ್ಪ, ಗೌ.ರು. ಓಂಕಾರಯ್ಯ, ಜಿ.ವಿ. ಶ್ರೀಕಂಠಯ್ಯ, ಅಜ್ಜಂಪುರ ಜಿ. ಸೂರಿ ನಾಡಿನ ಹಿರಿಯ ಸಾಹಿತಿಗಳ ಸಾಲಿನಲ್ಲಿ ಸೇರಿದ್ದಾರೆ ಎಂದು ಸ್ಮರಿಸಿದರು. ಹಿರಿಯರ, ಸಾಹಿತಿಗಳ ಸಾಹಿತ್ಯ ಓದುವ ಪರಿಪಾಠ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಅದರ ಸಾರ ತಿಳಿಸಬೇಕು. ಸಾಹಿತ್ಯ ಅಭಿರುಚಿ ಬೆಳೆಸಬೇಕು’ ಎಂದು ಕರೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡನಾಡಿನ ದೊಡ್ಡ ಪ್ರಾತಿನಿಧಿಕ ಸಂಸ್ಥೆ ಆಗಿದೆ. ಇದು ಮಾತೃ ಭಾಷೆಯನ್ನಾಡುವ ಎಲ್ಲರನ್ನೂ ಒಗ್ಗೂಡಿಸಿದೆ. ಅಲ್ಲದೆ, ಕನ್ನಡ ನಾಡು, ನುಡಿ, ಸಂಸ್ಕೃತಿ ಬೆಳವಣಿಗೆಗೆ ಕೊಡುಗೆ ನೀಡುತ್ತಾ ಬಂದಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮ್ಮೇಳನ ಕೇವಲ ಕಾರ್ಯಕ್ರಮಕ್ಕೆ ಸೀಮಿತಗೊಳ್ಳದೆ, ಜನರಲ್ಲಿ ಕನ್ನಡ ಭಾಷೆ ಜಾಗೃತಗೊಳಿಸುವ ಮತ್ತು ಭಾಷಾ ಸಾಹಿತ್ಯ ಪ್ರೀತಿ ಮೂಡಿಸುವಂತಾಗಬೇಕು. ಆಗ ಮಾತ್ರ ಸಮ್ಮೇಳನ ಅರ್ಥಪೂರ್ಣವಾಗುತ್ತದೆ ಎಂದರು.

ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ಕನ್ನಡ ಮಾತೃ ಭಾಷೆ ಮಾತ್ರವಲ್ಲ ಹೃದಯದ ಭಾಷೆ. ಅದು, ಸಂಸ್ಕೃತಿ-ಸಂಸ್ಕಾರದ ಪ್ರತೀಕ. ಇದಕ್ಕೆ ಮಾನವನನ್ನು ಮಾಧವನಾಗಿ ರೂಪಿಸುವ ಶಕ್ತಿಯಿದೆ’ ಎಂದು ಅಭಿಪ್ರಾಯಪಟ್ಟರು.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ, ‘ಕನ್ನಡ ಭಾಷೆ ನಮ್ಮ ಬದುಕು, ಜೀವನವೇ ಆಗಬೇಕು. ಕನ್ನಡಿಗರ ಸ್ವಾಭಿಮಾನ ಆಗಬೇಕು. ಆಗ, ನಮ್ಮ ಭಾಷೆ ಬಲಗೊಳ್ಳುತ್ತದೆ, ಶ್ರೀಮಂತಗೊಳ್ಳುತ್ತದೆ’ ಎಂದರು.

ಶಾಸಕ ಡಿ.ಎಸ್. ಸುರೇಶ್, ‘ಭಾಷೆ, ನೆಲ, ಜಲ ಉಳಿವಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ. ಸಮ್ಮೇಳನವನ್ನು ಗ್ರಾಮೀಣ ಭಾಗಕ್ಕೂ ಕೊಂಡೊಯ್ದಿರುವುದು ಉತ್ತಮ ಬೆಳವಣಿಗೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಅಧ್ಯಕ್ಷ ಸೂರಿ ಶ್ರೀನಿವಾಸ್, ‘ಕ್ಷೀಣಿಸುತ್ತಿರುವ ಕಥೆ, ಕವನ, ನಾಟಕ ಬರಹಗಾರರ, ಸಾಹಿತಿಗಳ ಸಂಖ್ಯೆಯನ್ನು ಹೆಚ್ಚಿಸಲು ತಾಲ್ಲೂಕು-ಜಿಲ್ಲಾ-ರಾಜ್ಯ ಮಟ್ಟದ ಕಥೆ-ಕವನ ಕಮ್ಮಟ ಆಯೋಜಿಸಲಾಗುತ್ತಿದೆ. ಪರಿಷತ್ತಿನ ವತಿಯಿಂದ ಅಂತರ ಜಿಲ್ಲಾ ಸಾಹಿತ್ಯ ಸಮ್ಮೇಳನ, ರಾಷ್ಟ್ರೀಯ ಮಟ್ಟದ ಜಾನಪದ ಸಮ್ಮೇಳನವನ್ನು ಸಾಣೇಹಳ್ಳಿಯಲ್ಲಿ ನಡೆಸುವ ಉದ್ದೇಶವಿದೆ’ ಎಂದು ತಿಳಿಸಿದರು.

ಪರಿಷತ್ತಿನ ತಾಲ್ಲೂಕು ಘಟಕ ಅಧ್ಯಕ್ಷ ಎಚ್. ಆರ್. ಚಂದ್ರಪ್ಪ, ‘ಪರ ಭಾಷಾ ವ್ಯಾಮೋಹದಿಂದ ಕನ್ನಡ ಭಾಷೆಗೆ ಆಪತ್ತು ಬಂದಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಿಪ್ಪಮ್ಮ, ಬುಕ್ಕಾಂಬುಧಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವರಲಕ್ಷ್ಮಿ, ಡಾ.ಮಲ್ಲೇಶಪ್ಪ, ಎಚ್.ಪುಟ್ಟಸ್ವಾಮಿ, ಎ.ಸಿ. ಚಂದ್ರಪ್ಪ, ಕೆ.ಸಿ. ಶಿವಮೂರ್ತಿ, ವಿಜಯ ಕುಮಾರಿ, ವಿಶಾಲಾಕ್ಷಮ್ಮ, ದೀಪಾ ಉಮೇಶ್ ಇದ್ದರು.

ಧ್ವಜಾರೋಹಣ: ಕನ್ನಡ ಸಾಹಿತ್ಯ ಸಮ್ಮೇಳನದ ಆರಂಭದಲ್ಲಿ ತಹಶೀಲ್ದಾರ್ ಸುಮಾ ಜೋಷಿ ರಾಷ್ಟ್ರಧ್ವಜ, ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎಚ್.ಆರ್. ಚಂದ್ರಪ್ಪ ಪರಿಷತ್ತು ಧ್ವಜ, ಪ್ರಾಂಶುಪಾಲ ರಾಜಣ್ಣ ನಾಡ ಧ್ವಜಾರೋಹಣ ನೆರವೇರಿಸಿದರು.

ಉದ್ಘಾಟನೆ: ಸಮ್ಮೇಳನದ ಮಹಾದ್ವಾರವನ್ನು ಸಿ.ಬಿ. ಓಂಕಾರಯ್ಯ, ಮಹಾಮಂಟಪವನ್ನು ಸಿ.ಎಸ್. ವಿರೂಪಾಕ್ಷಪ್ಪ ಉದ್ಘಾಟಿಸಿದರು.

ಸಹಕಾರ: ಸಮ್ಮೇಳನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆಶಾ ಕಾರ್ಯಕರ್ತರು, ಭಜನಾ ತಂಡ, ಶಿವ, ಬಸವೇಶ್ವರ ಕ್ರೀಡಾ ತಂಡ, ಗೆಳೆಯರ ಬಳಗ ರಂಗ ತಂಡ, ಪರಿಷತ್ತು ಮಹಿಳಾ ಘಟಕ, ಸ್ಫೂರ್ತಿ ಮಹಿಳಾ ಸಂಘ, ಚಿಕ್ಕಾನವಂಗಲ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಸಹಕಾರ ನೀಡಿದ್ದರು.

ಮೆರವಣಿಗೆ: ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಹಿರೇಖಾನವಂಗಲದ ವೀರಭದ್ರೇಶ್ವರ ದೇವಾಲಯದಲ್ಲಿ ಶಂಕರಲಿಂಗಪ್ಪ ಚಾಲನೆ ನೀಡಿದರು. ವೇದಿಕೆಯವರೆಗೂ ಸಾರೋಟಿನಲ್ಲಿ ಸಮ್ಮೇಳನಾಧ್ಯಕ್ಷ ಮಮತೇಶ್ ಅವರನ್ನು ಕರೆತರಲಾಯಿತು. ಮೆರವಣಿಗೆಗೆ ಚಿಟ್ಟೆ ಮೇಳ, ನಾದ ಸ್ವರ, ವೀರಗಾಸೆ, ಭಜನೆ, ಮಂಗಳ ವಾದ್ಯಗಳು ಮೆರಗು ತುಂಬಿದ್ದವು.

ಲಿಂಗ ತಾರತಮ್ಯತೆ ಜೀವಂತ: ಅಜ್ಜಂಪುರ ಶೃತಿ

ಅಜ್ಜಂಪುರ: ‘ಮಹಿಳೆಯು ಲಿಂಗ ತಾರತಮ್ಯದಿಂದ ಇಂದಿಗೂ ಬಳಲುತ್ತಿದ್ದಾಳೆ’ ಎಂದು ಲೇಖಕಿ ಅಜ್ಜಂಪುರ ಶೃತಿ ಅಸಮಾಧಾನ ವ್ಯಕ್ತಪಡಿಸಿದರು.

ಸಮ್ಮೇಳನದ ಮಹಿಳಾ ಗೋಷ್ಠಿಯಲ್ಲಿ ‘ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರ ಮುಂದಿನ ಸವಾಲುಗಳು’ ಕುರಿತು ಉಪನ್ಯಾಸ ನೀಡಿದರು.

ಕುಟುಂಬದಲ್ಲಿ ತಾಯಿ, ತಂಗಿ, ಮಡದಿ, ಗೆಳತಿಯಾಗಿ ಮಹತ್ತರ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೂ, ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಮಹಿಳೆ ಶೋಷಣೆಗೆ ಒಳಗಾಗುತ್ತಿರುವುದು ಶೋಚನೀಯ. ಜೀವನದಲ್ಲಿ ಎದುರಾಗುವ ಅನೇಕ ಸವಾಲುಗಳನ್ನು ಎದುರಿಸಲು ಮಹಿಳೆ ಸುಶಿಕ್ಷಿತವಾಗಬೇಕು, ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎಂದರು.

12ನೇ ಶತಮಾನದಲ್ಲಿ ಶರಣರು, ಮಹಿಳೆಯರ ಸಮಾನತೆ ಬಯಸಿದ್ದರು. ಸರ್ವರ ಸಮಾನತೆಗಾಗಿ ಸಾಮಾಜಿಕ ಕ್ರಾಂತಿ ನಡೆಸಿದ್ದರು. ಆದಾಗಿಯೂ ಲಿಂಗ ತಾರತಮ್ಯತೆ ಜೀವಂತವಾಗಿರುವುದು ವಿಷಾದನೀಯ. ಇನ್ನಾದರೂ ಗಂಡು-ಹೆಣ್ಣು ಇಬ್ಬರೂ ಸಮಾನರು ಎಂಬ ಅರಿವು ಮೂಡಬೇಕು ಎಂದು ಆಶಿಸಿದರು.

ಜಾನಪದ ವಿಶ್ವ ವ್ಯಾಪಿ: ಚಟ್ನಳ್ಳಿ ಮಹೇಶ್

ಅಜ್ಜಂಪುರ: ‘ಸಂಸ್ಕೃತಿ-ಸಂಸ್ಕಾರ ಕಟ್ಟಿಕೊಡುವ ಶಕ್ತಿ ಜಾನಪದಕ್ಕಿದೆ’ ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು.

ತಾಲ್ಲೂಕಿನ ಚಿಕ್ಕಾನವಂಗಲ ಗ್ರಾಮದಲ್ಲಿ ಶನಿವಾರ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಜನಪದ ಸಾಹಿತ್ಯ’ ಕುರಿತು ನೀಡಿದ ಉಪನ್ಯಾಸದಲ್ಲಿ ಅವರು ಮಾತನಾಡಿದರು. ‘ಜಾನಪದ ವಿಶ್ವ ವ್ಯಾಪಿಯಾಗಿದೆ. ಜಾನಪದರ ಬದುಕು ಇಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಿದೆ. ಮನುಷ್ಯ ಹೇಗೆ ಬದುಕಬೇಕು ಎಂಬುದನ್ನು ತಿಳಿಸುತ್ತಿದೆ. ಆರೋಗ್ಯ ಪೂರ್ಣ ಸಮಾಜ ಕಟ್ಟಿಕೊಳ್ಳಲು ಅಗತ್ಯವಿರುವ ಎಲ್ಲಾ ಆಯಾಮಗಳನ್ನು ಜಾನಪದ ಸಾಹಿತ್ಯ ನೀಡಿದೆ’ ಎಂದರು.

ಸಮ್ಮೇಳನದ ನಿರ್ಣಯಗಳು

ಸರ್ಕಾರ, ತಾಲ್ಲೂಕು ಆಡಳಿತದ ಎಲ್ಲಾ ಕಚೇರಿಗಳು ಅಜ್ಜಂಪುರದಲ್ಲಿ ಶೀಘ್ರ ಆರಂಭಿಸಬೇಕು

ಅಜ್ಜಂಪುರದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸಬೇಕು

ಅಜ್ಜಂಪುರ ಪಟ್ಟಣಕ್ಕೆ ಭದ್ರಾ ಕುಡಿಯುವ ನೀರು ಒದಗಿಸಬೇಕು

ಸರ್ಕಾರಿ ನೌಕರರು, ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಸೇರಿಸಬೇಕು

ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ₹ 2 ಲಕ್ಷ ಅನುದಾನ ನೀಡಬೇಕು

ತಾಲ್ಲೂಕಿನ ಗ್ರಾಮೀಣ ಪ್ರದೇಶದ ಹಳ್ಳಿಗಳಿಗೆ ಸರ್ಕಾರಿ ಬಸ್ ಸೇವೆ ಒದಗಿಸಬೇಕು

ಪ್ರಾಥಮಿಕ ಶಿಕ್ಷಣವು ಕನ್ನಡ ಮಾಧ್ಯಮದಲ್ಲಿಯೇ ನಡೆಯಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.